ಟೆಂಬಾ ಬವುಮಾ ಹೆಸರಿನ ಅರ್ಥವೇನು?
ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡವು 207 ರನ್ಗಳಿಗೆ ಆಲೌಟ್ ಆಗಿದೆ. ಅತ್ತ ಮೊದಲ ಇನಿಂಗ್ಸ್ನಲ್ಲಿ 74 ರನ್ಗಳ ಹಿನ್ನಡೆ ಹೊಂದಿದ್ದ ಸೌತ್ ಆಫ್ರಿಕಾ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 282 ರನ್ಗಳ ಗುರಿ ಪಡೆದುಕೊಂಡಿದೆ. ಅದರಂತೆ ಮೂರನೇ ದಿನದಾಟದ ಅಂತ್ಯಕ್ಕೆ ಸೌತ್ ಆಫ್ರಿಕಾ 2 ವಿಕೆಟ್ ಕಳೆದುಕೊಂಡು 213 ರನ್ಗಳಿಸಿದ್ದು, ನಾಲ್ಕನೇ ದಿನದಾಟದಲ್ಲಿ 69 ರನ್ಗಳಿಸಿದರೆ ಚಾಂಪಿಯನ್ ಪಟ್ಟ ಅಲಂಕರಿಸಬಹುದು.

ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಸಖತ್ ಸುದ್ದಿಯಲ್ಲಿದ್ದಾರೆ. ಹೀಗೆ ಸುದ್ದಿಯಾಗಲು ಮುಖ್ಯ ಕಾರಣ ಭರ್ಜರಿ ಪ್ರದರ್ಶನ. ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಬವುಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ ಬೌಲರ್ಗಳ ವಿರುದ್ಧ ಸೆಟೆದು ನಿಂತು ಇದೀಗ ಸೌತ್ ಆಫ್ರಿಕಾ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದಾರೆ. ಈ ಮೂಲಕ ಟೆಂಬಾ ಬವುಮಾ ಸೌತ್ ಆಫ್ರಿಕಾ ಕ್ರಿಕೆಟ್ ಪ್ರೇಮಿಗಳಿಗೆ ಹೊಸ ಭರವಸೆಯನ್ನು ಹುಟ್ಟುಹಾಕಿದ್ದಾರೆ. ವಿಶೇಷ ಎಂದರೆ ಟೆಂಬಾ ಬವುಮಾ ಅವರ ಹೆಸರಿನ ಅರ್ಥ ಕೂಡ ಭರವಸೆ.
ಈ ಬಗ್ಗೆ ಮಾತನಾಡಿದ ಟೆಂಬಾ ಬವುಮಾ, ನನಗೆ ಅಜ್ಜಿ ಟೆಂಬಾ ಅಂತ ಹೆಸರಿಟ್ಟರು. ಈ ಹೆಸರಿನ ಅರ್ಥ ಭರವಸೆ. ಒಂದು ಸಮುದಾಯದ ಭರವಸೆ. ದೇಶದ ಭರವಸೆ. ಒಂದು ಬಲಿಷ್ಠ ತಂಡವನ್ನು ಎದುರಿಸುವಾಗ ಬೇಕಿರುವುದೇ ಭರವಸೆ. ಆ ಭರವಸೆಯೇ ಟೆಂಬಾ. ಇನ್ನು ಬವುಮಾ ಎಂಬುದು ಉಪನಾಮ.
ಅದರಂತೆ ಇದೀಗ ಟೆಂಬಾ ಬವುಮಾ ಸೌತ್ ಆಫ್ರಿಕಾ ತಂಡಕ್ಕೆ ಹೊಸ ಭರವಸೆ ಹುಟ್ಟುಹಾಕಿದ್ದಾರೆ. ಈ ಭರವಸೆ ಈಡೇರಲು ಸೌತ್ ಆಫ್ರಿಕಾ ತಂಡ ಆಸ್ಟ್ರೇಲಿಯಾ ವಿರುದ್ಧ 69 ರನ್ಗಳನ್ನು ಕಲೆಹಾಕಬೇಕಿದೆ.
ಹೊಸ ಭರವಸೆ:
ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಗೆಲ್ಲಲು ಸೌತ್ ಆಫ್ರಿಕಾ ತಂಡಕ್ಕೆ 69 ರನ್ಗಳ ಅವಶ್ಯಕತೆಯಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಪ್ರಥಮ ಇನಿಂಗ್ಸ್ನಲ್ಲಿ 212 ರನ್ ಕಲೆಹಾಕಿತು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಸೌತ್ ಆಫ್ರಿಕಾ ತಂಡವು ಕೇವಲ 138 ರನ್ಗಳಿಗೆ ಆಲೌಟ್ ಆಗಿದ್ದರು. ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು 207 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದೆ.
ಮೊದಲ ಇನಿಂಗ್ಸ್ನಲ್ಲಿನ 74 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡವು ಮೂರನೇ ದಿನದಾಟದ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 213 ರನ್ ಕಲೆಹಾಕಿದೆ.
ಸದ್ಯ ಕ್ರೀಸ್ನಲ್ಲಿ ಶತಕ ಸಿಡಿಸಿರುವ ಐಡೆನ್ ಮಾರ್ಕ್ರಾಮ್ (102) ಹಾಗೂ ಟೆಂಬಾ ಬವುಮಾ (65) ಬ್ಯಾಟಿಂಗ್ ಕಾಯ್ದುಕೊಂಡಿದ್ದು, ನಾಲ್ಕನೇ ದಿನದಾಟದಲ್ಲಿ 69 ರನ್ ಬಾರಿಸಿದರೆ ಸೌತ್ ಆಫ್ರಿಕಾ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ.
ಈ ಮೂಲಕ 27 ವರ್ಷಗಳ ಬಳಿಕ ಸೌತ್ ಆಫ್ರಿಕಾ ತಂಡ ಐಸಿಸಿ ಟ್ರೋಫಿ ಎತ್ತಿ ಹಿಡಿಯುವ ವಿಶ್ವಾಸದಲ್ಲಿದೆ. ಇದಕ್ಕೂ ಮುನ್ನ ಸೌತ್ ಆಫ್ರಿಕಾ ತಂಡ ಐಸಿಸಿ ಟ್ರೋಫಿ ಗೆದ್ದಿದ್ದು 1998 ರಲ್ಲಿ. ಐಸಿಸಿ ನಾಕೌಟ್ (ಚಾಂಪಿಯನ್ಸ್ ಟ್ರೋಫಿ) ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಸೌತ್ ಆಫ್ರಿಕಾ ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿ ಹಿಡಿದಿತ್ತು.
ಇದನ್ನೂ ಓದಿ: ಬವುಮಾ ಭರ್ಜರಿ ಬ್ಯಾಟಿಂಗ್ಗೆ ಬಾಬರ್ ವಿಶ್ವ ದಾಖಲೆಯೇ ಬ್ರೇಕ್
ಇದೀಗ 27 ವರ್ಷಗಳ ಬಳಿಕ ಸೌತ್ ಆಫ್ರಿಕಾ ತಂಡ ಮತ್ತೊಮ್ಮೆ ಟ್ರೋಫಿ ಗೆಲ್ಲುವ ಸನಿಹದಲ್ಲಿದೆ. ಈ ಮೂಲಕ ಟೆಂಬಾ ಬವುಮಾ ಹೊಸ ಇತಿಹಾಸ ನಿರ್ಮಿಸಲಿದ್ದಾರಾ ಕಾದು ನೋಡಬೇಕಿದೆ.
