ನನಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಸಿಕ್ಕರೆ ಸಾಕು: ಕೆಎಲ್ ರಾಹುಲ್
India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಿಂಕ್ ಬಾಲ್ ಟೆಸ್ಟ್ ಪಂದ್ಯವು ಡಿಸೆಂಬರ್ 6 ರಿಂದ ಶುರುವಾಗಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 9.30 ರಿಂದ ಆರಂಭವಾಗಲಿದೆ. ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಹಾಗೂ ಡಿಸ್ನಿ ಹಾಟ್ಸ್ಟಾರ್ ಆ್ಯಪ್ನಲ್ಲಿ ವೀಕ್ಷಿಸಬಹುದು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್ ಪಂದ್ಯವು ಶುಕ್ರವಾರದಿಂದ ಶುರುವಾಗಲಿದೆ. ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆ ಕಂಡು ಬರಲಿದೆ. ಏಕೆಂದರೆ ಪರ್ತ್ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ಇತ್ತ ರೋಹಿತ್ ಶರ್ಮಾ ಆಗಮನದೊಂದಿಗೆ ಕೆಎಲ್ ರಾಹುಲ್ ಯಾವ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕೆಂದರೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಪರ್ತ್ ಟೆಸ್ಟ್ನಲ್ಲಿ ಯಶಸ್ವಿ ಜೈಸ್ವಾಲ್ ಜೊತೆ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸಿದ್ದರು. ಅಲ್ಲದೆ ಈ ಪಂದ್ಯದಲ್ಲಿ 103 ರನ್‌ಗಳನ್ನು ಬಾರಿಸಿ ರಾಹುಲ್ ಟೀಮ್ ಇಂಡಿಯಾಗೆ ಉತ್ತಮ ಆರಂಭ ಒದಗಿಸಿದ್ದರು. ಇದೀಗ ಹಿಟ್ಮ್ಯಾನ್ ಆಗಮನದೊಂದಿಗೆ ರಾಹುಲ್ ಅವರ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಯಾಗಲಿದೆಯಾ ಎಂಬ ಪ್ರಶ್ನೆ ಮೂಡಿದೆ.
ಈ ಪ್ರಶ್ನೆಗೆ ಖುದ್ದು ಕೆಎಲ್ ರಾಹುಲ್ ಉತ್ತರ ನೀಡಿದ್ದಾರೆ. ಅಡಿಲೇಡ್ ಟೆಸ್ಟ್ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಕೆಎಲ್ಆರ್, ನಾನು ತಂಡಕ್ಕಾಗಿ ಯಾವುದೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧ ಎಂದು ಹೇಳಿದ್ದಾರೆ.
ನನ್ನನ್ನೂ ಎಲ್ಲಿ ಬೇಕಾದರೂ ಆಡಿಸಬಹುದು. ನಾನು ತಂಡಕ್ಕಾಗಿ ಆಡಲು ಬಯಸುತ್ತೇನೆ. ಅದರಲ್ಲೂ ನಾನು ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿರಲು ಬಯಸುತ್ತೇನೆ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.
ಇದೇ ವೇಳೆ ಯಾವ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತೀರಿ ಎಂದು ಕೇಳಲಾದ ಪ್ರಶ್ನೆಗೆ ನಾಜೂಕಿನ ಉತ್ತರ ನೀಡಿದ ರಾಹುಲ್, ನನ್ನ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಈಗಾಗಲೇ ಹೇಳಲಾಗಿದೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಾರದೆಂದು ಸಹ ಹೇಳಿದ್ದಾರೆ ಎಂದು ನಕ್ಕರು.
ಇನ್ನು ಪರ್ತ್ ಟೆಸ್ಟ್ ಪಂದ್ಯಕ್ಕೂ ಮುನ್ನವೇ ನನಗೆ ಆರಂಭಿಕನಾಗಿ ಕಣಕ್ಕಿಳಿಯಬೇಕಾಗುತ್ತದೆ ಎಂದು ತಿಳಿಸಿದ್ದರು. ಏಕೆಂದರೆ ನಾನು ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಕೊನೆಯ ಎರಡು ಪಂದ್ಯಗಳನ್ನಾಡಿರಲಿಲ್ಲ. ಹೀಗಾಗಿಯೇ ಆಸ್ಟ್ರೇಲಿಯಾ ಇನಿಂಗ್ಸ್ ಆರಂಭಿಸುವ ವಿಷಯವನ್ನು ತಿಳಿಸಿದ್ದರು.
ಇದರಿಂದ ಆರಂಭಿಕನ ಸ್ಥಾನಕ್ಕಾಗಿ ತಯಾರಿ ನಡೆಸಲು ನನಗೆ ಸಾಕಷ್ಟು ಸಮಯ ಸಿಕ್ಕಿತು. ಹಾಗಾಗಿ ನಾನು ನನ್ನ ರನ್‌ಗಳನ್ನು ಹೇಗೆ ಗಳಿಸಬೇಕು ಮತ್ತು ನಾನು ಯಾವ ಪ್ರಕ್ರಿಯೆಗಳನ್ನು ಅನುಸರಿಸಬೇಕು ಎಂದು ನನಗೆ ತಿಳಿದಿತ್ತು ಎಂದು ರಾಹುಲ್ ಹೇಳಿದರು.
ಇನ್ನು ಪಿಂಕ್ ಬಾಲ್ ಟೆಸ್ಟ್ ಬಗ್ಗೆ ಮಾತನಾಡಿದ ಕೆಎಲ್ ರಾಹುಲ್, ಇದು ನನ್ನ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿದೆ. ತಂಡದಲ್ಲಿ ಇತರ ಕೆಲವು ಆಟಗಾರರು ಹೊಂದಿರುವಂತಹ ಅನುಭವ ನನಗಿಲ್ಲ. ಹಾಗೆಯೇ ಪಿಂಕ್ ಬಾಲ್ನಲ್ಲಿ ಆಡುವುದು ಸ್ಪಲ್ಪ ಭಿನ್ನವಾಗಿದೆ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.
ಇದನ್ನೂ ಓದಿ: ಕೇವಲ 3 ರನ್ಗೆ 5 ವಿಕೆಟ್: ಟಿ20 ಕ್ರಿಕೆಟ್ನಲ್ಲಿ ಸೂಫಿಯಾನ್ ವಿಶ್ವ ದಾಖಲೆ
ಅದರಂತೆ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಡುತ್ತಿರುವ ಕೆಎಲ್ ರಾಹುಲ್ ಅಡಿಲೇಡ್ನಲ್ಲೂ ಆರಂಭಿಕನಾಗಿ ಮುಂದುವರೆಯಲಿದ್ದಾರಾ ಅಥವಾ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರಾ ಕಾದು ನೋಡಬೇಕಿದೆ.
ಡೇ-ನೈಟ್ ಟೆಸ್ಟ್ ಯಾವಾಗ?
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಿಂಕ್ ಬಾಲ್ (ಡೇ-ನೈಟ್) ಟೆಸ್ಟ್ ಪಂದ್ಯವು ಡಿಸೆಂಬರ್ 6 ರಿಂದ ಶುರುವಾಗಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 9.30 ರಿಂದ ಆರಂಭವಾಗಲಿದೆ. ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಹಾಗೂ ಡಿಸ್ನಿ ಹಾಟ್ಸ್ಟಾರ್ ಆ್ಯಪ್ನಲ್ಲಿ ವೀಕ್ಷಿಸಬಹುದು.