James Anderson: ಜೇಮ್ಸ್ ಅ್ಯಂಡರ್ಸನ್ ಯಾಕೆ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎಂಬುದಕ್ಕೆ ಇಲ್ಲಿದೆ ಉತ್ತರ
James Anderson: ಈ ದಶಕ ಕಂಡಂತಹ ಅತ್ಯುತ್ತಮ ರೆಡ್ ಬಾಲ್ ಬೌಲರ್ ಹಾಗೂ ಸಾರ್ವಕಾಲಿಕ ಶ್ರೇಷ್ಠ ವೇಗಿಗಳಲ್ಲಿ ಒಬ್ಬರು ಎಂದು ಜೇಮ್ಸ್ ಅ್ಯಂಡರ್ಸನ್ ಅವರನ್ನು ಬಣ್ಣಿಸಲಾಗುತ್ತದೆ.
James Anderson
Follow us on
ಇಂಗ್ಲೆಂಡ್ ವೇಗಿ ಜೇಮ್ಸ್ ಅ್ಯಂಡರ್ಸನ್ (James Anderson) ಅವರಿಗೆ ಇಂದು 41ನೇ ವರ್ಷದ ಸಂಭ್ರಮ. 20ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ಅ್ಯಂಡರ್ಸನ್ ತಮ್ಮ 41ನೇ ವಯಸ್ಸಿನಲ್ಲೂ ಕರಾರುವಾಕ್ ದಾಳಿ ಮೂಲಕ ಬ್ಯಾಟರ್‌ಗಳನ್ನು ಕಂಗೆಡಿಸುತ್ತಿರುವುದು ವಿಶೇಷ. ಅಷ್ಟೇ ಅಲ್ಲದೆ ಕಳೆದ 2 ದಶಕಗಳಿಂದ ಟೆಸ್ಟ್ ಕ್ರಿಕೆಟ್ ಅಂಗಳದಲ್ಲಿ ಕಿರೀಟವಿಲ್ಲದ ಅಧಿಪತಿಯಾಗಿ ಜೇಮ್ಸ್ ಅ್ಯಂಡರ್ಸನ್ ರಾಜ್ಯಭಾರ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಕೆಳಗಿನ ಅಂಕಿ ಅಂಶಗಳು…
ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ವೇಗದ ಬೌಲರ್ ಎಂಬ ವಿಶ್ವ ದಾಖಲೆ ಇದೀಗ ಜೇಮ್ಸ್ ಅ್ಯಂಡರ್ಸನ್ ಹೆಸರಿನಲ್ಲಿದೆ. ಒಟ್ಟು 690 ವಿಕೆಟ್ ಕಬಳಿಸಿ ಇಂಗ್ಲೆಂಡ್ ವೇಗಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಇದಲ್ಲದೇ 41ನೇ ವಯಸ್ಸಿನಲ್ಲೂ ಮೈದಾನದಲ್ಲಿ ಕಾಣಿಸಿಕೊಳ್ಳುವ ಮೂಲಕ ಇಂಗ್ಲೆಂಡ್ ಪರ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ವಿಶೇಷ ದಾಖಲೆಯನ್ನು ಕೂಡ ಅ್ಯಂಡರ್ಸನ್ ತಮ್ಮದಾಗಿಸಿಕೊಂಡಿದ್ದಾರೆ. ಸದ್ಯ 183ನೇ ಟೆಸ್ಟ್ ಪಂದ್ಯದ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಟೆಸ್ಟ್ ಆಡುವ ಎಲ್ಲಾ ಪ್ರಮುಖ ರಾಷ್ಟ್ರಗಳ ವಿರುದ್ಧ 50 ವಿಕೆಟ್‌ಗಳನ್ನು ಪಡೆದ ಮೊದಲ ವೇಗಿ ಎಂಬ ವಿಶ್ವ ದಾಖಲೆ ಅ್ಯಂಡರ್ಸನ್ ಹೆಸರಿನಲ್ಲಿದೆ. ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ವೇಗಿ ಈ ಸಾಧನೆ ಮಾಡಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ವಿಶ್ವ ದಾಖಲೆ ಕೂಡ ಜೇಮ್ಸ್ ಅ್ಯಂಡರ್ಸನ್ ಹೆಸರಿನಲ್ಲಿದೆ. ಜಿಮ್ಮಿ ಇದುವರೆಗೆ 690 ವಿಕೆಟ್ ಕಬಳಿಸಿದ್ದಾರೆ. ಈ ಪಟ್ಟಿಯಲ್ಲಿ ಮುತ್ತಯ್ಯ ಮುರಳೀಧರನ್ ಹಾಗೂ ಶೇನ್ ವಾರ್ನ್ ಮೊದಲೆರಡು ಸ್ಥಾನಗಳಲ್ಲಿದ್ದಾರೆ.
ಇನ್ನು ಭಾರತ (139), ಆಸ್ಟ್ರೇಲಿಯಾ (117), ಮತ್ತು ಸೌತ್ ಆಫ್ರಿಕಾ (103) ವಿರುದ್ಧ 100 ವಿಕೆಟ್‌ಗಳನ್ನು ಕಬಳಿಸಿದ ವಿಶೇಷ ದಾಖಲೆ ಕೂಡ ಜೇಮ್ಸ್ ಅ್ಯಂಡರ್ಸನ್ ಹೆಸರಿನಲ್ಲಿದೆ. ಅಂದರೆ ಈ ಮೂರು ತಂಡಗಳ ಮೂಲಕವೇ ಅ್ಯಂಡರ್ಸನ್ 300 ಕ್ಕೂ ಅಧಿಕ ವಿಕೆಟ್ಗಳ ಸಾಧನೆ ಮಾಡಿದ್ದಾರೆ.
ಅತ್ಯುತ್ತಮ ಬ್ಯಾಟರ್‌ಗಳನ್ನು ಹಲವಾರು ಬಾರಿ ವಜಾಗೊಳಿಸಿದ ವಿಶೇಷ ದಾಖಲೆ ಕೂಡ ಜೇಮ್ಸ್ ಅ್ಯಂಡರ್ಸನ್ ಹೆಸರಿನಲ್ಲಿದೆ. ಸಚಿನ್ ತೆಂಡೂಲ್ಕರ್ (9 ಬಾರಿ), ಚೇತೇಶ್ವರ ಪೂಜಾರ (12), ಡೇವಿಡ್ ವಾರ್ನರ್ (10), ಮೈಕಲ್ ಕ್ಲಾರ್ಕ್ (9), ಜಾಕ್ವೆಸ್ ಕಾಲಿಸ್ (7), ಮತ್ತು ಕುಮಾರ್ ಸಂಗಕ್ಕಾರ (7), ವಿರಾಟ್ ಕೊಹ್ಲಿ (7), ಸ್ಟೀವ್ ಸ್ಮಿತ್ (8), ಮತ್ತು ಕೇನ್ ವಿಲಿಯಮ್ಸನ್ (9) ಅವರನ್ನು ತಮ್ಮ ಕರಾರುವಾಕ್ ದಾಳಿಯಿಂದ ಕೆಡವಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವೇಗದ ಬೌಲರ್ ಎಂಬ ದಾಖಲೆ ಕೂಡ ಜೇಮ್ಸ್ ಅ್ಯಂಡರ್ಸನ್ (976) ಹೆಸರಿನಲ್ಲಿದೆ. ಹಾಗೆಯೇ ಅತ್ಯಧಿಕ ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್ ಎಂಬ ವಿಶ್ವ ದಾಖಲೆಯನ್ನು ಕೂಡ ಬರೆದಿದ್ದಾರೆ.
ಈ ಎಲ್ಲಾ ಕಾರಣಗಳಿಂದಾಗಿಯೇ ಈ ದಶಕ ಕಂಡಂತಹ ಅತ್ಯುತ್ತಮ ರೆಡ್ ಬಾಲ್ ಬೌಲರ್ ಹಾಗೂ ಸಾರ್ವಕಾಲಿಕ ಶ್ರೇಷ್ಠ ವೇಗಿಗಳಲ್ಲಿ ಒಬ್ಬರು ಎಂದು ಜೇಮ್ಸ್ ಅ್ಯಂಡರ್ಸನ್ ಅವರನ್ನು ಬಣ್ಣಿಸಲಾಗುತ್ತದೆ.