ಭರ್ಜರಿ ಶತಕ ಸಿಡಿಸಿ ಮಿಂಚಿದ ಚೇತೇಶ್ವರ ಪೂಜಾರ
Royal London Cup 2023: ರಾಯಲ್ ಲಂಡನ್ ಕಪ್ ಟೂರ್ನಿಯಲ್ಲಿ ಚೇತೇಶ್ವರ ಪೂಜಾರ ಆಕರ್ಷಕ ಶತಕ ಬಾರಿಸಿದ್ದಾರೆ. ಇದಾಗ್ಯೂ ಈ ಪಂದ್ಯದಲ್ಲಿ ಸಸೆಕ್ಸ್ ತಂಡಕ್ಕೆ ಗೆಲುವು ದಕ್ಕಲಿಲ್ಲ.
Royal London Cup 2023: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ರಾಯಲ್ ಲಂಡನ್ ಕಪ್ ಏಕದಿನ ಟೂರ್ನಿಯಲ್ಲಿ ಚೇತೇಶ್ವರ ಪೂಜಾರ ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ನಾರ್ಥಾಂಪ್ಟನ್ ತಂಡದ ವಿರುದ್ಧ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಸೆಕ್ಸ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ಟಾಮ್ ಹೈನ್ಸ್ ಕೇವಲ 13 ರನ್ಗಳಿಗೆ ಔಟ್ ಆದರೆ, ಟಾಮ್ ಅಲ್ಸೋಪ್ 6 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಕಣಕ್ಕಿಳಿದ ಚೇತೇಶ್ವರ ಪೂಜಾರ ಆಕರ್ಷಕ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದರು. ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ್ದ ಪೂಜಾರ ಕ್ರೀಸ್ ಕಚ್ಚಿ ನಿಲ್ಲುತ್ತಿದ್ದಂತೆ ರನ್ ಗಳಿಕೆ ವೇಗವನ್ನು ಹೆಚ್ಚಿಸಿದರು. ಅಲ್ಲದೆ ಭರ್ಜರಿ ಶತಕ ಸಿಡಿಸಿ ಬ್ಯಾಟ್ ಮೇಲೆತ್ತಿದರು.
ಆದರೆ ಮತ್ತೊಂದೆಡೆ ಸಸೆಕ್ಸ್ ತಂಡವು ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಇದಾಗ್ಯೂ ತಮ್ಮ ಅನುಭವವನ್ನು ಧಾರೆಯೆರದ ಚೇತೇಶ್ವರ ಪೂಜಾರಾ 119 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 106 ರನ್ ಬಾರಿಸಿದರು. ಈ ಮೂಲಕ ಮಳೆಯಿಂದಾಗಿ ನಿಗದಿತವಾಗಿದ್ದ 45 ಓವರ್ಗಳಲ್ಲಿ ಸಸೆಕ್ಸ್ ತಂಡದ ಮೊತ್ತವನ್ನು 7 ವಿಕೆಟ್ ನಷ್ಟಕ್ಕೆ 240 ರನ್ಗಳಿಗೆ ತಂದು ನಿಲ್ಲಿಸಿದರು.
Great to have you back, @cheteshwar1! ?
Century ? pic.twitter.com/k7SfSu59si
— Sussex Cricket (@SussexCCC) August 6, 2023
241 ರನ್ಗಳ ಗುರಿ ಪಡೆದ ನಾರ್ಥಾಂಪ್ಟನ್ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ಪೃಥ್ವಿ ಶಾ (26) ವಿಫಲರಾದರು. ಅಲ್ಲದೆ 115 ರನ್ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಇದನ್ನೂ ಓದಿ: Tilak Varma: ಬ್ಯಾಕ್ ಟು ಬ್ಯಾಕ್ ದಾಖಲೆ ಬರೆದ ತಿಲಕ್ ವರ್ಮಾ
ಈ ವೇಳೆ ಕಣಕ್ಕಿಳಿದ ಇನ್ನು ಲೆವಿಸ್ 36 ರನ್ ಬಾರಿಸಿದರೆ, ರಿಕಾರ್ಡೊ 37 ರನ್ಗಳ ಕೊಡುಗೆ ನೀಡಿದರು. ಹಾಗೆಯೇ ಕೆಳಕ್ರಮಾಂಕದಲ್ಲಿ ಟಾಮ್ ಟೇಲರ್ ಅಜೇಯ 42 ರನ್ ಬಾರಿಸಿ 43.4 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ನಾರ್ಥಾಂಪ್ಟನ್ ತಂಡವು 3 ವಿಕೆಟ್ಗಳ ರೋಚಕ ಜಯ ತನ್ನದಾಗಿಸಿಕೊಂಡಿತು.