AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final: ಭಾರತದ ಕನಸಿಗೆ ಇಂಗ್ಲೆಂಡ್ ಕೊಳ್ಳಿ

WTC final: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಈವರೆಗೆ 3 ಫೈನಲ್ ಪಂದ್ಯಗಳು ನಡೆದಿವೆ. ಈ ಮೂರು ಪಂದ್ಯಗಳಿಗೆ ಆತಿಥ್ಯವಹಿಸಿದ್ದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್. ಇದೀಗ ಮುಂದಿನ ಮೂರು ಫೈನಲ್ ಪಂದ್ಯಗಳ ಆಯೋಜನೆಯ ಹಕ್ಕುಗಳನ್ನು ಇಸಿಬಿಗೆ ನೀಡಲು ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಆಸಕ್ತಿ ತೋರಿದೆ.

WTC Final: ಭಾರತದ ಕನಸಿಗೆ ಇಂಗ್ಲೆಂಡ್ ಕೊಳ್ಳಿ
ಸಾಂದರ್ಭಿಕ ಚಿತ್ರ
ಝಾಹಿರ್ ಯೂಸುಫ್
|

Updated on: Jun 14, 2025 | 12:23 PM

Share

2027ರ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಫೈನಲ್ ಪಂದ್ಯ ಎಲ್ಲಿ ನಡೆಯಲಿದೆ ಎಂಬ ಪ್ರಶ್ನೆಗೆ ಸದ್ಯ ಕೇಳಿ ಬರುತ್ತಿರುವ ಉತ್ತರ ಇಂಗ್ಲೆಂಡ್. ಈ ಹಿಂದೆ 2027ರ WTC ಫೈನಲ್​ಗೆ ಭಾರತ ಆತಿಥ್ಯವಹಿಸಲಿದೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಇಂತಹದೊಂದು ಸುದ್ದಿ ಹುಟ್ಟಿಕೊಳ್ಳಲು ಮುಖ್ಯ ಕಾರಣ ಫೈನಲ್ ಪಂದ್ಯದ ಆಯೋಜನೆಗೆ ಬಿಸಿಸಿಐ ತೆರೆಮರೆಯ ಪ್ರಯತ್ನ ನಡೆಸಿದ್ದು. ಆದರೀಗ ಮುಂದಿನ ಮೂರು ಆವೃತ್ತಿಗಳ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಫೈನಲ್ ಪಂದ್ಯವನ್ನು ಇಂಗ್ಲೆಂಡ್​ನಲ್ಲೇ ಆಯೋಜಿಸಲು ಐಸಿಸಿ ಆಸಕ್ತಿ ತೋರಿದೆ ಎಂದು ವರದಿಯಾಗಿದೆ.

ಬ್ರಿಟಿಷ್ ಪತ್ರಿಕೆ ದಿ ಟೆಲಿಗ್ರಾಫ್‌ನ ವರದಿಯ ಪ್ರಕಾರ, ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಸರಣಿಯ ಮುಂದಿನ 3 ಫೈನಲ್‌ಗಳು ಇಂಗ್ಲೆಂಡ್‌ನಲ್ಲಿ ನಡೆಯಲಿವೆ. ಪ್ರಸ್ತುತ ನಡೆಯುತ್ತಿರುವ WTC ಫೈನಲ್ ಪಂದ್ಯಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೀಗಾಗಿ ಮುಂಬರುವ ಫೈನಲ್​ ಪಂದ್ಯಗಳನ್ನೂ ಇಂಗ್ಲೆಂಡ್​ನಲ್ಲೇ ಆಯೋಜಿಸಲು ಐಸಿಸಿ ಚಿಂತಿಸಿದೆ.

ಇದಕ್ಕೂ ಮುನ್ನ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಪಂದ್ಯಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎನ್ನಲಾಗಿತ್ತು. ಇದಕ್ಕೆ ಮುಖ್ಯ ಕಾರಣ ಭಾರತ ತಂಡವು ಈ ಬಾರಿ ಫೈನಲ್​ಗೆ ಪ್ರವೇಶಿಸದಿರುವುದು. ಟೀಮ್ ಇಂಡಿಯಾ ಫೈನಲ್​ನಲ್ಲಿ ಇಲ್ಲದಿದ್ದರೆ, ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಪ್ರೇಕ್ಷಕರ ಅಭಾವ ಎದುರಾಗಲಿದೆ ಎಂದು ಅಂದಾಜಿಸಲಾಗಿತ್ತು.

ಆದರೆ ಇಂಗ್ಲೆಂಡ್​ನ ಕ್ರಿಕೆಟ್ ಪ್ರೇಮಿಗಳು ಈ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದ್ದಾರೆ. ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವಣ ಫೈನಲ್ ಫೈಟ್ ವೀಕ್ಷಿಸಲು ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ್ದಾರೆ. ಅಂದರೆ ಇಂಗ್ಲೆಂಡ್ ತಂಡವು ಫೈನಲ್​ನಲ್ಲಿ ಇಲ್ಲದಿದ್ದರೂ, ಇಂಗ್ಲೆಂಡ್​ನ ಕ್ರಿಕೆಟ್ ಪ್ರೇಮಿಗಳಿಂದ ಉತ್ತಮ ಸ್ಪಂದನೆ ದೊರೆತಿದ್ದು, ಹೀಗಾಗಿ ಮುಂಬರುವ WTC ಫೈನಲ್ ಪಂದ್ಯಗಳನ್ನೂ ಸಹ ಆಂಗ್ಲರ ನಾಡಿನಲ್ಲೇ ಆಯೋಜಿಸುವ ಸಾಧ್ಯತೆಯಿದೆ.

ಹ್ಯಾಟ್ರಿಕ್ ಫೈನಲ್:

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯಲ್ಲಿ ಈವರೆಗೆ ಮೂರು ಫೈನಲ್​ ಆಡಲಾಗಿದೆ. 2021 ರಲ್ಲಿ ನಡೆದ ಮೊದಲ WTC ಫೈನಲ್ ಪಂದ್ಯಕ್ಕೆ ಇಂಗ್ಲೆಂಡ್‌ನ ಸೌತಾಂಪ್ಟನ್‌ ಆತಿಥ್ಯವಹಿಸಿತ್ತು. ಇನ್ನು 2023ರ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವನ್ನು ಲಂಡನ್‌ನಲ್ಲಿರುವ ಐತಿಹಾಸಿಕ ಮೈದಾನವಾದ ದಿ ಓವಲ್‌ನಲ್ಲಿ ಆಯೋಜಿಸಲಾಗಿತ್ತು.

ಇದೀಗ ಮೂರನೇ ಫೈನಲ್ ಪಂದ್ಯವು ಕ್ರಿಕೆಟ್ ಕಾಶಿ ಲಾರ್ಡ್ಸ್​ ಮೈದಾನದಲ್ಲಿ ಜರುಗುತ್ತಿದೆ. ಈ ಮೂಲಕ ಇಂಗ್ಲೆಂಡ್ ಹ್ಯಾಟ್ರಿಕ್ ಫೈನಲ್ ಆಯೋಜಿಸುವಲ್ಲಿ ಯಶಸ್ವಿಯಾಗಿದೆ.

ಬಿಸಿಸಿಐ ಬೇಡಿಕೆ:

2027ರ ಫೈನಲ್ ಪಂದ್ಯದ ಆಯೋಜನೆಗೆ ಭಾರತೀಯ ಕ್ರಿಕೆಟ್ ಮಂಡಳಿ ಬೇಡಿಕೆಯಿಟ್ಟಿತ್ತು. ಈ ಬೇಡಿಕೆಯನ್ನು ತಿರಸ್ಕರಿಸಲಾಗಿದೆ ಎಂದು ವರದಿಯಾಗಿದೆ. ಇದಾಗ್ಯೂ 2029ರ ಫೈನಲ್ ಪಂದ್ಯಕ್ಕಾಗಿ ಬಿಸಿಸಿಐ ಮತ್ತೊಮ್ಮೆ ತೆರೆಮರೆಯ ಪ್ರಯತ್ನ ನಡೆಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಬವುಮಾ ಭರ್ಜರಿ ಬ್ಯಾಟಿಂಗ್​ಗೆ ಬಾಬರ್ ವಿಶ್ವ ದಾಖಲೆಯೇ ಬ್ರೇಕ್

ಆದರೆ ಅತ್ತ ಐಸಿಸಿ ಮುಂದಿನ ಮೂರು ಫೈನಲ್ ಪಂದ್ಯಗಳನ್ನು ಇಂಗ್ಲೆಂಡ್​ನಲ್ಲೇ ಆಯೋಜಿಸಲು ಆಸಕ್ತಿ ತೋರಿರುವ ಕಾರಣ, ಭಾರತವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯವನ್ನು ಆಯೋಜಿಸಲು ಕನಿಷ್ಠ 2033 ರವರೆಗೆ ಕಾಯಬೇಕಾಗಿ ಬರಬಹುದು.