ಕೆರಿಬಿಯನ್ ದ್ವೀಪದಲ್ಲಿ ಬಾಂಗ್ಲಾದೇಶ್​​ಗೆ ಐತಿಹಾಸಿಕ ಜಯ

| Updated By: ಝಾಹಿರ್ ಯೂಸುಫ್

Updated on: Dec 04, 2024 | 11:57 AM

West Indies vs Bangladesh: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಬಾಂಗ್ಲಾದೇಶ್ ತಂಡ ಡ್ರಾ ಮಾಡಿಕೊಂಡಿದೆ. ಈ ಮೂಲಕ 15 ವರ್ಷಗಳ ಬಳಿಕ ವಿಂಡೀಸ್​​ನಲ್ಲಿ ಟೆಸ್ಟ್ ಸರಣಿ ಸೋಲದೇ ಬಾಂಗ್ಲಾ ಪಡೆ ಹಿಂತಿರುಗಿದೆ.

ಕೆರಿಬಿಯನ್ ದ್ವೀಪದಲ್ಲಿ ಬಾಂಗ್ಲಾದೇಶ್​​ಗೆ ಐತಿಹಾಸಿಕ ಜಯ
WI vs BAN
Follow us on

ಪಾಕಿಸ್ತಾನ್ ವಿರುದ್ಧ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ್ದ ಬಾಂಗ್ಲಾದೇಶ್ ತಂಡವು ಇದೀಗ ವೆಸ್ಟ್ ಇಂಡೀಸ್​​ ವಿರುದ್ಧದ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ 15 ವರ್ಷಗಳ ಬಳಿಕ ವೆಸ್ಟ್ ಇಂಡೀಸ್​​ನಲ್ಲಿ ಬಾಂಗ್ಲಾ ಪಡೆಲ ಟೆಸ್ಟ್​ ಪಂದ್ಯವನ್ನು ಗೆದ್ದುಕೊಂಡಿದೆ. ಎರಡು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್​​ನಲ್ಲಿ ವೆಸ್ಟ್ ಇಂಡೀಸ್ ತಂಡವು 201 ರನ್​​ಗಳ ಅಮೋಘ ಜಯ ಸಾಧಿಸಿತ್ತು. ಈ ಮೂಲಕ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದ್ದರು.

ಜಮೈಕಾದ ಸೆಬಿನಾ ಪಾರ್ಕ್​ ಮೈದಾನದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕಂಬ್ಯಾಕ್ ಮಾಡಿದ ಬಾಂಗ್ಲಾದೇಶ್ ತಂಡವು ಭರ್ಜರಿ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು ಪ್ರಥಮ ಇನಿಂಗ್ಸ್​​ನಲ್ಲಿ 164 ರನ್​​ಗಳಿಸಿತು.

ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು ಕೇವಲ 146 ರನ್​​ಗಳಿಗೆ ಆಲೌಟ್ ಆಗಿದೆ. ಬಾಂಗ್ಲಾ ಪರ ಯುವ ವೇಗಿ ನಹಿದ್ ರಾಣಾ 61 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು.

18 ರನ್​​ಗಳ ಪ್ರಥಮ ಇನಿಂಗ್ಸ್​ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ್ ಪರ ಆರಂಭಿಕ ಆಟಗಾರ ಶಾದ್ಮಾನ್ ಇಸ್ಲಾಂ 46 ರನ್ ಬಾರಿಸಿದರೆ, ನಾಯಕ ಮೆಹದಿ ಹಸನ್ ಮಿರಾಝ್ 42 ರನ್​​ಗಳ ಕೊಡುಗೆ ನೀಡಿದರು.

ಇನ್ನು 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜಾಕರ್ ಅಲಿ 91 ರನ್​​ ಬಾರಿಸುವ ಮೂಲಕ ತಂಡದ ಮೊತ್ತವನ್ನು 250 ರನ್​​ಗಳ ಗಡಿದಾಟಿಸಿದರು. ಈ ಮೂಲಕ ಬಾಂಗ್ಲಾದೇಶ್ ತಂಡವು ದ್ವಿತೀಯ ಇನಿಂಗ್ಸ್​​ನಲ್ಲಿ 268 ರನ್​​ಗಳಿಸಿ ಆಲೌಟ್ ಆಯಿತು.

287 ರನ್​​ಗಳ ಗುರಿ:

ಮೊದಲ ಇನಿಂಗ್ಸ್​ನಲ್ಲಿನ 18 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​​ನಲ್ಲಿ 287 ರನ್​​ಗಳ ಗುರಿ ಪಡೆದ ವೆಸ್ಟ್ ಇಂಡೀಸ್ ತಂಡವು ಬಾಂಗ್ಲಾ ಬೌಲರ್​​ಗಳ ಸಾಂಘಿಕ ಪ್ರದರ್ಶನ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದರು.

ಇದನ್ನೂ ಓದಿ: ಕೇವಲ 3 ರನ್​​ಗೆ 5 ವಿಕೆಟ್​: ಟಿ20 ಕ್ರಿಕೆಟ್​​ನಲ್ಲಿ ಸೂಫಿಯಾನ್ ವಿಶ್ವ ದಾಖಲೆ

ಪರಿಣಾಮ ವೆಸ್ಟ್ ಇಂಡೀಸ್ ತಂಡವು 185 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಬಾಂಗ್ಲಾದೇಶ್ ತಂಡವು 101 ರನ್​​ಗಳ ಜಯ ಸಾಧಿಸಿದೆ.  ಬಾಂಗ್ಲಾ ಪರ ಸ್ಪಿನ್ನರ್ ತೈಜುಲ್ ಇಸ್ಲಾಂ 50 ರನ್​​ಗಳಿಗೆ 5 ವಿಕೆಟ್ ಕಬಳಿಸಿದರೆ, ಹಸನ್ ಮಹಮೂದ್ ಹಾಗೂ ತಸ್ಕಿನ್ ಅಹ್ಮದ್ ತಲಾ 2 ವಿಕೆಟ್ ಕಬಳಿಸಿದರು.

15 ವರ್ಷಗಳ ಬಳಿಕ ಟೆಸ್ಟ್​ ಜಯ:

ಬಾಂಗ್ಲಾದೇಶ್ ತಂಡವು ಬರೋಬ್ಬರಿ 15 ವರ್ಷಗಳ ಬಳಿಕ ವೆಸ್ಟ್ ಇಂಡೀಸ್​ನಲ್ಲಿ ಟೆಸ್ಟ್ ಜಯ ಸಾಧಿಸಿದೆ. ಕೊನೆಯ ಬಾರಿಗೆ ಕೆರಿಬಿಯನ್ ದ್ವೀಪದಲ್ಲಿ ಬಾಂಗ್ಲಾ ಪಡೆ ಟೆಸ್ಟ್​ ಗೆದ್ದಿದ್ದು 2009 ರಲ್ಲಿ. ಇದೀಗ ಹದಿನೈದು ವರ್ಷಗಳ ಬಳಿಕ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಬಾಂಗ್ಲಾದೇಶ್ ತಂಡ ಯಶಸ್ವಿಯಾಗಿದೆ.

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಕ್ರೈಗ್ ಬ್ರಾಥ್‌ವೈಟ್ (ನಾಯಕ) , ಮೈಕೈಲ್ ಲೂಯಿಸ್ , ಕೀಸಿ ಕಾರ್ಟಿ , ಅಲಿಕ್ ಅಥಾನಾಝ್ , ಕವೆಮ್ ಹಾಡ್ಜ್ , ಜಸ್ಟಿನ್ ಗ್ರೀವ್ಸ್ , ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್) , ಅಲ್ಜಾರಿ ಜೋಸೆಫ್ , ಕೆಮರ್ ರೋಚ್ , ಶಮರ್ ಜೋಸೆಫ್ , ಜೇಡನ್ ಸೀಲ್ಸ್.

ಇದನ್ನೂ ಓದಿ: ಕೇವಲ 3 ರನ್​​ಗೆ 5 ವಿಕೆಟ್​: ಟಿ20 ಕ್ರಿಕೆಟ್​​ನಲ್ಲಿ ಸೂಫಿಯಾನ್ ವಿಶ್ವ ದಾಖಲೆ

ಬಾಂಗ್ಲಾದೇಶ್ ಪ್ಲೇಯಿಂಗ್ 11: ಮಹ್ಮದುಲ್ ಹಸನ್ ಜಾಯ್ , ಶಾದ್ಮನ್ ಇಸ್ಲಾಂ , ಶಹದತ್ ಹೊಸೈನ್ ದೀಪು , ಮೊಮಿನುಲ್ ಹಕ್ , ಲಿಟ್ಟನ್ ದಾಸ್ (ವಿಕೆಟ್ ಕೀಪರ್) , ಜಾಕರ್ ಅಲಿ , ಮೆಹಿದಿ ಹಸನ್ ಮಿರಾಝ್ (ನಾಯಕ) , ತೈಜುಲ್ ಇಸ್ಲಾಂ , ತಸ್ಕಿನ್ ಅಹ್ಮದ್ , ಹಸನ್ ಮಹಮೂದ್ , ನಹಿದ್ ರಾಣಾ.