IND vs SA: 2ನೇ ಟಿ20 ಪಂದ್ಯಕ್ಕಾಗಿ ಗುವಾಹಟಿ ತಲುಪಿದ ರೋಹಿತ್ ಪಡೆಗೆ ಸಿಗ್ತು ಭರ್ಜರಿ ಸ್ವಾಗತ; ವಿಡಿಯೋ
IND vs SA: ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ಎರಡನೇ ಪಂದ್ಯವು ಅಸ್ಸಾಂನ ಈ ನಗರದಲ್ಲಿ ಭಾನುವಾರ ಅಕ್ಟೋಬರ್ 2 ರಂದು ನಡೆಯಲಿದೆ.
ಪ್ರಸ್ತುತ ಟೀಂ ಇಂಡಿಯಾದ (team india ) ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಇಂಜುರಿ ಬಗ್ಗೆ ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಟಿ20 ವಿಶ್ವಕಪ್ಗೆ ಭರ್ಜರಿ ಸಿದ್ದತೆಯಲ್ಲಿ ತೊಡಗಿದ್ದ ರೋಹಿತ್ ಪಡೆಗೆ ಬುಮ್ರಾ ಅವರ ಇಂಜುರಿ ದೊಡ್ಡ ಹೊಡೆತವನ್ನು ನೀಡಿದೆ. ಟಿ20 ವಿಶ್ವಕಪ್ನಲ್ಲಿ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸಬೇಕಾಗಿದ್ದ ಬುಮ್ರಾ, ಈಗ ಟಿ20 ವಿಶ್ವಕಪ್ನಿಂದ (T20 World Cup) ಹೊರಗುಳಿದಿರುವುದು ತಂಡಕ್ಕೆ ನುಂಗಲಾರದ ತುತ್ತಾಗಿದೆ. ಆದರೆ ಟೀಂ ಇಂಡಿಯಾ ಇವೆಲ್ಲವನ್ನೂ ಬಿಟ್ಟು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯತ್ತ ತನ್ನ ಗಮನವನ್ನು ಕೇಂದ್ರೀಕರಿಸುತ್ತಿದ್ದು, ಗಾಯಗೊಂಡ ಬುಮ್ರಾ ಬದಲಿಗೆ ಸಿರಾಜ್ಗೆ ತಂಡದಲ್ಲಿ ಅವಕಾಶ ನೀಡಿದೆ. ಮಂಡಳಿಯಿಂದ ಬುಲಾವ್ ಬಂದ ಕೂಡಲೇ ತಂಡ ಸೇರಿಕೊಂಡಿರುವ ಮೊಹಮ್ಮದ್ ಸಿರಾಜ್ (Mohammad Siraj) ಕೂಡ ತಂಡದೊಂದಿಗೆ ಗುವಾಹಟಿ ತಲುಪಿದ್ದಾರೆ.
ಗುವಾಹಟಿಯಲ್ಲಿ ಭರ್ಜರಿ ಸ್ವಾಗತ
ಮೂರು ಪಂದ್ಯಗಳ T20 ಸರಣಿಗಾಗಿ, ಭಾರತ ತಂಡ ಗುರುವಾರ ಸೆಪ್ಟೆಂಬರ್ 29 ರಂದು ತಿರುವನಂತಪುರದಿಂದ ಹೊರಟು ಗುವಾಹಟಿ ತಲುಪಿತ್ತು. ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ಎರಡನೇ ಪಂದ್ಯವು ಅಸ್ಸಾಂನ ಈ ನಗರದಲ್ಲಿ ಭಾನುವಾರ ಅಕ್ಟೋಬರ್ 2 ರಂದು ನಡೆಯಲಿದೆ. ಗುವಾಹಟಿ ತಲುಪಿದ ಟೀಂ ಇಂಡಿಯಾಗೆ ಆತ್ಮೀಯ ಸ್ವಾಗತ ನೀಡಲಾಯಿತು. ವಿಮಾನ ನಿಲ್ದಾಣದಿಂದ ಟೀಂ ಇಂಡಿಯಾ ಆಟಗಾರರು ಹೊರಬರುತ್ತಲ್ಲೆ ಅಭಿಮಾನಿಗಳ ಗುಂಪು ಭರ್ಜರಿಯಾಗಿ ಸ್ವಾಗತಿಸಿತು. ಜೊತೆಗೆ ಅಲ್ಲಿನ ಸ್ಥಳೀಯ ಕಲಾವಿದರು ಅಸ್ಸಾಂನ ಸಾಂಪ್ರದಾಯಿಕ ನೃತ್ಯವನ್ನೂ ಪ್ರಸ್ತುತಪಡಿಸುವುದರೊಂದಿಗೆ ಆಟಗಾರರನ್ನು ಸ್ವಾಗತಿಸಿದರು.
Thiruvananthapuram ✅
Hello Guwahati ?#TeamIndia | #INDvSA | @mastercardindia pic.twitter.com/QQU2cdVxF5
— BCCI (@BCCI) September 30, 2022
ಸಿರಾಜ್ ಮೇಲೆ ಎಲ್ಲರ ಕಣ್ಣು
ತಿರುವನಂತಪುರಂನಲ್ಲಿ ಟೀಂ ಇಂಡಿಯಾ ಗೆಲುವಿನೊಂದಿಗೆ ಸರಣಿ ಆರಂಭಿಸಿದ್ದು, ಇದೀಗ ಎರಡನೇ ಪಂದ್ಯಕ್ಕೆ ಸಿದ್ಧತೆ ಆರಂಭಿಸಿದೆ. ಈ ಪಂದ್ಯಕ್ಕಾಗಿ, ಬುಮ್ರಾ ಬದಲಿಗೆ ಮೊಹಮ್ಮದ್ ಸಿರಾಜ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ 2ನೇ ಟಿ20 ಪಂದ್ಯಕ್ಕಾಗಿ ಸಿರಾಜ್ ಕೂಡ ಗುವಾಹಟಿಯಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಟಿ20 ಪಂದ್ಯವನ್ನು ಆಡಿದ್ದ ಸಿರಾಜ್, ಆ ಪಂದ್ಯದಲ್ಲಿ 22 ರನ್ ನೀಡಿ 1 ವಿಕೆಟ್ ಪಡೆದಿದ್ದರು.
ಟಿ20 ಪ್ರದರ್ಶನ ಹೇಗಿದೆ?
ಆದರೆ, ಸಿರಾಜ್ ಈ ಸ್ವರೂಪದಲ್ಲಿ ಹೆಚ್ಚು ಯಶಸ್ವಿಯಾಗಲಿಲ್ಲ ಮತ್ತು ಆದ್ದರಿಂದ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ. ಸಿರಾಜ್ ಟೀಂ ಇಂಡಿಯಾ ಪರ ಕೇವಲ 5 ಟಿ20 ಪಂದ್ಯಗಳನ್ನಾಡಿದ್ದು, ಇದರಲ್ಲಿ 5 ವಿಕೆಟ್ ಪಡೆದು 10 ಕ್ಕೂ ಹೆಚ್ಚು ಎಕಾನಮಿಯಲ್ಲಿ ರನ್ ನೀಡಿದ್ದಾರೆ. ಅಲ್ಲದೆ, ಈ ವರ್ಷದ ಐಪಿಎಲ್ ಸೀಸನ್ ಕೂಡ ಸಿರಾಜ್ಗೆ ಚೆನ್ನಾಗಿರಲಿಲ್ಲ.
ಆದಾಗ್ಯೂ, ಬಲಗೈ ವೇಗದ ಬೌಲರ್ ಇತ್ತೀಚಿನ ದಿನಗಳಲ್ಲಿ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಸಿರಾಜ್ ಪ್ರದರ್ಶನ ಉತ್ತಮವಾಗಿತ್ತು. ಕೆಲವು ದಿನಗಳ ಹಿಂದೆ ಇಂಗ್ಲೆಂಡ್‌ನಲ್ಲಿ ನಡೆದ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ 6 ವಿಕೆಟ್ ಪಡೆಯುವುದರೊಂದಿಗೆ ಸಿರಾಜ್ ಇಂಗ್ಲೆಂಡ್ ನೆಲದಲ್ಲಿ ಮಿಂಚಿದ್ದರು.
Published On - 5:46 pm, Fri, 30 September 22