ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಗಾಗಿ ಈಗಾಗಲೇ 7 ತಂಡಗಳ ಘೋಷಣೆಯಾಗಿದೆ. ಇದಾಗ್ಯೂ ಆತಿಥೇಯ ಪಾಕಿಸ್ತಾನ್ ತಮ್ಮ ತಂಡವನ್ನು ಪ್ರಕಟಿಸಿಲ್ಲ. ಐಸಿಸಿ ಜನವರಿ 12 ರಂದು ಗಡುವು ವಿಧಿಸಿದ್ದರೂ, ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಇನ್ನೂ ಸಹ ತನ್ನ 15 ಸದಸ್ಯರ ಬಳಗವನ್ನು ಪ್ರಕಟಿಸದಿರಲು ಮುಖ್ಯ ಕಾರಣ ಯುವ ಆಟಗಾರನ ಗಾಯ.
ಹೌದು, ಪಾಕಿಸ್ತಾನ್ ತಂಡದ ಯುವ ಆರಂಭಿಕ ದಾಂಡಿಗ ಸೈಮ್ ಅಯ್ಯೂಬ್ ಕಣಕಾಲು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡು ಅವರು ಮೈದಾನ ತೊರೆದಿದ್ದರು.
ಇದೀಗ ವೈದ್ಯಕೀಯ ನಿಗಾದಲ್ಲಿರುವ ಅವರ ಫಿಟ್ನೆಸ್ ರಿಪೋರ್ಟ್ಗಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಕಾಯುತ್ತಿದೆ. ಈ ವೈದ್ಯಕೀಯ ವರದಿ ಬಂದ ಬಳಿಕ ಪಾಕಿಸ್ತಾನ್ ತಂಡವನ್ನು ಪ್ರಕಟಿಸಲು ಪಿಸಿಬಿ ಕಾಯುತ್ತಿದೆ.
ಸೈಮ್ ಅಯ್ಯೂಬ್ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಫಿಟ್ನೆಸ್ ಸಾಧಿಸುವ ಸಾಧ್ಯತೆಯಿದ್ದರೆ, ಅವರನ್ನೇ ತಂಡಕ್ಕೆ ಆಯ್ಕೆ ಮಾಡಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಪ್ಲ್ಯಾನ್ ರೂಪಿಸಿದೆ. ಒಂದು ವೇಳೆ ಅವರು ಟೂರ್ನಿ ಆರಂಭಕ್ಕೂ ಮುನ್ನ ಗುಣಮುಖರಾಗುವ ಸಾಧ್ಯತೆಯಿಲ್ಲದಿದ್ದರೆ, ಅನುಭವಿ ಆಟಗಾರ ಫಖರ್ ಝಮಾನ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
22 ವರ್ಷದ ಸೈಮ್ ಅಯ್ಯೂಬ್ ಪಾಕಿಸ್ತಾನ್ ತಂಡದ ಭರವಸೆಯ ಯುವ ದಾಂಡಿಗ. ಈಗಾಗಲೇ ಪಾಕ್ ಪರ 9 ಏಕದಿನ ಪಂದ್ಯಗಳನ್ನಾಡಿರುವ ಎಡಗೈ ಬ್ಯಾಟರ್ 3 ಶತಕ ಹಾಗೂ 1 ಅರ್ಧಶತಕದೊಂದಿಗೆ ಒಟ್ಟು 515 ರನ್ ಕಲೆಹಾಕಿದ್ದಾರೆ.
ಅದರಲ್ಲೂ ಕಳೆದ ಸರಣಿಯಲ್ಲಿ ಸೌತ್ ಆಫ್ರಿಕಾ ವೇಗಿಗಳ ಮುಂದೆ ಸೆಟೆದು ನಿಂತ ಸೈಮ್ 3 ಪಂದ್ಯಗಳಲ್ಲಿ 2 ಶತಕಗಳೊಂದಿಗೆ 235 ರನ್ ಬಾರಿಸಿ ಮಿಂಚಿದ್ದರು. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಬೇಕಿದ್ದರೆ ಪಾಕಿಸ್ತಾನ್ ಪಾಲಿಗೆ ಭರ್ಜರಿ ಫಾರ್ಮ್ನಲ್ಲಿರುವ ಸೈಮ್ ಅಯ್ಯೂಬ್ ಅವರ ಅನಿವಾರ್ಯತೆ ಇದೆ. ಹಾಗಾಗಿಯೇ ಯುವ ದಾಂಡಿಗ ಫಿಟ್ನೆಸ್ ರಿಪೋರ್ಟ್ಗಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಕಾದು ಕುಳಿತಿದೆ.
ಇದನ್ನೂ ಓದಿ: ಸಿಕ್ಸ್ಗಳ ಸುರಿಮಳೆ… ಟಿ20 ಕ್ರಿಕೆಟ್ನಲ್ಲಿ ಕೀರನ್ ಪೊಲಾರ್ಡ್ ವಿಶ್ವ ದಾಖಲೆ
ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ್ ಸಂಭಾವ್ಯ ತಂಡ: ಮೊಹಮ್ಮದ್ ರಿಝ್ವಾನ್ (ನಾಯಕ), ಬಾಬರ್ ಆಝಂ, ಸಲ್ಮಾನ್ ಅಲಿ ಅಘಾ, ಕಮ್ರಾನ್ ಗುಲಾಮ್, ತಯ್ಯಬ್ ತಾಹಿರ್, ಶಾಹೀನ್ ಶಾ ಆಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್, ಸುಫ್ಯಾನ್ ಮಕೀಮ್, ಇರ್ಫಾನ್ ಖಾನ್, ಮೊಹಮ್ಮದ್ ಹಸ್ನೈನ್, ಹಸೀಬುಲ್ಲಾ, ಇಮಾಮ್ ಉಲ್ ಹಕ್, ಫಖರ್ ಝಮಾನ್ ಅಥವಾ ಸೈಮ್ ಅಯ್ಯೂಬ್