Updated on: Aug 06, 2023 | 10:33 PM
India vs West Indies 2nd T20: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ತಿಲಕ್ ವರ್ಮಾ ವಿಶೇಷ ದಾಖಲೆ ಬರೆದಿದ್ದಾರೆ. ಗಯಾನಾದಲ್ಲಿ ನಡೆದ ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯುವ ಎಡಗೈ ದಾಂಡಿಗ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು.
ಈ ಪಂದ್ಯದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ್ದ ತಿಲಕ್ ವರ್ಮಾ 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಅರ್ಧಶತಕದೊಂದಿಗೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ 20ನೇ ವಯಸ್ಸಿನಲ್ಲಿ ಹಾಫ್ ಸೆಂಚುರಿ ಸಿಡಿಸಿದ 2ನೇ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಈ ಸಾಧನೆ ಮಾಡಿದ್ದು ರೋಹಿತ್ ಶರ್ಮಾ. 2007 ರ ಟಿ20 ವಿಶ್ವಕಪ್ನಲ್ಲಿ ಹಿಟ್ಮ್ಯಾನ್ ಚೊಚ್ಚಲ ಅರ್ಧಶತಕ ಬಾರಿಸಿದ್ದರು. ಈ ಮೂಲಕ ತಮ್ಮ 20ನೇ ವಯಸ್ಸಿನಲ್ಲಿ ಹಾಫ್ ಸೆಂಚುರಿ ರೋಹಿತ್ ಶರ್ಮಾ ದಾಖಲೆ ಬರೆದಿದ್ದರು.
ಇದೀಗ ತಿಲಕ್ ವರ್ಮಾ ಕೂಡ 20ನೇ ವಯಸ್ಸಿನಲ್ಲೇ ತಮ್ಮ ಚೊಚ್ಚಲ ಅರ್ಧಶತಕ ಬಾರಿಸಿ ರೋಹಿತ್ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಲ್ಲದೆ ಈ ಸಾಧನೆಯೊಂದಿಗೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅರ್ಧಶತಕ ಸಿಡಿಸಿ 2ನೇ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
ಈ ದಾಖಲೆಯ ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿರುವುದು ರೋಹಿತ್ ಶರ್ಮಾ. 20 ವರ್ಷ, 143 ದಿನಗಳಾಗಿದ್ದಾಗ ಹಿಟ್ಮ್ಯಾನ್ ತಮ್ಮ ಚೊಚ್ಚಲ ಅರ್ಧಶತಕ ಬಾರಿಸಿದ್ದರು. ಇದೀಗ 20 ವರ್ಷ, 271 ದಿನಗಳಲ್ಲಿ ತಿಲಕ್ ವರ್ಮಾ ಹಾಫ್ ಸೆಂಚುರಿ ಸಿಡಿಸಿ ಈ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ.
ತಿಲಕ್ ವರ್ಮಾ ತಾವು ಆಡಿದ ಮೊದಲೆರಡು ಟಿ20 ಪಂದ್ಯಗಳಲ್ಲೂ ದಾಖಲೆ ಬರೆದಿರುವುದು ವಿಶೇಷ. ಅಂದರೆ ವಿಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ 177.27 ಸ್ಟ್ರೈಕ್ ರೇಟ್ನಲ್ಲಿ 39 ರನ್ ಬಾರಿಸಿದ್ದರು.
ಈ ಮೂಲಕ ಇಶಾನ್ ಕಿಶನ್ (175.00) ಹೆಸರಿನಲ್ಲಿದ್ದ ಚೊಚ್ಚಲ ಪಂದ್ಯದ ಅತ್ಯುತ್ತಮ ಸ್ಟ್ರೈಕ್ ರೇಟ್ ದಾಖಲೆಯನ್ನು ತಿಲಕ್ ವರ್ಮಾ ಮುರಿದಿದ್ದರು. ಇದೀಗ 2ನೇ ಟಿ20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಬ್ಯಾಕ್ ಟು ಬ್ಯಾಕ್ ದಾಖಲೆಗಳನ್ನು ಬರೆದಿರುವುದು ವಿಶೇಷ.