ಪವರ್​ಪ್ಲೇನಲ್ಲಿ ಭಾರತದ ಬೌಲರ್​ಗಳ ಬೆವರಿಳಿಸಿದ ವಿಂಡೀಸ್ ಆರಂಭಿಕರು

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯ ತಿರುವನಂತಪುರಂನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದು ಭಾರತ ಬೌಲಿಂಗ್ ಆಯ್ದುಕೊಂಡರೂ, ವೆಸ್ಟ್ ಇಂಡೀಸ್ ಆರಂಭಿಕರು ಪವರ್‌ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೆ 85 ರನ್ ಗಳಿಸಿ ಭರ್ಜರಿ ಆರಂಭ ನೀಡಿದ್ದಾರೆ. ಅನಾನುಭವಿ ಭಾರತೀಯ ಬೌಲರ್‌ಗಳು ವಿಂಡೀಸ್ ದಾಳಿಯನ್ನು ತಡೆಯಲು ಹೆಣಗಾಡುತ್ತಿದ್ದು, ಎದುರಾಳಿ ತಂಡ ದೊಡ್ಡ ಮೊತ್ತ ಕಲೆಹಾಕುವ ಸೂಚನೆ ನೀಡಿದೆ.

ಪವರ್​ಪ್ಲೇನಲ್ಲಿ ಭಾರತದ ಬೌಲರ್​ಗಳ ಬೆವರಿಳಿಸಿದ ವಿಂಡೀಸ್ ಆರಂಭಿಕರು
John Campbell

Updated on: Sep 27, 2026 | 3:10 PM

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯ ತಿರುವನಂತಪುರಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ, ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಹೀಗಾಗಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಭರ್ಜರಿ ಆರಂಭ ಸಿಕ್ಕಿದೆ. ಆರಂಭಿಕರಾದ ಜಾನ್ ಕ್ಯಾಂಪ್ಬೆಲ್ ಮತ್ತು ಜಸ್ಟಿನ್ ಗ್ರೀವ್ಸ್ ಪವರ್​ಪ್ಲೇನಲ್ಲಿ ಅಂದರೆ ಮೊದಲ 10 ಓವರ್​ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 85 ರನ್ ಕಲೆಹಾಕಿದ್ದಾರೆ. ಟೀಂ ಇಂಡಿಯಾದ ಅನಾನುಭವಿ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಿರುವ ವಿಂಡೀಸ್ ಆರಂಭಿಕರು ದೊಡ್ಡ ಮೊತ್ತ ಕಲೆಹಾಕುವ ಸುಳಿವು ನೀಡಿದ್ದಾರೆ.

14 ಬೌಂಡರಿ ಹಾಗೂ 2 ಸಿಕ್ಸರ್‌

ಭಾರತದ ಬೌಲರ್​ಗಳ ಎದುರು ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್‌ ಮಾಡಿದ ವಿಂಡೀಸ್ ಆರಂಭಿಕರು 14 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಬಾರಿಸಿದರು. ಅಂದರೆ ಕೇವಲ ಬೌಂಡರಿ ಹಾಗೂ ಸಿಕ್ಸರ್‌ಗಳಿಂದಲೇ 68 ರನ್​ಗಳನ್ನು ಕಲೆಹಾಕಿದರು. ಅದರಲ್ಲೂ ಕ್ರಿಕೆಟ್ ಪುಸ್ತಕದ ಶಾಟ್​ಗಳನ್ನು ಕರಗತ ಮಾಡಿಕೊಂಡವರಂತೆ ಬ್ಯಾಟ್ ಬೀಸಿದ ಜಸ್ಟಿನ್ ಗ್ರೀವ್ಸ್ ಒಬ್ಬರೇ 9 ಬೌಂಡರಿಗಳನ್ನು ಬಾರಿಸಿದರು. ವಿಂಡೀಸ್ ಆರಂಭಿಕರನ್ನು ಕಟ್ಟಿಹಾಕಲು ಎಲ್ಲಾ ಪ್ರಯತ್ನಗಳನ್ನು ಮಾಡಿದ ನಾಯಕ ಗಿಲ್, ಮೊದಲ 10 ಓವರ್​ಗಳಲ್ಲಿ 4 ಬೌಲರ್​ಗಳನ್ನು ಬಳಸಿದರು. ಆದರೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

ಕ್ಯಾಚ್ ಕೈಚೆಲ್ಲಿದ ರೋಹಿತ್ ಶರ್ಮಾ

ಆದಾಗ್ಯೂ ಗುರ್ನೂರ್ ಬ್ರಾರ್ ಜಸ್ಟಿನ್ ಗ್ರೀವ್ಸ್ ಅವರ ವಿಕೆಟ್ ಪಡೆಯುವ ಅವಕಾಶ ಸೃಷ್ಟಿಸಿದ್ದರು. ಆದರೆ ಸ್ಲಿಪ್​ನಲ್ಲಿ ಸ್ವಲ್ಪ ಕಷ್ಟಕರವಾದ ಕ್ಯಾಚ್ ಅನ್ನು ರೋಹಿತ್ ಶರ್ಮಾ ಕೈಚೆಲ್ಲಿದರು. ಅದೊಂದು ಅವಕಾಶವನ್ನು ಹೊರತುಪಡಿಸಿ, ವಿಂಡೀಸ್ ಆರಂಭಿಕರು ಟೀಂ ಇಂಡಿಯಾಕ್ಕೆ ವಿಕೆಟ್ ಪಡೆಯುವ ಯಾವುದೇ ಅವಕಾಶವನ್ನು ನೀಡಿಲ್ಲ. ಇದುವರೆಗೆ ಬೌಲ್ ಮಾಡಿರುವ ಎಲ್ಲಾ ಬೌಲರ್​ಗಳು ಕೊಂಚ ದುಬಾರಿ ಎನಿಸಿಕೊಂಡಿದ್ದಾರೆ. ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಒಂದೇ ಓವರ್​ನಲ್ಲಿ 17 ರನ್​ಗಳನ್ನು ಬಿಟ್ಟುಕೊಟ್ಟಿದ್ದು, ವಿಂಡೀಸ್​ಗೆ ಉತ್ತಮ ಆರಂಭ ಸಿಗಲು ಪ್ರಮುಖ ಕಾರಣವಾಯಿತು.

ಏಕದಿನದಲ್ಲಿ ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿ ರೋಹಿತ್, ಕೊಹ್ಲಿ..!

ವಿಕೆಟ್ ನಷ್ಟವಿಲ್ಲದೆ 100 ರನ್

ಈ ಸುದ್ದಿಯ ಬರೆಯುವ ಹೊತ್ತಿಗೆ ವೆಸ್ಟ್ ಇಂಡೀಸ್ ತಂಡ ಯಾವುದೇ ವಿಕೆಟ್‌ಗಳನ್ನು ಕಳೆದುಕೊಳ್ಳದೆ 14ನೇ ಓವರ್​ನಲ್ಲಿ 100 ರನ್​ಗಳ ಗಡಿ ದಾಟಿದೆ. ಅಲ್ಲದೆ ಆರಂಭಿಕ ಜಸ್ಟಿನ್ ಗ್ರೀವ್ಸ್ 42 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ನಮನ್ ಬೌಲ್ ಮಾಡಿದ 14ನೇ ಓವರ್​ನಲ್ಲಿ ಬೌಂಡರಿ ಬಾರಿಸುವ ಮೂಲಕ ಜಸ್ಟಿನ್ ಗ್ರೀವ್ಸ್ ತಮ್ಮ ಅರ್ಧಶತಕವನ್ನು ಪೂರೈಸಿದಲ್ಲದೆ ತಂಡವನ್ನು ಶತಕದ ಗಡಿ ದಾಟಿಸಿದರು. ಇದರೊಂದಿಗೆ ವಿಂಡೀಸ್ ಆರಂಭಿಕರು 23 ಪಂದ್ಯಗಳ ನಂತರ ಶತಕದ ಜೊತೆಯಾಟ ಕಟ್ಟಿದ ಸಾಧನೆಯನ್ನು ಮಾಡಿದ್ದಾರೆ. ಮತ್ತೊಬ್ಬ ಆರಂಭಿಕ ಜಾನ್ ಕ್ಯಾಂಪ್ಬೆಲ್ ಕೂಡ ಅರ್ಧಶತಕದ ಸನಿಹದಲ್ಲಿದ್ದಾರೆ. ಇವರಿಬ್ಬರನ್ನು ಬೇಗನೇ ಔಟ್ ಮಾಡದಿದ್ದರೆ, ಟೀಂ ಇಂಡಿಯಾಕ್ಕೆ ಸವಾಲಿನ ಮೊತ್ತ ಗುರಿಯಾಗಿ ಸಿಗುವುದಂತೂ ಖಚಿತ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:55 pm, Sun, 27 September 26

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us