
ಬರ್ಸಪರಾ ಕ್ರೀಡಾಂಗಣದಲ್ಲಿ ನಡೆದ 2025 ರ ಮಹಿಳಾ ವಿಶ್ವಕಪ್‌ನ ಮೊದಲ ಸೆಮಿಫೈನಲ್ (2025 Women’s World Cup semi-final) ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು 125 ರನ್‌ಗಳಿಂದ ಸೋಲಿಸಿದ ದಕ್ಷಿಣ ಆಫ್ರಿಕಾ (South Africa vs England) ಮೊದಲ ತಂಡವಾಗಿ ಮೊದಲ ಬಾರಿಗೆ ವಿಶ್ವಕಪ್ ಪೈನಲ್ಗೆ ಲಗ್ಗೆ ಇಟ್ಟಿದೆ. ಬುಧವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವೋಲ್ವಾರ್ಡ್ ಅವರ ಶತಕದ ಇನ್ನಿಂಗ್ಸ್‌ನ ಆಧಾರದ ಮೇಲೆ 50 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 319 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಆಫ್ರಿಕಾ ಬೌಲರ್ಗಳ ದಾಳಿಗೆ ತತ್ತರಿಸಿ 42.3 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು ಕೇವಲ 194 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಆಫ್ರಿಕಾ ಪರ ಬೌಲಿಂಗ್ನಲ್ಲಿ ಮಿಂಚಿದ ಮರಿಜಾನ್ನೆ ಕಪ್ ಐದು ವಿಕೆಟ್‌ಗಳನ್ನು ಪಡೆದರೆ, ನಾಡಿನ್ ಡಿ ಕ್ಲರ್ಕ್ ಎರಡು ವಿಕೆಟ್, ಅಯಬೊಂಗಾ ಖಾಕಾ, ಮ್ಲಾಬಾ ಮತ್ತು ಸುನೆ ಲೂಸ್ ತಲಾ ಒಂದು ವಿಕೆಟ್ ಪಡೆದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 319 ರನ್ ಗಳಿಸಿತು. ತಂಡದ ಪರ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದ ನಾಯಕಿ ಲಾರಾ ವೋಲ್ವಾರ್ಡ್ 143 ಎಸೆತಗಳಲ್ಲಿ 20 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 169 ರನ್ ಚಚ್ಚಿದರು. ಇವರ ಹೊರತಾಗಿ ಟ್ಯಾಡ್ಮಿನ್ ಬ್ರಿಟ್ಸ್ 45 ರನ್ ಮತ್ತು ಅನುಭವಿ ಮರಿಜನ್ನೆ ಕಪ್ 33 ಎಸೆತಗಳಲ್ಲಿ 42 ರನ್ ಗಳಿಸುವ ಮೂಲಕ ತಂಡವನ್ನು ಈ ಸ್ಕೋರ್‌ಗೆ ಕೊಂಡೊಯ್ದರು. ಇಂಗ್ಲೆಂಡ್ ಪರ ಬೌಲಿಂಗ್ನಲ್ಲಿ ಮಿಂಚಿದ ಸೋಫಿ ಎಕ್ಲೆಸ್ಟೋನ್ ನಾಲ್ಕು ವಿಕೆಟ್ ಪಡೆದರೆ, ಲಾರೆನ್ ಬೆಲ್ ಎರಡು ವಿಕೆಟ್, ನ್ಯಾಟ್ ಸಿವರ್-ಬ್ರಂಟ್ ಒಂದು ವಿಕೆಟ್ ಪಡೆದರು.
ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯಲಿಲ್ಲ. ಅಗ್ರ ಮೂವರು ಬ್ಯಾಟರ್ಗಳು ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು ಇದು ಆರಂಭದಲ್ಲಿ ಇಂಗ್ಲೆಂಡ್‌ಗೆ ದೊಡ್ಡ ಹೊಡೆತ ನೀಡಿತು. ಅಷ್ಟೇ ಅಲ್ಲ, ವಿಕೆಟ್‌ಗಳನ್ನು ಉಳಿಸಿಕೊಳ್ಳುವ ಹೋರಾಟ ಪ್ರಾರಂಭವಾಯಿತು. ಆಮಿ ಜೋನ್ಸ್, ಟ್ಯಾಮಿ ಬ್ಯೂಮಾಂಟ್ ಮತ್ತು ಹೀದರ್ ನೈಟ್ ತಮ್ಮ ಖಾತೆಗಳನ್ನು ತೆರೆಯಲು ಸಾಧ್ಯವಾಗಲಿಲ್ಲ. ನಂತರ ನಾಯಕಿ ನ್ಯಾಟ್ ಸಿವರ್ ಮತ್ತು ಎಲಿಸ್ ಕ್ಯಾಪ್ಸಿ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 107 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ನ್ಯಾಟ್ ಸಿವರ್ ಬ್ರಂಟ್ 64 ರನ್‌ಗಳಿಸಿದರೆ, ಎಲಿಸ್ ಕ್ಯಾಪ್ಸಿ 50 ರನ್‌ಗಳ ಇನ್ನಿಂಗ್ಸ್ ಆಡಿದರು. ಇವರಿಬ್ಬರನ್ನು ಹೊರತುಪಡಿಸಿ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಹೀಗಾಗಿ ಇಂಗ್ಲೆಂಡ್ ಹೀನಾಯ ಸೋಲಿಗೆ ಕೊರಳೊಡ್ಡಬೇಕಾಯಿತು.
World Cup 2025: ಸೆಮೀಸ್ನಲ್ಲಿ ಆಫ್ರಿಕಾ ನಾಯಕಿಯ ಸಿಡಿಲಬ್ಬರ; ಹೊಸ ವಿಶ್ವ ದಾಖಲೆ ಸೃಷ್ಟಿ
ಏಕದಿನ ವಿಶ್ವಕಪ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆದಿದೆ. ಈಗ ದಕ್ಷಿಣ ಆಫ್ರಿಕಾ ಫೈನಲ್‌ನಲ್ಲಿ ಭಾರತ ಅಥವಾ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಭಾರತ-ಆಸ್ಟ್ರೇಲಿಯಾ ಸೆಮಿಫೈನಲ್ ಪಂದ್ಯವು ಅಕ್ಟೋಬರ್ 30 ರಂದು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಈ ಪಂದ್ಯವನ್ನು ಗೆದ್ದು ಫೈನಲ್ ತಲುಪಿದರೆ, ಕ್ರಿಕೆಟ್ ಜಗತ್ತಿಗೆ ಹೊಸ ಚಾಂಪಿಯನ್ ಸಿಗುತ್ತದೆ. ಈಗ ಎಲ್ಲರ ಗಮನ ಸೆಮಿಫೈನಲ್‌ನಲ್ಲಿ ಭಾರತ ತಂಡ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದರ ಮೇಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:57 pm, Wed, 29 October 25