Yashasvi Jaiswal: ಆರಂಭಿಕನಾಗಿ ಜೈಸ್ವಾಲ್ ಯಶಸ್ವಿ: ಯಾರ ಸ್ಥಾನಕ್ಕೆ ಕುತ್ತು?
Yashasvi Jaiswal: ಈ ಸರಣಿಯಲ್ಲಿ 3 ಇನಿಂಗ್ಸ್ ಆಡಿರುವ ಯಶಸ್ವಿ ಜೈಸ್ವಾಲ್ 1 ಶತಕ ಹಾಗೂ 1 ಅರ್ಧಶತಕದೊಂದಿಗೆ ಒಟ್ಟು 266 ರನ್ ಕಲೆಹಾಕಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ (Team India) 1-0 ಅಂತರದಿಂದ ಗೆದ್ದುಕೊಂಡಿದೆ. 2 ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಇನಿಂಗ್ಸ್ ಹಾಗೂ 141 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು 2ನೇ ಪಂದ್ಯವು ಮಳೆಗಾಹುತಿಯಾದ ಕಾರಣ ಮ್ಯಾಚ್ ಅನ್ನು ಡ್ರಾ ಎಂದು ಘೋಷಿಸಲಾಯಿತು. ಇದರೊಂದಿಗೆ 1-0 ಅಂತರದಿಂದ ಸರಣಿಯು ಟೀಮ್ ಇಂಡಿಯಾ ಪಾಲಾಗಿದೆ. ವಿಶೇಷ ಎಂದರೆ ಈ ಸರಣಿ ಗೆಲುವು ಟೀಮ್ ಇಂಡಿಯಾದ ಮೂವರ ಪಾಲಿಗೆ ಸ್ಮರಣೀಯ. ಏಕೆಂದರೆ ಈ ಸರಣಿಯ ಮೂಲಕ ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ ಹಾಗೂ ಮುಖೇಶ್ ಕುಮಾರ್ ಟೆಸ್ಟ್ ಕೆರಿಯರ್ ಆರಂಭಿಸಿದ್ದಾರೆ. ಅದರಲ್ಲೂ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ (Yashasvi Jaiswal) ಚೊಚ್ಚಲ ಪಂದ್ಯದಲ್ಲೇ ತಮ್ಮ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ.
ಮೊದಲ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 171 ರನ್ ಬಾರಿಸಿ ಯಶಸ್ವಿ ಜೈಸ್ವಾಲ್ ಭರ್ಜರಿಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶುಭಾರಂಭ ಮಾಡಿದ್ದರು. ಇನ್ನು 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 57 ರನ್ ಬಾರಿಸಿದರೆ, ದ್ವಿತೀಯ ಇನಿಂಗ್ಸ್ನಲ್ಲಿ 38 ರನ್ಗಳಿಸಿದ್ದರು. ಇದರೊಂದಿಗೆ ಈ ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಹೆಗ್ಗಳಿಕೆಯು ಯುವ ಎಡಗೈ ದಾಂಡಿಗನ ಪಾಲಾಯಿತು.
ಈ ಸರಣಿಯಲ್ಲಿ 3 ಇನಿಂಗ್ಸ್ ಆಡಿರುವ ಯಶಸ್ವಿ ಜೈಸ್ವಾಲ್ 1 ಶತಕ ಹಾಗೂ 1 ಅರ್ಧಶತಕದೊಂದಿಗೆ ಒಟ್ಟು 266 ರನ್ ಕಲೆಹಾಕಿದ್ದಾರೆ. ಈ ಮೂಲಕ ಈ ಸರಣಿಯಲ್ಲಿ ಅತೀ ಹೆಚ್ಚು ರನ್ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಯಾರ ಸ್ಥಾನಕ್ಕೆ ಕುತ್ತು?
ಈ ಪಂದ್ಯದಲ್ಲಿ ಶುಭ್ಮನ್ ಗಿಲ್ ಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಅತ್ತ ಗಿಲ್ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಇದೀಗ ಕೇವಲ ಮೂರು ಇನಿಂಗ್ಸ್ಗಳ ಮೂಲಕ 266 ರನ್ ಪೇರಿಸಿರುವ ಯಶಸ್ವಿ ಜೈಸ್ವಾಲ್ಗೆ ಆರಂಭಿಕನ ಸ್ಥಾನ ಪಕ್ಕಾ ಆಗಿದೆ.
ಅತ್ತ ಶುಭ್ಮನ್ ಗಿಲ್ ಮೊದಲ ಪಂದ್ಯದಲ್ಲಿ ವಿಫಲರಾದರೂ 2ನೇ ಟೆಸ್ಟ್ನ ದ್ವಿತೀಯ ಇನಿಂಗ್ಸ್ನಲ್ಲಿ ಅಜೇಯ 29 ರನ್ ಬಾರಿಸಿದ್ದರು. ಹೀಗಾಗಿ ಮುಂಬರುವ ಕೆಲ ಟೆಸ್ಟ್ ಪಂದ್ಯಗಳಲ್ಲಿ ಶುಭ್ಮನ್ ಗಿಲ್ 3ನೇ ಸ್ಥಾನದಲ್ಲೇ ಮುಂದುವರೆಯುವುದು ಖಚಿತ ಎನ್ನಬಹುದು.
ಇದನ್ನೂ ಓದಿ: India T20 Squad: ಟೀಮ್ ಇಂಡಿಯಾದಲ್ಲಿ ಇಬ್ಬರೇ ಆಲ್ರೌಂಡರ್ಗಳು..!
ಇನ್ನು ಶುಭ್ಮನ್ ಗಿಲ್ 3ನೇ ಕ್ರಮಾಂಕದಲ್ಲಿ ಮಿಂಚಿದರೆ ಚೇತೇಶ್ವರ ಪೂಜಾರಗೆ ಮತ್ತೆ ತಂಡದಲ್ಲಿ ಅವಕಾಶ ಸಿಗುವುದು ಅನುಮಾನ. ಏಕೆಂದರೆ ಪೂಜಾರಗೆ ಈಗಾಗಲೇ 35 ವರ್ಷಗಳಾಗಿದೆ. ಹೀಗಾಗಿ ಭವಿಷ್ಯ ದೃಷ್ಟಿಯಲ್ಲಿ ಮುಂಬರುವ ಸರಣಿಗಳಲ್ಲಿ 23 ವರ್ಷದ ಶುಭ್ಮನ್ ಗಿಲ್ ಅವರನ್ನೇ 3ನೇ ಕ್ರಮಾಂಕದಲ್ಲಿ ಮುಂದುವರೆಸಲಿದ್ದಾರೆ.