West Indies vs India, 2nd T20I: ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಸಾಧಾರಣ ಮೊತ್ತ ಪೇರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕ ಆಟಗಾರ ಶುಭ್ಮನ್ ಗಿಲ್ ಕೇವಲ 7 ರನ್ಗಳಿಸಿ ಅಲ್ಝಾರಿ ಜೋಸೆಫ್ಗೆ ವಿಕೆಟ್ ಒಪ್ಪಿಸಿದರು. ಇನ್ನು ಸೂರ್ಯಕುಮಾರ್ ಯಾದವ್ (1) ರನ್ ಕದಿಯುವ ಯತ್ನದಲ್ಲಿ ರನೌಟ್ ಆಗಿ ನಿರ್ಗಮಿಸಿದರು.
ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಇಶಾನ್ ಕಿಶನ್ 23 ಎಸೆತಗಳನ್ನು ಎದುರಿಸಿ ಕಲೆಹಾಕಿದ್ದು ಕೇವಲ 27 ರನ್ಗಳು ಮಾತ್ರ. ಇದರ ನಡುವೆ ಕಣಕ್ಕಿಳಿದ ಯುವ ಎಡಗೈ ದಾಂಡಿಗ ತಿಲಕ್ ವರ್ಮಾ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು.
ಆದರೆ ಸಂಜು ಸ್ಯಾಮ್ಸನ್ (7) ಸ್ಟಂಪ್ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಇದಾಗ್ಯೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ತಿಲಕ್ ವರ್ಮಾ 39 ಎಸೆತಗಳಲ್ಲಿ ತಮ್ಮ ಚೊಚ್ಚಲ ಅರ್ಧಶತಕ ಪೂರೈಸಿದರು.
ಇನ್ನು ಅರ್ಧಶತಕದ ಬೆನ್ನಲ್ಲೇ ಭರ್ಜರಿ ಹೊಡೆತಕ್ಕೆ ಮುಂದಾದ ತಿಲಕ್ ವರ್ಮಾ (51 ರನ್, 41 ಎಸೆತ) ಬೌಂಡರಿ ಲೈನ್ನಲ್ಲಿ ಕ್ಯಾಚಿತ್ತು ಹೊರ ನಡೆದರು. ಅಂತಿಮ ಓವರ್ಗಳ ವೇಳೆ ಜೊತೆಯಾದ ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಕೂಡ ರನ್ಗಳಿಸಲು ತಡಕಾಡಿದರು. ಅಲ್ಲದೆ 18 ಎಸೆತಗಳಲ್ಲಿ 24 ರನ್ಗಳಿಸಿದ ಪಾಂಡ್ಯ ಅಲ್ಝಾರಿ ಜೋಸೆಫ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಹಾಗೆಯೇ 20ನೇ ಓವರ್ನ ಮೊದಲ ಎಸೆತದಲ್ಲೇ ಅಕ್ಷರ್ ಪಟೇಲ್ (14) ಕೂಡ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯ ಓವರ್ನಲ್ಲಿ ಅರ್ಷದೀಪ್ ಸಿಂಗ್ ಬಾರಿಸಿದ ಫೋರ್ ಹಾಗೂ ರವಿ ಬಿಷ್ಣೋಯ್ ಸಿಡಿಸಿದ ಸಿಕ್ಸ್ನಿಂದ ಟೀಮ್ ಇಂಡಿಯಾ ಮೊತ್ತ 7 ವಿಕೆಟ್ ನಷ್ಟಕ್ಕೆ 152 ಕ್ಕೆ ಬಂದು ನಿಂತಿತು. ಅದರಂತೆ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಗೆಲ್ಲಲು 120 ಎಸೆತಗಳಲ್ಲಿ 153 ರನ್ ಕಲೆಹಾಕಬೇಕಿದೆ.
ಟೀಮ್ ಇಂಡಿಯಾ ಪ್ಲೇಯಿಂಗ್ 11: ಶುಭ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್.
ಇದನ್ನೂ ಓದಿ: Team India: ಶತಕ ಬಾರಿಸದೇ ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್ (ವಿಕೆಟ್ ಕೀಪರ್), ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್ (ನಾಯಕ), ಜೇಸನ್ ಹೋಲ್ಡರ್, ರೊಮಾರಿಯೋ ಶೆಫರ್ಡ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್.