
West Indies vs India, 4th T20I: ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 4ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಟೀಮ್ ಇಂಡಿಯಾಗೆ ಕಠಿಣ ಗುರಿ ನೀಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ತಂಡದ ನಾಯಕ ರೋವ್‌ಮನ್ ಪೊವೆಲ್ ಬ್ಯಾಟಿಂಗ್ ಆಯ್ದುಕೊಂಡರು.
ಅದರಂತೆ ಇನಿಂಗ್ಸ್ ಆರಂಭಿಸಿದ ಕೈಲ್ ಮೇಯರ್ಸ್ ಹಾಗೂ ಬ್ರಾಂಡನ್ ಕಿಂಗ್ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದರು. ಪರಿಣಾಮ 2ನೇ ಓವರ್ ವೇಳೆಗೆ ತಂಡದ ಮೊತ್ತ 19 ಕ್ಕೇರಿತು. ಈ ಹಂತದಲ್ಲಿ ಅರ್ಷದೀಪ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ಮೇಯರ್ಸ್ (17) ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದರು.
ಇನ್ನು 18 ರನ್ಗಳಿಸಿ ಬ್ರಾಂಡನ್ ಕಿಂಗ್ ಕೂಡ ಅರ್ಷದೀಪ್ಗೆ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಪವರ್ಪ್ಲೇ ಮುಕ್ತಾಯದ ವೇಳೆಗೆ ವೆಸ್ಟ್ ಇಂಡೀಸ್ ತಂಡದ ಮೊತ್ತ 50 ರ ಗಡಿದಾಟಿತು.
ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಶಾಯ್ ಹೋಪ್ ಟೀಮ್ ಇಂಡಿಯಾ ಬೌಲರ್ಗಳ ಬೆಂಡೆತ್ತಿದರು. ಆದರೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕೋಲಸ್ ಪೂರನ್ (1) ರನ್ನು ಕುಲ್ದೀಪ್ ಯಾದವ್ ಪೆವಿಲಿಯನ್ಗೆ ಕಳುಹಿಸಿದರು.
ಇದರ ಬೆನ್ನಲ್ಲೇ ಕುಲ್ದೀಪ್ ಮ್ಯಾಜಿಕ್ ಡೆಲಿವರಿಗೆ ರೋವ್‌ಮನ್ ಪೊವೆಲ್ (1) ಕೂಡ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ್ದ ಶಾಯ್ ಹೋಪ್ 29 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 45 ರನ್ ಬಾರಿಸಿದ್ದರು.
ಈ ವೇಳೆ ದಾಳಿಗಿಳಿದ ಯುಜ್ವೇಂದ್ರ ಚಹಲ್ ಶಾಯ್ ಹೋಪ್ (45) ವಿಕೆಟ್ ಪಡೆದು ಅಮೂಲ್ಯ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ರೊಮಾರಿಯೊ ಶೆಫರ್ಡ್ (9) ಅಕ್ಷರ್ ಪಟೇಲ್ಗೆ ವಿಕೆಟ್ ಒಪ್ಪಿಸಿದರೆ, ಜೇಸನ್ ಹೋಲ್ಡರ್ (3) ಮುಖೇಶ್ ಕುಮಾರ್ ಎಸೆತದಲ್ಲಿ ಬೌಲ್ಡ್ ಆದರು.
ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಶಿಮ್ರಾನ್ ಹೆಟ್ಮೆಯರ್ ತಂಡಕ್ಕೆ ಆಸರೆಯಾಗಿ ನಿಂತರು. ಅಲ್ಲದೆ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ 39 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 61 ರನ್ ಬಾರಿಸಿದ ಹೆಟ್ಮೆಯರ್ ಕೊನೆಯ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
ಅರ್ಷದೀಪ್ ಸಿಂಗ್ ಎಸೆದ ಅಂತಿಮ ಓವರ್ನಲ್ಲಿ ಒಟ್ಟು 17 ರನ್ ಚಚ್ಚಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 178 ರನ್ ಕಲೆಹಾಕಿತು. ಈ ಮೂಲಕ ಟೀಮ್ ಇಂಡಿಯಾಗೆ 179 ರನ್ಗಳ ಕಠಿಣ ಗುರಿ ನೀಡಿದೆ.
ಟೀಮ್ ಇಂಡಿಯಾ ಪರ 4 ಓವರ್ಗಳಲ್ಲಿ 38 ರನ್ ನೀಡಿ ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆದರೆ, 4 ಓವರ್ಗಳಲ್ಲಿ 26 ರನ್ ನೀಡಿ ಕುಲ್ದೀಪ್ ಯಾದವ್ 2 ವಿಕೆಟ್ ಕಬಳಿಸಿದರು.
ಟೀಮ್ ಇಂಡಿಯಾ ಪ್ಲೇಯಿಂಗ್ 11: ಶುಭಮನ್ ಗಿಲ್ , ಯಶಸ್ವಿ ಜೈಸ್ವಾಲ್ , ಸೂರ್ಯಕುಮಾರ್ ಯಾದವ್ , ತಿಲಕ್ ವರ್ಮಾ , ಹಾರ್ದಿಕ್ ಪಾಂಡ್ಯ (ನಾಯಕ) , ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) , ಅಕ್ಷರ್ ಪಟೇಲ್ , ಕುಲದೀಪ್ ಯಾದವ್ , ಅರ್ಷದೀಪ್ ಸಿಂಗ್ , ಯುಜ್ವೇಂದ್ರ ಚಹಲ್ , ಮುಖೇಶ್ ಕುಮಾರ್.
ಇದನ್ನೂ ಓದಿ: Tilak Varma: ಬ್ಯಾಕ್ ಟು ಬ್ಯಾಕ್ ದಾಖಲೆ ಬರೆದ ತಿಲಕ್ ವರ್ಮಾ
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಶಾಯ್ ಹೋಪ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ರೊಮಾರಿಯೊ ಶೆಫರ್ಡ್, ಓಡಿಯನ್ ಸ್ಮಿತ್, ಅಕೇಲ್ ಹೋಸೇನ್, ಒಬೆಡ್ ಮೆಕಾಯ್.