9 ವಿಕೆಟ್ ಪತನದೊಂದಿಗೆ ಭಾರತ vs ಅಫ್ಘಾನ್ ಟೆಸ್ಟ್ ಕೊನೆಗೊಂಡಿದ್ದೇಕೆ?

India-Afghanistan: ಅಫ್ಘಾನಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಮುಲ್ಲನ್​ಪುರ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 564 ರನ್​ಗಳಿಸಿ ಡಿಕ್ಲೇರ್​ ಘೋಷಿಸಿದ್ದರು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಅಫ್ಘಾನಿಸ್ತಾನ್ ಮೊದಲ ಇನಿಂಗ್ಸ್​ನಲ್ಲಿ 152 ರನ್​ಗಳಿಸಿದರೆ, ದ್ವಿತೀಯ ಇನಿಂಗ್ಸ್​​ನಲ್ಲಿ 112 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 300 ರನ್​ಗಳ ಅಮೋಘ ಗೆಲುವು ದಾಖಲಿಸಿದೆ.

9 ವಿಕೆಟ್ ಪತನದೊಂದಿಗೆ ಭಾರತ vs ಅಫ್ಘಾನ್ ಟೆಸ್ಟ್ ಕೊನೆಗೊಂಡಿದ್ದೇಕೆ?
Team India
Image Credit source: BCCI

Updated on: Jun 09, 2026 | 7:22 AM

ಭಾರತ ಮತ್ತು ಅಫ್ಘಾನಿಸ್ತಾನ್ ನಡುವೆ ನಡೆದ ಏಕೈಕ ಟೆಸ್ಟ್ ಪಂದ್ಯವು ಭರ್ಜರಿ ದಾಖಲೆಯೊಂದಿಗೆ ಮುಕ್ತಾಯ ಕಂಡಿದೆ. ಅದು ಸಹ ಕೊನೆಯ ಇನಿಂಗ್ಸ್​ನಲ್ಲಿ 9 ವಿಕೆಟ್​ಗಳ ಪತನದೊಂದಿಗೆ. ಸಾಮಾನ್ಯವಾಗಿ ಟೆಸ್ಟ್ ಪಂದ್ಯ ಮುಗಿಯಲು ಎದುರಾಳಿ ತಂಡದ 10 ವಿಕೆಟ್‌ಗಳನ್ನು ಉರುಳಿಸಬೇಕು. ಆದರೆ, ಈ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡದ 9ನೇ ವಿಕೆಟ್ ಪತನವಾಗುತ್ತಿದ್ದಂತೆ ಅಂಪೈರ್‌ಗಳು ಪಂದ್ಯ ಮುಕ್ತಾಯ ಎಂದು ಘೋಷಿಸಿದರು. ಇದಕ್ಕೆ ಮುಖ್ಯ ಕಾರಣ ಅಫ್ಘಾನ್​ ಆಟಗಾರನ ಗಾಯ.

9 ವಿಕೆಟ್‌ಗೆ ಪಂದ್ಯ ಮುಗಿಯಲು ಕಾರಣವೇನು?

ಈ ಪಂದ್ಯದ ಮೊದಲ ಇನ್ನಿಂಗ್ಸ್ ವೇಳೆ ಅಫ್ಘಾನಿಸ್ತಾನದ ಆಲ್‌ರೌಂಡರ್ ಶರಾಫುದ್ದೀನ್ ಅಶ್ರಫ್ ಅವರು ತೀವ್ರ ಕಾಲಿನ ಸ್ನಾಯು ಸೆಳೆತಕ್ಕೊಳಗಾಗಿದ್ದರು. ತೀವ್ರ ನೋವಿನಿಂದಾಗಿ ಅವರು ಮೊದಲ ಇನ್ನಿಂಗ್ಸ್‌ನಲ್ಲೇ ಬ್ಯಾಟಿಂಗ್ ಮಾಡಲು ಪರದಾಡಿದ್ದರು ಮತ್ತು ಓಡಲು ಸಾಧ್ಯವಾಗದೆ ಮೈದಾನದಿಂದ ಹೊರನಡೆದಿದ್ದರು.

ಎರಡನೇ ಇನ್ನಿಂಗ್ಸ್ ವೇಳೆಗೆ ಅವರ ಗಾಯದ ಸಮಸ್ಯೆ ಮತ್ತಷ್ಟು ಉಲ್ಬಣಿಸಿತು. ಇದರಿಂದಾಗಿ ಅವರು ಬ್ಯಾಟಿಂಗ್ ಮಾಡಲು ಸಂಪೂರ್ಣ ಅಸಮರ್ಥರಾಗಿದ್ದಾರೆ ಎಂದು ಅಫ್ಘಾನ್ ಮ್ಯಾನೇಜ್‌ಮೆಂಟ್ ಘೋಷಿಸಿದರು.

ಕನ್ಕಶನ್ ಆಯ್ಕೆ ಇಲ್ಲ!

ಐಸಿಸಿ ನಿಯಮದ ಪ್ರಕಾರ,  ಪಂದ್ಯದ ವೇಳೆ ಬ್ಯಾಟರ್‌ನ ತಲೆಗೆ ಅಥವಾ ಕುತ್ತಿಗೆಗೆ ಚೆಂಡು ಬಡಿದು ಗಂಭೀರ ಪೆಟ್ಟಾದರೆ, ಆಗ ಅವರ ಬದಲಿಗೆ ಮತ್ತೊಬ್ಬ ಆಟಗಾರನಿಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಲಾಗುತ್ತದೆ. ಇದನ್ನು ‘ಕನ್ಕಶನ್ ಸಬ್‌ಸ್ಟಿಟ್ಯೂಟ್’ ಎನ್ನಲಾಗುತ್ತದೆ.

ಅಫ್ಘಾನ್ ಆಟಗಾರ ಶರಾಫುದ್ದೀನ್ ಅಶ್ರಫ್ ಅವರಿಗೆ ತಲೆಗೆ ಪೆಟ್ಟಾಗಿರಲಿಲ್ಲ, ಬದಲಿಗೆ ಕಾಲಿನ ಸ್ನಾಯು ಸೆಳೆತ ಉಂಟಾಗಿತ್ತು. ಹೀಗಾಗಿ ಈ ನಿಯಮದಡಿಯೂ ಅವರಿಗೆ ಬದಲಿ ಬ್ಯಾಟರ್ ಪಡೆಯಲು ಸಾಧ್ಯವಾಗಲಿಲ್ಲ.

ಅದರಂತೆ 9 ಬ್ಯಾಟರ್​ಗಳೊಂದಿಗೆ ದ್ವಿತೀಯ ಇನಿಂಗ್ಸ್ ಆಡಲಿದ್ದೇವೆ ಎಂಬುದನ್ನು ಅಫ್ಘಾನ್ ಮ್ಯಾನೇಜ್ಮೆಂಟ್ ಅಂಪೈರ್​ಗಳಿಗೆ ತಿಳಿಸಿದ್ದರು. ಹೀಗಾಗಿ ಅಫ್ಘಾನಿಸ್ತಾನ್ ತಂಡದ ಇನಿಂಗ್ಸ್ 9 ವಿಕೆಟ್ ಪತನದೊಂದಿಗೆ ಅಂತ್ಯವಾಗಿದೆ.

ಭಾರತಕ್ಕೆ ಐತಿಹಾಸಿಕ ದಾಖಲೆ:

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ ಬೃಹತ್ ಮೊತ್ತ ಪೇರಿಸಿತು.

  • ಮೊದಲ ಇನಿಂಗ್ಸ್ ಟೀಮ್ ಇಂಡಿಯಾ 8 ವಿಕೆಟ್ ನಷ್ಟಕ್ಕೆ 564 ರನ್​ಗಳಿಸಿ ಡಿಕ್ಲೇರ್ ಘೋಷಿಸಿದ್ದರು.
  • ಅಫ್ಘಾನಿಸ್ತಾನ್ ತಂಡವು ಮೊದಲ ಇನಿಂ ಗ್ಸ್​ನಲ್ಲಿ 152 ರನ್​ಗಳಿಗೆ ಆಲೌಟ್ ಆಗಿದ್ದರು.
  • 412 ರನ್​ಗಳ ಮುನ್ನಡೆ ಪಡೆದ ಟೀಮ್ ಇಂಡಿಯಾ ಫಾಲೋಆನ್ ಹೇರಿತು.
  • ದ್ವಿತೀಯ ಇನಿಂಗ್ಸ್​​ ಆರಂಭಿಸಿದ ಅಫ್ಘಾನಿಸ್ತಾನ್ ತಂಡವು ಕೇವಲ 112 ರನ್​ಗಳಿಗೆ ಆಲೌಟ್ ಆಗಿದ್ದಾರೆ.

ಇದನ್ನೂ ಓದಿ: ವೈಭವ್ ಸೂರ್ಯವಂಶಿ ಎಂಟ್ರಿ: ಟೀಮ್ ಇಂಡಿಯಾದ 3 ತಂಡಗಳು ಪ್ರಕಟ

ಈ ಮೂಲಕ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 300 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಇದು ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇನಿಂಗ್ಸ್ ಮತ್ತು ರನ್‌ಗಳ ಆಧಾರದಲ್ಲಿ ದಾಖಲಾದ ಅತಿ ದೊಡ್ಡ ಗೆಲುವು ಎಂಬುದು ವಿಶೇಷ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us