
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಎಲ್ಲಾ ಮಾದರಿಯ ಮಹಿಳಾ ಆ್ಯಶಸ್ (Women’s Ashes) ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಪಾರುಪತ್ಯ ಮೇರೆದ ಆಸ್ಟ್ರೇಲಿಯಾ (England vs Australia) ವನಿತಾ ಪಡೆ ಪ್ರತಿಷ್ಠಿತ ಆ್ಯಶಸ್ ಸರಣಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಉಭಯ ತಂಡಗಳ ನಡುವೆ ನಡೆಯುತ್ತಿರುವ ಏಕದಿನ ಸರಣಿಯ ಎರಡನೇ ಪಂದ್ಯವನ್ನು ಮೂರು ರನ್‌ಗಳಿಂದ ಗೆದ್ದು ಬೀಗಿದ ಆಸೀಸ್ ಪಡೆ ಆ್ಯಶಸ್ ಸರಣಿಯನ್ನು ಮತ್ತೊಮ್ಮೆ ತನ್ನದಾಗಿಸಿಕೊಂಡಿದೆ. ಸೌತಾಂಪ್ಟನ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ, ಇಂಗ್ಲೆಂಡ್ ತಂಡದ ನಾಯಕಿ ನ್ಯಾಟ್ ಸೀವರ್ ಬ್ರಂಟ್ (Nat Sciver-Brunt) ಶತಕ ಬಾರಿಸಿ, ಕೊನೆಯವರೆಗೂ ಹೋರಾಡಿದರಾದರೂ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ವಾಸ್ತವವಾಗಿ ಮಹಿಳಾ ಆ್ಯಶಸ್‌ನಲ್ಲಿ ಮೂರು ಮಾದರಿಯ ಕ್ರಿಕೆಟ್ ಅನ್ನು ಆಡಿಸಲಾಗುತ್ತದೆ. ಅಂದರೆ ಟೆಸ್ಟ್, ಟಿ20, ಹಾಗೂ ಏಕದಿನ ಪಂದ್ಯಗಳು ಮಹಿಳಾ ಆ್ಯಶಸ್ನ ಭಾಗವಾಗಿರುತ್ತದೆ. ಈ ಮೂರು ಮಾದರಿಯ ಸರಣಿಯಲ್ಲಿ ಅತಿ ಹೆಚ್ಚು ಅಂಕ ಕಲೆಹಾಕುವ ತಂಡವೂ ಆ್ಯಶಸ್ ಸರಣಿಯನ್ನು ತನ್ನ ಹೆಸರಿಗೆ ಬರೆದುಕೊಳ್ಳುತ್ತದೆ. ಈ ಬಾರಿಯ ಆ್ಯಶಸ್‌ನಲ್ಲಿ ಏಕೈಕ ಟೆಸ್ಟ್ ಪಂದ್ಯ ಗೆದ್ದಿದ್ದ ಆಸೀಸ್ ಪಡೆ 4 ಅಂಕಗಳನ್ನು ಕಲೆಹಾಕಿತ್ತು. ಆ ಬಳಿಕ ನಡೆದ ಟಿ20 ಸರಣಿಯಲ್ಲಿ ಒಂದು ಪಂದ್ಯವನ್ನು ಗೆದ್ದು ಇನ್ನೇರಡು ಅಂಕಗಳು ಸೇರಿದಂತೆ ಒಟ್ಟು 6 ಅಂಕಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ಇತ್ತ ಉಳಿದ ಇನ್ನೇರಡು ಟಿ20 ಪಂದ್ಯಗಳನ್ನು ಗೆದ್ದ ಇಂಗ್ಲೆಂಡ್, ಟಿ20 ಸರಣಿಯನ್ನು ತನ್ನದಾಗಿಸಿಕೊಳ್ಳುವುದರೊಂದಿಗೆ 4 ಅಂಕ ಸಂಪಾಧಿಸಿತ್ತು. ನಂತರ ನಡೆದ ಏಕದಿನ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದ ಇಂಗ್ಲೆಂಡ್ ಒಟ್ಟು 6 ಅಂಕ ಕಲೆಹಾಕಿ ಅಂಕಗಳ ವಿಚಾರದಲ್ಲಿ ಸಮಬಲ ಸಾಧಿಸಿತ್ತು.
NOT GOING ANYWHERE!!!!#Ashes pic.twitter.com/NjxHNNM7kL
— Australian Women's Cricket Team ? (@AusWomenCricket) July 16, 2023
Ashes 2023: ಆ್ಯಶಸ್‌ನಲ್ಲಿ ದಾಖಲೆ ಬರೆದ ಬೆನ್ ಸ್ಟೋಕ್ಸ್; ದಿಗ್ಗಜರ ಸಾಲಿಗೆ ಇಂಗ್ಲೆಂಡ್ ನಾಯಕ..!
ಆಸ್ಟ್ರೇಲಿಯ ಕಳೆದ ಬಾರಿಯೂ ಆಶಸ್ ಗೆದ್ದಿತ್ತು, ಇಂತಹ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ಈ ಬಾರಿಯ ಆ್ಯಶಸ್ ಗೆಲ್ಲಬೇಕೆಂದರೆ ಕೊನೆಯ ಎರಡು ಏಕದಿನ ಪಂದ್ಯಗಳನ್ನು ಗೆಲ್ಲಲೇ ಬೇಕಿತ್ತು. ಆದರೆ ಕೊನೆಯ ಎಸೆತದಲ್ಲಿ ಇಂಗ್ಲೆಂಡ್ ತಂಡದ ಪ್ರಯತ್ನ ವಿಫಲವಾಯಿತು. ಸೌತಾಂಪ್ಟನ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕೇವಲ 3 ರನ್‌ಗಳಿಂದ ಸೋತ ಇಂಗ್ಲೆಂಡ್ ಆ್ಯಶಸ್ ಸರಣಿಯಿಂದ ಮತ್ತೆ ವಂಚಿತವಾಯಿತು. ವಾಸ್ತವಾಗಿ ಕೊನೆಯ ಎಸೆತದಲ್ಲಿ ಇಂಗ್ಲೆಂಡ್‌ಗೆ 5 ರನ್‌ಗಳ ಅಗತ್ಯವಿತ್ತು. ಆದರೆ ನಾಯಕಿ ಸೀವರ್-ಬ್ರಂಟ್ ಕೊನೆಯ ಎಸೆತದಲ್ಲಿ ಕೇವಲ ಒಂದು ರನ್ ಮಾತ್ರ ಪಡೆಯುವಲ್ಲಿ ಯಶಸ್ವಿಯಾದರು.
ಆಂಗ್ಲ ಆಲ್‌ರೌಂಡರ್, ಶತಕದ ನೆರವಿನಿಂದ ಕೊನೆಯ ಎಸೆತದವರೆಗೂ ತಂಡವನ್ನು ಪಂದ್ಯದಲ್ಲಿ ಉಳಿಸಿಕೊಂಡರು. ಆಸ್ಟ್ರೇಲಿಯಾ ನೀಡಿದ 283 ರನ್‌ಗಳ ಗುರಿಗೆ ಉತ್ತರವಾಗಿ ಇಂಗ್ಲೆಂಡ್ 5 ವಿಕೆಟ್ ಕಳೆದುಕೊಂಡು 144 ರನ್ ಗಳಿಸಿತ್ತು. ಟಮ್ಮಿ ಬ್ಯೂಮಾಂಟ್ ತಂಡದ ಪರವಾಗಿ 60 ರನ್‌ಗಳ ಪ್ರಬಲ ಇನ್ನಿಂಗ್ಸ್ ಆಡಿದರೆ, ಉಳಿದ ಬ್ಯಾಟರ್ಗಳು ಯಾವುದೇ ಗಮನಾರ್ಹ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಇಲ್ಲಿಂದ ಇನ್ನಿಂಗ್ಸ್ ನಿಭಾಯಿಸಿದ ಸಿವರ್-ಬ್ರಂಟ್, ಆಮಿ ಜೋನ್ಸ್ ಅವರೊಂದಿಗೆ 57 ರನ್ ಜೊತೆಯಾಟವನ್ನು ಹಂಚಿಕೊಂಡರು.
ಇಂಗ್ಲೆಂಡ್ ಸ್ಕೋರ್ 203 ರನ್ ಆಗಿದ್ದಾಗ ಆರು ಮತ್ತು ಏಳನೇ ವಿಕೆಟ್ ಕಳೆದುಕೊಂಡಿತು. ಈಗ 68 ಎಸೆತಗಳಲ್ಲಿ 80 ರನ್‌ಗಳ ಅಗತ್ಯವಿದ್ದು, ಕೈಯಲ್ಲಿ ಕೇವಲ 3 ವಿಕೆಟ್‌ಗಳಿದ್ದವು. ಅದಾಗ್ಯೂ ಏಕಾಂಗಿ ಹೋರಾಟ ನಡೆಸಿದ ಸೀವರ್-ಬ್ರಂಟ್, ಸಾರಾ ಗ್ಲೆನ್ ಜೊತೆಗೆ ಆಸ್ಟ್ರೇಲಿಯಾದ ಮೇಲೆ ದಾಳಿ ಮಾಡಿದರು. ಈ ಸಮಯದಲ್ಲಿ, ಬ್ರಂಟ್ ತನ್ನ ಶತಕವನ್ನು ಪೂರ್ಣಗೊಳಿಸಿದರು. ಆದರೆ ಕೊನೆಯ ಓವರ್‌ನಲ್ಲಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲರಾದರು.
ಇದಕ್ಕೂ ಮುನ್ನ ಆಸೀಸ್ ಪರ ಅಬ್ಬರಿಸಿದ ಅನುಭವಿ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಅವರ 91 ರನ್‌ಗಳ ಪ್ರಬಲ ಇನ್ನಿಂಗ್ಸ್ ಮತ್ತು ಕೊನೆಯ ಓವರ್‌ನಲ್ಲಿ ಜಾರ್ಜಿಯಾ ವೇರ್‌ಹ್ಯಾಮ್ ಅವರ ಬಿರುಗಾಳಿಯ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡು 282 ರನ್ ಕಲೆಹಾಕಿತ್ತು. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಜಾರ್ಜಿಯಾ 26 ರನ್ ಚಚ್ಚಿದರು. ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 14 ಎಸೆತಗಳನ್ನು ಎದುರಿಸಿದ ಜಾರ್ಜಿಯಾ 37 ರನ್ ಗಳಿಸಿದರು. ಇವರಿಬ್ಬರ ಹೊರತಾಗಿ ಅನ್ನಾಬೆಲ್ ಸದರ್ಲೆಂಡ್ ಕೂಡ 50 ರನ್‌ಗಳ ಕೊಡುಗೆ ನೀಡಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:24 am, Mon, 17 July 23