MS Dhoni: ಐಪಿಎಲ್​ಗೂ ಧೋನಿ ವಿದಾಯ? ಕುತೂಹಲ ಹೆಚ್ಚಿಸಿದ ಕ್ಯಾಪ್ಟನ್ ಕೂಲ್ ಫೇಸ್​ಬುಕ್ ಪೋಸ್ಟ್..!

| Updated By: ಪೃಥ್ವಿಶಂಕರ

Updated on: Sep 24, 2022 | 8:05 PM

MS Dhoni: ಸೆಪ್ಟೆಂಬರ್ 24 ರಂದು ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹಠಾತ್ ಪೋಸ್ಟ್ ಮಾಡಿರುವ ಧೋನಿ, ಅಭಿಮಾನಿಗಳ ಆತಂಕ ಮತ್ತು ಊಹಾಪೋಹಗಳಿಗೆ ಕಾರಣವಾಗಿದ್ದಾರೆ.

MS Dhoni: ಐಪಿಎಲ್​ಗೂ ಧೋನಿ ವಿದಾಯ? ಕುತೂಹಲ ಹೆಚ್ಚಿಸಿದ ಕ್ಯಾಪ್ಟನ್ ಕೂಲ್ ಫೇಸ್​ಬುಕ್ ಪೋಸ್ಟ್..!
MS Dhoni
Follow us on

ಮಹೇಂದ್ರ ಸಿಂಗ್ ಧೋನಿ (Mahendra Singh Dhoni)…. ಕ್ರಿಕೆಟ್​ ಲೋಕದಲ್ಲಿ ಈ ಹೆಸರನ್ನು ಕೇಳದವರಿಲ್ಲ. ಹಾಗೆಯೇ ಧೋನಿಯನ್ನು ಆದರ್ಶವಾಗಿ ತೆಗೆದುಕೊಳ್ಳದ ಕ್ರಿಕೆಟಿಗರಿಲ್ಲ. ಯಾಕಂದ್ರೆ ಕ್ರಿಕೆಟ್ ದುನಿಯಾದಲ್ಲಿ ಧೋನಿ ಸೃಷ್ಟಿಸಿರುವ ಹವಾ ಅಂತದ್ದು. ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಧೋನಿ ಈಗ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಎರಡು ತಿಂಗಳ ಐಪಿಎಲ್ ಹೊರತುಪಡಿಸಿ, ವರ್ಷವಿಡೀ ಧೋನಿ ಅಭಿಮಾನಿಗಳಿಗೆ ಅವರನ್ನು ಕಣ್ತುಂನಿಕೊಳ್ಳಲು ಬೇರೆ ಅವಕಾಶವೇ ಸಿಗುವುದಿಲ್ಲ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುವ ಧೋನಿ, ಒಂದಿಲ್ಲೊಂದು ವಿಚಾರದಿಂದ ಸಖತ್ ಸುದ್ದಿಯಾಗುತ್ತಿರುತ್ತಾರೆ. ಕೆಲವೊಮ್ಮೆ ಆಘಾತಕ್ಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡುತ್ತಾರೆ. ಅದಕ್ಕೆ ತಾಜಾ ಉದಾಹರಣೆ ಎಂದರೆ ಅದು ಅವರ ಕ್ರಿಕೆಟ್ ಬದುಕಿನ ವಿದಾಯ. ಇದಕ್ಕಿದಂತೆ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸುವ ಮೂಲಕ ಧೋನಿ ಕ್ರಿಕೆಟ್​ಗೆ ವಿದಾಯ ಹೇಳಿಬಿಟ್ಟಿದ್ದರು. ಈಗ ಅಂತಹದ್ದೆ ಕೆಲಸ ಮಾಡಿರುವ ಧೋನಿ, ಫೇಸ್​ಬುಕ್​ನಲ್ಲಿ ಮಾಡಿರುವ ಪೋಸ್ಟೊಂದು ಅಭಿಮಾನಿಗಳಿಗೆ ಆತಂಕ ಹೆಚ್ಚುವಂತೆ ಮಾಡಿದೆ.

ಸೆಪ್ಟೆಂಬರ್ 24 ರಂದು ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹಠಾತ್ ಪೋಸ್ಟ್ ಮಾಡಿರುವ ಧೋನಿ, ಅಭಿಮಾನಿಗಳ ಆತಂಕ ಮತ್ತು ಊಹಾಪೋಹಗಳಿಗೆ ಕಾರಣರಾಗಿದ್ದಾರೆ. ಅಷ್ಟಕ್ಕೂ ಧೋನಿ ಮಾಡಿರುವ ಪೋಸ್ಟ್​ನಲ್ಲಿರುವುದೆನೆಂದರೆ, ಕ್ಯಾಪ್ಟನ್​ ಕೂಲ್, ಸೆಪ್ಟೆಂಬರ್ 25 ಅಂದರೆ ಭಾನುವಾರದಂದು ಫೇಸ್‌ಬುಕ್‌ನಲ್ಲಿ ಲೈವ್ ಬರುವುದಾಗಿ ಹೇಳಿಕೊಂಡಿದ್ದಾರೆ. ಆ ಪೋಸ್ಟ್​ನಲ್ಲಿ, ಮಧ್ಯಾಹ್ನ 2 ಗಂಟೆಗೆ ನಾನು ಲೈವ್​ ಬರಲಿದ್ದು, ಅದರಲ್ಲಿ ನಾನು ನಿಮ್ಮೊಂದಿಗೆ ಕೆಲವು ರೋಚಕ ಸುದ್ದಿಗಳನ್ನು ಹಂಚಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ. ಧೋನಿಯ ಈ ಹೇಳಿಕೆಯೆ ಈಗ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಧೋನಿ ಈ ಫೇಸ್ಬುಕ್ ಪೋಸ್ಟ್​ ನೋಡಿರುವ ಅಭಿಮಾನಿಗಳಲ್ಲಿ ಮಹೀ ನಾಳೆ ಏನನ್ನು ಹೇಳಲಿದ್ದಾರೆ ಎಂಬ ಕುತೂಹಲ ಮೂಡಿದೆ. ಅಲ್ಲದೆ ಧೋನಿ ಈಗಾಗಲೇ ಎರಡು ವರ್ಷಗಳ ಹಿಂದೆ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದು, ನಾಳಿನ ಫೇಸ್ಬುಕ್ ಲೈವ್​ನಲ್ಲಿ ಮತ್ತ್ಯಾವ ಬಾಂಬ್ ಸಿಡಿಸುತ್ತಾರೆ ಎಂಬ ಪ್ರಶ್ನೆಗಳು ಅಭಿಮಾನಿಗಳ ಮನಸಲ್ಲಿ ಮೂಡಿದೆ. ಅಲ್ಲದೆ ಧೋನಿ ಐಪಿಎಲ್‌ನಿಂದ ನಿವೃತ್ತಿ ಘೋಷಿಸಲಿದ್ದಾರಾ ಎಂಬ ಆತಂಕವೂ ಅಭಿಮಾನಿಗಳಲ್ಲಿ ಹೆಚ್ಚುತ್ತಿದೆ.

ಧೋನಿ ಏನನ್ನು ಹೇಳುತ್ತಾರೆ ಹಾಗೂ ಯಾವುದರ ಬಗ್ಗೆ ಮಾತನಾಡುತ್ತಾರೆ ಎಂಬುದು ಭಾನುವಾರ 2 ಗಂಟೆಗಷ್ಟೇ ಗೊತ್ತಾಗಲಿದೆ. ಆದರೆ, ಕಳೆದ ಬಾರಿ ಭರವಸೆ ನೀಡಿದಂತೆ ಚೆನ್ನೈನಿಂದಲೇ ಧೋನಿ ಐಪಿಎಲ್​ನಿಂದ ನಿವೃತ್ತಿಯಾಗುವುದು ಖಚಿತವಾಗಿದೆ. ಅಲ್ಲದೆ ಮುಂದಿನ ವರ್ಷದಿಂದ, ಐಪಿಎಲ್ ಮೂರು ಸೀಸನ್‌ಗಳ ನಂತರ ತನ್ನ ಹಳೆಯ ಸ್ವರೂಪಕ್ಕೆ ಮರಳಲಿದೆ. ಇದರಲ್ಲಿ ಎಲ್ಲಾ ತಂಡಗಳು ಮತ್ತೆ ತಮ್ಮ ತವರು ನೆಲ ಹಾಗೂ ತಮ್ಮ ಎದುರಾಳಿ ತಂಡದ ತವರು ನೆಲದಲ್ಲಿ ಪಂದ್ಯಗಳನ್ನಾಡಲಿವೆ. ಅದೇನೆಂದರೆ, ಮತ್ತೊಮ್ಮೆ ಚೆನ್ನೈ ಸೇರಿದಂತೆ ಎಲ್ಲಾ ತಂಡಗಳು ತಮ್ಮ ತವರು ಅಭಿಮಾನಿಗಳ ನಡುವೆ ಮತ್ತೊಮ್ಮೆ ಆಡುವ ಅವಕಾಶವನ್ನು ಪಡೆಯುತ್ತವೆ. ಹೀಗಿರುವಾಗ ಈ ಐಪಿಎಲ್ ನಂತರ ಧೋನಿ ನಿವೃತ್ತಿಯಾಗುತ್ತಾರೆ ಎಂಬ ಊಹಾಪೋಹಕ್ಕೆ ಇನ್ನಷ್ಟು ಬಲ ಬಂದಿದೆ.

Published On - 8:05 pm, Sat, 24 September 22