
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ 67ನೇ ಪಂದ್ಯವು ಹೈಡ್ರಾಮಾಗೆ ಸಾಕ್ಷಿಯಾಗಿದೆ. ಈ ಹೈಡ್ರಾಮಾದ ಪಾತ್ರಧಾರಿಗಳು ವಿರಾಟ್ ಕೊಹ್ಲಿ ಮತ್ತು ಟ್ರಾವಿಸ್ ಹೆಡ್. ಇಬ್ಬರ ನಡುವೆ ಪಂದ್ಯದ ವೇಳೆ ಶುರುವಾದ ವಾಕ್ಸಮರ ಪಂದ್ಯ ಮುಗಿದ ಬಳಿಕ ಕೂಡ ಮುಂದುವರೆದದ್ದು ವಿಪರ್ಯಾಸ. ಅಷ್ಟಕ್ಕೂ ವಿರಾಟ್ ಕೊಹ್ಲಿ – ಟ್ರಾವಿಸ್ ಹೆಡ್ ಜಟಾಪಟಿಗೆ ಕಾರಣವೇನು? ಎಂದು ನೋಡುವುದಾದರೆ…
ವಿರಾಟ್ ಕೊಹ್ಲಿಯ ಸಂಭ್ರಮ: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ಪರ ಟ್ರಾವಿಸ್ ಹೆಡ್ (26) ರಾಸಿಖ್ ಸಲಾಮ್ ಅವರ ಯಾರ್ಕರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆಗಿದ್ದರು. ಇತ್ತ ಔಟಾಗಿ ಹೊರ ನಡೆಯುತ್ತಿದ್ದ ಹೆಡ್ ಅವರ ಮುಂದೆ ಆಕ್ರೋಶಭರಿತರಾಗಿ ವಿರಾಟ್ ಕೊಹ್ಲಿ ಸಂಭ್ರಮಿಸಿದ್ದರು. ಇದಾಗ್ಯೂ ಟ್ರಾವಿಸ್ ಹೆಡ್ ಯಾವುದೇ ತಿರುಗೇಟು ನೀಡಿರಲಿಲ್ಲ.
ಹೆಡ್ ಸವಾಲು: 256 ರನ್‌ಗಳ ಕಠಿಣ ಗುರಿ ಬೆನ್ನತ್ತಲು ಬಂದ ವಿರಾಟ್ ಕೊಹ್ಲಿಗೆ ಆಕ್ರಮಣಕಾರಿಯಾಗಿ ಆಡುವಂತೆ ಟ್ರಾವಿಸ್ ಹೆಡ್ ಸವಾಲು ಹಾಕಿದ್ದಾರೆ. ಅಂದರೆ ಈ ಪಂದ್ಯದಲ್ಲಿ ಕೊಹ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ್ದರು. ಈ ವೇಳೆ ಬಿಗ್ ಶಾಟ್ ಆಡು ನೋಡೋಣ ಎಂದು ಹೆಡ್ ಕೆಣಕಿದ್ದಾರೆ.
ಕೊಹ್ಲಿ ತಿರುಗೇಟು: ಟ್ರಾವಿಸ್ ಹೆಡ್ ಸವಾಲಿಗೆ ತಿರುಗೇಟು ನೀಡಿದ ವಿರಾಟ್ ಕೊಹ್ಲಿ, “ಈಗ ನೀನು ಇಂಪ್ಯಾಕ್ಟ್ ಸಬ್ ಆಟಗಾರ ಅಲ್ಲ, ಬಂದು ಎರಡು ಓವರ್ ಬೌಲಿಂಗ್ ಮಾಡು” ಎಂದು ವ್ಯಂಗ್ಯವಾಡಿದ್ದಾರೆ.
ಹೆಡ್ ಕಿಚಾಯಿಸುವಿಕೆ: ಈ ಮಾತಿನ ಚಕಮಕಿ ಮುಕ್ತಾಯದ ಬೆನ್ನಲ್ಲೇ ವಿರಾಟ್ ಕೊಹ್ಲಿ(15) ಔಟ್ ಆಗಿದ್ದಾರೆ. ಇತ್ತ ಕೊಹ್ಲಿ ಔಟಾಗಿ ಪೆವಿಲಿಯನ್‌ಗೆ ಮರಳುವಾಗ ಹೆಡ್, “ಫ್ರೆಂಡ್, ನಾನು ಬೌಲಿಂಗ್ ಮಾಡಲು ಬರುವ ಮುನ್ನವೇ ನೀನು ಔಟ್ ಆಗಿ ಹೋದೆ!” ಎಂದು ಕಿಚಾಯಿಸಿದ್ದಾರೆ.
ಈ ವಾಕ್ಸಮರ ಇಲ್ಲಿಗೆ ಮುಗಿಯಬೇಕಿತ್ತು. ಆದರೆ ವಿರಾಟ್ ಕೊಹ್ಲಿ ಪಂದ್ಯದ ನಂತರ ಕೂಡ ಈ ಕೋಪ-ತಾಪವನ್ನು ಮುಂದುವರೆಸಿದ್ದರು.
ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ 55 ರನ್‌ಗಳ ಭರ್ಜರಿ ಜಯ ಸಾಧಿಸಿದ ನಂತರ, ಉಭಯ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡಲು ಮೈದಾನಕ್ಕೆ ಬಂದರು. ಈ ವೇಳೆ ಟ್ರಾವಿಸ್ ಹೆಡ್ ಕೈ ಚಾಚಿದರೂ, ವಿರಾಟ್ ಕೊಹ್ಲಿ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಮುಖ ತಿರುಗಿಸಿಕೊಂಡು ನೇರವಾಗಿ ಪ್ಯಾಟ್ ಕಮಿನ್ಸ್ ಕಡೆಗೆ ನಡೆದು ಹೋದರು. ಅಂದರೆ ಹೆಡ್ಗೆ ಶೇಕ್ ಹ್ಯಾಂಡ್ ಮಾಡಲು ನಿರಾಕರಿಸಿದರು.
ಇದೀಗ ವಿರಾಟ್ ಕೊಹ್ಲಿಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಅಲ್ಲದೆ ಈ ವಿಡಿಯೋಗೆ ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಕ್ಲಾಸೆನ್ ಕ್ಲಾಸ್ಗೆ ಹಳೆಯ ದಾಖಲೆ ಧೂಳೀಪಟ
ಒಟ್ಟಾರೆಯಾಗಿ ಹೇಳುವುದಾದರೆ, ಕ್ರಿಕೆಟ್ ಮೈದಾನದಲ್ಲಿ ಆಟಗಾರರ ನಡುವೆ ಆವೇಶ, ಆಕ್ರೋಶಗಳು ಸಹಜ. ಆದರೆ ಪಂದ್ಯ ಮುಗಿದ ಬಳಿಕ ಪರಸ್ಪರ ಹಸ್ತಲಾಘವ ಮಾಡುವುದು ಕೇವಲ ಶಿಷ್ಟಾಚಾರವಲ್ಲ, ಅದು ಕ್ರೀಡೆಗೆ ನೀಡುವ ಗೌರವ. ವಿರಾಟ್ ಕೊಹ್ಲಿ ಮತ್ತು ಟ್ರಾವಿಸ್ ಹೆಡ್ ನಡುವಿನ ಈ ಮುನಿಸು ಐಪಿಎಲ್ ಇತಿಹಾಸದ ಕಹಿ ಘಟನೆಗಳ ಸಾಲಿಗೆ ಸೇರಿದ್ದರೂ, ಮುಂಬರುವ ಪಂದ್ಯಗಳಲ್ಲಿ ಇಬ್ಬರೂ ಹಳೆಯದ್ದನ್ನು ಮರೆತು ಕ್ರೀಡಾ ಸ್ಫೂರ್ತಿ ಮೆರೆಯಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.
Published On - 10:44 am, Sat, 23 May 26