ಏಷ್ಯಾಕಪ್​ನಲ್ಲಿ ಕೈಕುಲುಕುತ್ತಾರಾ ಭಾರತ- ಪಾಕ್ ಆಟಗಾರ್ತಿಯರು?

Women's T20 Asia Cup: ದುಬೈನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಭಾರತ ಆಗಸ್ಟ್ 30 ರಂದು ಥೈಲ್ಯಾಂಡ್ ವಿರುದ್ಧ ಮೊದಲ ಪಂದ್ಯ ಆಡಲಿದೆ. ಸೆಪ್ಟೆಂಬರ್ 5 ರಂದು ಭಾರತ-ಪಾಕ್ ಮಹತ್ವದ ಪಂದ್ಯ ನಡೆಯಲಿದ್ದು, ಉಭಯ ತಂಡಗಳ ಆಟಗಾರ್ತಿಯರ ನಡುವಿನ ಶೇಕ್​ಹ್ಯಾಂಡ್ ಬಗ್ಗೆ ಮಾತನಾಡಿರುವ ಹರ್ಮನ್‌ಪ್ರೀತ್ ಹಾಗೂ ಕೋಚ್ ಅಮೋಲ್ ಆಟದ ಹೊರಗಿನ ವಿಷಯಗಳಿಗೆ ಮಹತ್ವ ನೀಡಿಲ್ಲ ಎಂದಿದ್ದಾರೆ.

ಏಷ್ಯಾಕಪ್​ನಲ್ಲಿ ಕೈಕುಲುಕುತ್ತಾರಾ ಭಾರತ- ಪಾಕ್ ಆಟಗಾರ್ತಿಯರು?
Ind Vs Pak

Updated on: Aug 30, 2026 | 5:10 PM

ದುಬೈನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ(Women’s Asia Cup 2026), ಭಾರತ ತಂಡವು ಆಗಸ್ಟ್ 30 ರಂದು ಥೈಲ್ಯಾಂಡ್ ಮಹಿಳಾ ತಂಡದ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. 2026 ರ ಟಿ20 ವಿಶ್ವಕಪ್‌ನಲ್ಲಿ ನಿರೀಕ್ಷೆಯಂತೆ ಪ್ರದರ್ಶನ ನೀಡಲು ವಿಫಲವಾದ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಈ ಪಂದ್ಯಾವಳಿ ಬಹಳ ಮುಖ್ಯವಾಗಲಿದೆ. ಏಷ್ಯಾಕಪ್‌ನಲ್ಲಿ ‘ಎ’ ಗುಂಪಿನಲ್ಲಿ ಭಾರತ ತಂಡ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಪಾಕಿಸ್ತಾನ ಮಹಿಳಾ ತಂಡವೂ ಇದೆ. ಇದರರ್ಥ ಗುಂಪು ಹಂತದಲ್ಲಿ ಭಾರತ- ಪಾಕ್ (India vs Pakistan) ತಂಡಗಳು ಮುಖಾಮುಖಿಯಾಗುವುದು ಖಚಿತ. ಅದರಂತೆ ಉಭಯ ತಂಡಗಳ ನಡುವಿನ ಈ ಹೈವೋಲ್ಟೇಜ್ ಕದನ ಸೆಪ್ಟೆಂಬರ್ 5 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಯಾರು ಗೊತ್ತಾರೆ ಎಂಬ ಕುತೂಹಲದ ಜೊತೆಗೆ ಉಭಯ ತಂಡಗಳ ಆಟಗಾರ್ತಿಯರು ಪರಸ್ಪರ ಕೈಕುಲುಕುತ್ತಾರೋ ಇಲ್ಲವೋ ಎಂಬುದನ್ನು ನೋಡಲು ಕಾಯುತ್ತಿದ್ದಾರೆ. ಇದಕ್ಕೆ ಉತ್ತರವನ್ನು ತಂಡದ ನಾಯಕಿ ಹಾಗೂ ಮುಖ್ಯ ಕೋಚ್ ಇಬ್ಬರು ನೀಡಿದ್ದಾರೆ.

ಹೊರಗಿನ ಅಂಶಗಳಿಗೆ ನಾವು ಗಮನ ಹರಿಸುತ್ತಿಲ್ಲ

ಪಾಕ್ ಆಟಗಾರ್ತಿಯರ ಜೊತೆಗೆ ಕೈಕುಲುಕುವ ಬಗ್ಗೆ ನಾಯಕರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹರ್ಮನ್‌ಪ್ರೀತ್, ‘ನಾವು ಯಾವುದೇ ಒಂದು ನಿರ್ದಿಷ್ಟ ತಂಡದ ಮೇಲೆ ಕೇಂದ್ರೀಕರಿಸುತ್ತಿಲ್ಲ. ಎಲ್ಲಾ ತಂಡಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ನಮ್ಮ ಗಮನವು ಉತ್ತಮ ಕ್ರಿಕೆಟ್ ಆಡುವುದರ ಮೇಲಿದೆ. ನಾವು ಯಾವುದೇ ತಂಡವನ್ನು ಹಗುರವಾಗಿ ಪರಿಗಣಿಸುತ್ತಿಲ್ಲ. ಉತ್ತಮ ಕ್ರಿಕೆಟ್ ಆಡುವುದರ ಮೇಲೆ ಮಾತ್ರ ನಮ್ಮ ಗಮನ. ಆಟದ ಹೊರಗಿನ ಅಂಶಗಳಿಗೆ ನಾವು ಗಮನ ಹರಿಸುತ್ತಿಲ್ಲ ಎಂದರು. ಅಂದರೆ ಪಾಕಿಸ್ತಾನದ ನಾಯಕಿ ಫಾತಿಮಾ ಸನಾ ಅವರೊಂದಿಗೆ ಅವರು ಕೈಕುಲುಕುತ್ತಾರೆಯೇ ಎಂಬ ಪ್ರಶ್ನೆಗೆ ಹರ್ಮನ್‌ಪ್ರೀತ್ ನೇರವಾಗಿ ಉತ್ತರಿಸಿರಲಿಲ್ಲ.

ಮುಖ್ಯ ಕೋಚ್ ಅಮೋಲ್ ಮಜುಂದಾರ್ ಹೇಳಿದ್ದಿದು

ಇದೀಗ ಥೈಲ್ಯಾಂಡ್ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಟೀಂ ಇಂಡಿಯಾದ ಮುಖ್ಯ ಕೋಚ್ ಅಮೋಲ್ ಮಜುಂದಾರ್ ಬಳಿ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ಆಟಗಾರರು ಮೈದಾನದ ಹೊರಗಿನ ವಿಷಯಗಳತ್ತ ಗಮನಹರಿಸಿಲ್ಲ. ನಮ್ಮ ಸಂಪೂರ್ಣ ಗಮನ ಆಗಸ್ಟ್ 30 ರಂದು ನಡೆಯಲಿರುವ ಥೈಲ್ಯಾಂಡ್ ಮಹಿಳಾ ತಂಡದ ವಿರುದ್ಧದ ಪಂದ್ಯದ ಮೇಲಿದೆ. ಹೀಗಾಗಿ ಭಾರತಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ನಾವು ಆ ನಂತರ ಚರ್ಚಿಸಲಿದ್ದೇವೆ.

ಇದು ಯುವ ತಂಡ ಮತ್ತು ಸುಧಾರಣೆಗೆ ಸಾಕಷ್ಟು ಅವಕಾಶವಿದೆ. ನಾವು ಉತ್ತಮ ಮತ್ತು ಆಕ್ರಮಣಕಾರಿ ಕ್ರಿಕೆಟ್ ಆಡಲು ಪ್ರಯತ್ನಿಸುತ್ತಿದ್ದೇವೆ. ಈಗ ನಮ್ಮ ಗುರಿ ಮುಂದಿನ ಆರು ತಿಂಗಳಲ್ಲಿ ಉತ್ತಮ ಪ್ರದರ್ಶನ ನೀಡುವುದು. ಏಕೆಂದರೆ ಈ ವರ್ಷ ಭಾರತ ತಂಡ ಆಡಿದ 16 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಒಂಬತ್ತು ಪಂದ್ಯಗಳನ್ನು ಸೋತಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವುದು ನಮ್ಮ ಗುರಿ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us