ಬಹುನಿರೀಕ್ಷಿತ ಮಹಿಳಾ ಏಷ್ಯಾಕಪ್ ಟೂರ್ನಿಗೆ (Womens Asia Cup T20) ಇಂದು ಚಾಲನೆ ಸಿಗಲಿದೆ. ಟಿ20 ಮಾದರಿಯಲ್ಲಿ ನಡೆಯಲಿರುವ ಈ ಪಂದ್ಯಾಟದಲ್ಲಿ ಮೊದಲು ಬಾಂಗ್ಲಾದೇಶ ಮಹಿಳಾ ತಂಡ ಹಾಗೂ ಥೈಲೆಂಡ್ ಮಹಿಳಾ ತಂಡ ಮುಖಾಮುಖಿ ಆಗಲಿದೆ. ಇಂದೇ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ ಹಾಗೂ ಶ್ರೀಲಂಕಾ ಸೆಣೆಸಾಟ ನಡೆಸಲಿದೆ. ಬಾಂಗ್ಲಾದೇಶದ ಸೈಲೆಟ್ ಔಟರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಕಳೆದ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಸೋತ ಭಾರತ ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಇತ್ತ ಲಂಕಾನ್ನರು ಎರಡು ತಿಂಗಳ ಬಳಿಕ ಮೈದಾನಕ್ಕೆ ಇಳಿಯುತ್ತಿದ್ದು ಯಾವರೀತಿ ಪ್ರದರ್ಶನ ತೋರುತ್ತದೆ ಎಂಬುದು ನೋಡಬೇಕಿದೆ.
2004 ರಲ್ಲಿ ಆರಂಭಗೊಂಡ ಮಹಿಳಾ ಏಷ್ಯಾಕಪ್ನಲ್ಲಿ ಇದುವರೆಗೆ ಏಳು ಆವೃತ್ತಿಗಳು ನಡೆದಿವೆ. ಇದರಲ್ಲಿ ಆರು ಸೀಸನ್ ಭಾರತ ಗೆದ್ದಿದ್ದರೆ ಹಿಂದಿನ ಸೀಸನ್ನಲ್ಲಿ ಬಾಂಗ್ಲಾ ಚಾಂಪಿಯನ್ ಆಗಿತ್ತು. ಈ ಬಾರಿಯ ಮಹಿಳಾ ಏಷ್ಯಾಕಪ್ 2022 ರಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಭಾರತವೇ ಆಗಿದೆ. ಇತ್ತೀಚೆಗಷ್ಟೆ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಏಕದಿನ ಸರಣಿಯಲ್ಲಿ ವೈಟ್ವಾಷ್ ಮಾಡಿದ ಭರವಸೆಯಲ್ಲಿ ಕೌರ್ ಬಳಗವಿದೆ. ಆದರೆ, ಟಿ20 ವಿಚಾರಕ್ಕೆ ಬಂದರೆ ಭಾರತ ಇನ್ನಷ್ಟು ಶ್ರಮವಹಿಸಬೇಕಿದೆ. ಸ್ಮೃತಿ ಮಂದಾನ, ಹರ್ಮನ್‌ಪ್ರೀತ್ ಕೌರ್ ಹಾಗೂ ದೀಪ್ತಿ ಶರ್ಮಾ ಭರ್ಜರಿ ಫಾರ್ಮ್ನಲ್ಲಿರುವುದು ತಂಡದ ಪ್ಲಸ್ ಪಾಯಿಂಟ್.
ಶ್ರೀಲಂಕಾ ಮಹಿಳಾ ತಂಡ ಕೊನೆಯ ಬಾರಿಗೆ ಮೈದಾನಕ್ಕೆ ಇಳಿದಿದ್ದು ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ. ಚಮಿರಾ ಅಟಪಟ್ಟು ನಾಯಕಿಯಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಸಿನಿ ಪೆರೇರಾ, ಹರ್ಷಿತಾ ಮಾದವಿ, ಅನುಷ್ಕಾ ಸಂಜೀವನಿ ಪ್ರಮುಖ ಬ್ಯಾಟರ್ಗಳಾದರೆ, ಇನೋಕಾ ರಣವೀರಾ, ಅಚಿನಿ ಕುಲಸೂರ್ಯ, ರಶ್ಮಿ ಸಿಲ್ವಾ ಬೌಲರ್ಗಳಾಗಿದ್ದಾರೆ. ಈ ಬಾರಿ ಪುರುಷರ ಏಷ್ಯಾಕಪ್ನಲ್ಲಿ ಶ್ರೀಲಂಕಾ ಪ್ರಶಸ್ತಿ ಗೆದ್ದಿತ್ತು. ಹೀಗಾಗಿ ಮಹಿಳಾ ತಂಡ ಯಾವರೀತಿ ಆಟ ಆಡುತ್ತೆ ಎಂಬುದು ಕುತೂಹಲ ಕೆರಳಿಸಿದೆ.
ಈ ಬಾರಿ ಭಾರತ, ಪಾಕಿಸ್ತಾನ, ಥಾಯ್ಲೆಂಡ್, ಶ್ರೀಲಂಕಾ, ಮಲೇಷ್ಯಾ, ಯುಎಇ ಮತ್ತು ಬಾಂಗ್ಲಾದೇಶ ಒಳಗೊಂಡಂತೆ ಏಳು ತಂಡಗಳು ಪಾಲ್ಗೊಂಡಿವೆ. ಎಲ್ಲ ತಂಡಗಳು ಲೀಗ್ ಹಂತದಲ್ಲಿ ಆರು ಪಂದ್ಯಗಳನ್ನು ಆಡಲಿವೆ. ಅಗ್ರ ನಾಲ್ಕು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ಭಾರತ ಹಾಗೂ ಶ್ರೀಲಂಕಾ ನಡುವಣ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ನೇರಪ್ರಸಾರ ಕಾಣಲಿದೆ. ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲೂ ಲೈವ್ ಸ್ಟ್ರೀಮ್ ವೀಕ್ಷಿಸಬಹುದು.
ಉಭತ ತಂಡಗಳು:
ಭಾರತ ಮಹಿಳಾ ತಂಡ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಸಬ್ಬಿನೇನಿ ಮೇಘನಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದಯಾಲನ್ ಹೇಮಲತಾ, ದೀಪ್ತಿ ಶರ್ಮಾ, ಸ್ನೇಹ ರಾಣಾ, ರಿಚ್ಚಾ ಘೋಷ್ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ರಾಧಾ ಯಾದವ್, ರೇಣುಕಾ ಸಿಂಗ್, ಕಿರಣ್ ನವಗಿರೆ, ಜೆಮಿಮಾ ರೋಡ್ರಿಗಸ್, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್.
ಶ್ರೀಲಂಕಾ ಮಹಿಳಾ ತಂಡ: ಹಸಿನಿ ಪೆರೇರಾ, ಚಮಿರಾ ಅಟಪಟ್ಟು (ನಾಯಕಿ), ಹರ್ಷಿತಾ ಮಾದವಿ, ಅನುಷ್ಕಾ ಸಂಜೀವನಿ (ವಿಕೆಟ್ ಕೀಪರ್), ನೀಲಾಕ್ಷಿ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಮಲ್ಶಾ ಶೆಹಾನಿ, ಓಷಾದಿ ರಣಸಿಂಘೆ, ಸುಗಂದಿಕಾ ಕುಮಾರಿ, ಇನೋಕಾ ರಣವೀರ, ಅಚಿನಿ ಕುಲಸೂರ್ಯ, ತಾರಿಕಾ ಕುಲಸೂರ್ಯ, ತಾರಿಕಾ ಸಂಜೀವಿತ್, ರಶ್ಮಿ ಸಿಲ್ವಾ, ಕೌಶಾನಿ ನುತ್ಯಂಗನಾ.
Published On - 8:03 am, Sat, 1 October 22