
ಭಾರತ ಮಹಿಳಾ ಕ್ರಿಕೆಟ್ ತಂಡ (Indian women’s cricket team) ಇತ್ತೀಚೆಗಷ್ಟೇ ನಡೆದಿದ್ದ 2025 ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಎತ್ತಿಹಿಡಿದಿತ್ತು. ಇದಾದ ಬಳಿಕ ಬಿಸಿಸಿಐ (BCCI) ಕೂಡ ಮಹಿಳಾ ತಂಡಕ್ಕೆ ಭಾರಿ ಮೊತ್ತದ ಬಹುಮಾನ ಘೋಷಿಸಿತ್ತು. ಇದೆಲ್ಲದರ ನಡುವೆ ಇದೀಗ ಬಿಸಿಸಿಐ ಭಾರತದ ಮಹಿಳಾ ಆಟಗಾರ್ತಿಯರಿಗೆ ಮಹತ್ವದ ಉಡುಗೊರೆಯನ್ನು ನೀಡಿದೆ. ಅದೆನೆಂದರೆ ಬಿಸಿಸಿಐ, ದೇಶೀಯ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಪಂದ್ಯ ಶುಲ್ಕದಲ್ಲಿ ಭಾರಿ ಹೆಚ್ಚಳ ಮಾಡಿದೆ. ಈಗ, ದೇಶೀಯ ಕ್ರಿಕೆಟ್‌ನಲ್ಲಿ ಮಹಿಳಾ ಆಟಗಾರ್ತಿಯರ ಪಂದ್ಯ ಶುಲ್ಕವು ಪುರುಷ ಆಟಗಾರರಿಗೆ ಸಮಾನವಾಗಿದೆ.
ಮಹಿಳಾ ಕ್ರಿಕೆಟ್ನ ಏಳಿಗೆಗೆ ಸಾಕಷ್ಟು ಶ್ರಮಿಸುತ್ತಿರುವ ಬಿಸಿಸಿಐ ಇದೀಗ, ಮಹಿಳಾ ಆಟಗಾರ್ತಿಯರು ಮತ್ತು ಪಂದ್ಯದ ಅಧಿಕಾರಿಗಳ ಪಂದ್ಯ ಶುಲ್ಕವನ್ನು ದ್ವಿಗುಣಗೊಳಿಸಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಸಮಾನ ಪಂದ್ಯ ಶುಲ್ಕವನ್ನು ನೀಡಲು ಮುಂದಾಗಿದೆ. ಇದರ ಪ್ರಕಾರ, ದೇಶೀಯ ಏಕದಿನ ಮತ್ತು ಬಹು-ದಿನ (ದೀರ್ಘ ಸ್ವರೂಪ) ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಮಹಿಳಾ ಆಟಗಾರ್ತಿಯರು ದಿನಕ್ಕೆ 50,000 ರ ಪಂದ್ಯ ಶುಲ್ಕವನ್ನು ಪಡೆಯಲಿದ್ದಾರೆ. ಹಾಗೆಯೇ ಮೀಸಲು ಆಟಗಾರ್ತಿಯರು ಪ್ರತಿ ಪಂದ್ಯಕ್ಕೆ 25,000 ರೂ. ಪಂದ್ಯ ಶುಲ್ಕ ಪಡೆಯಲಿದ್ದಾರೆ. ಟಿ20 ಪಂದ್ಯಗಳ ಪ್ಲೇಯಿಂಗ್ 11 ನಲ್ಲಿರುವ ಆಟಗಾರ್ತಿಯರು 25,000 ರೂ. ವೇತನ ಪಡೆದರೆ, ಮೀಸಲು ಆಟಗಾರ್ತಿಯರು ಪ್ರತಿ ಪಂದ್ಯಕ್ಕೆ 12,500 ರೂ. ವೇತನ ಪಡೆಯಲಿದ್ದಾರೆ. ಈ ಹಿಂದೆ, ಹಿರಿಯ ಮಹಿಳಾ ಆಟಗಾರ್ತಿಯರು ಪ್ಲೇಯಿಂಗ್ 11ನಲ್ಲಿದ್ದರೆ, ಅವರಿಗೆ 20,000 ರೂ. ವೇತನ ಮತ್ತು ಮೀಸಲು ಆಟಗಾರ್ತಿಯರು ಪ್ರತಿ ಪಂದ್ಯಕ್ಕೆ 10,000 ರೂ. ವೇತನ ಪಡೆಯುತ್ತಿದ್ದರು.
ಜೂನಿಯರ್ ಮಟ್ಟದ ಪಂದ್ಯಾವಳಿಗಳಲ್ಲಿಯೂ ಸಮಾನತೆಯನ್ನು ಜಾರಿಗೆ ತರಲಾಗಿದೆ. ಬಹು-ದಿನ ಅಥವಾ ಏಕದಿನ ಪಂದ್ಯಗಳಲ್ಲಿ, ಪ್ಲೇಯಿಂಗ್ 11ನಲ್ಲಿರುವ ಆಟಗಾರ್ತಿಯರಿಗೆ ದಿನಕ್ಕೆ 25,000 ರೂ. ವೇತನ ಮತ್ತು ಮೀಸಲು ಆಟಗಾರ್ತಿಯರಿಗೆ 12,500 ರೂ. ವೇತನ ಸಿಗಲಿದೆ. ಹಾಗೆಯೇ ಟಿ20 ಪಂದ್ಯಗಳಲ್ಲಿ ಪ್ಲೇಯಿಂಗ್ 11ನಲ್ಲಿರುವ ಆಟಗಾರ್ತಿಯರಿಗೆ 12,500 ರೂ. ವೇತನ ಮತ್ತು ಮೀಸಲು ಆಟಗಾರ್ತಿಯರಿಗೆ 6,250 ವೇತನ ಸಿಗಲಿದೆ.
ಏಕೈಕ ಆಟಗಾರನಿಗೆ ವಿನಾಯಿತಿ ನೀಡಿ ಮಿಕ್ಕವರಿಗೆ ಖಡಕ್ ಆದೇಶ ಹೊರಡಿಸಿದ ಬಿಸಿಸಿಐ
ಮತ್ತೊಂದೆಡೆ, ಅಂಪೈರ್‌ಗಳು ಮತ್ತು ಮ್ಯಾಚ್ ರೆಫರಿಗಳು ಸೇರಿದಂತೆ ಪಂದ್ಯದ ಅಧಿಕಾರಿಗಳ ವೇತನದಲ್ಲೂ ಹೆಚ್ಚಳವಾಗಿದೆ. ದೇಶೀಯ ಪಂದ್ಯಾವಳಿಗಳಲ್ಲಿ ಲೀಗ್ ಪಂದ್ಯಗಳಿಗೆ ಅಂಪೈರ್‌ಗಳು ಮತ್ತು ಮ್ಯಾಚ್ ರೆಫರಿಗಳಿಗೆ ದಿನಕ್ಕೆ 40,000 ರೂ. ವೇತನ ಸಿಗಲಿದೆ. ನಾಕೌಟ್ ಪಂದ್ಯಗಳಿಗೆ, ದೈನಂದಿನ ವೇತನ 50,000 ರಿಂದ 60,000 ರವರೆಗೆ ಇರಲಿದೆ. ಈ ಹೆಚ್ಚಳದ ಅಡಿಯಲ್ಲಿ, ರಣಜಿ ಟ್ರೋಫಿ ಲೀಗ್ ಪಂದ್ಯಗಳಲ್ಲಿ ಅಂಪೈರ್ ಮಾಡುವವರು ಈಗ ಪ್ರತಿ ಪಂದ್ಯಕ್ಕೆ ಸುಮಾರು 1.60 ಲಕ್ಷ ರೂ. ವೇತನ ಪಡೆಯುತ್ತಾರೆ. ಹಾಗೆಯೇ ನಾಕೌಟ್ ಪಂದ್ಯಗಳಲ್ಲಿ ಅಂಪೈರ್ ಮಾಡುವವರು ಪ್ರತಿ ಪಂದ್ಯಕ್ಕೆ 2.5 ಲಕ್ಷದಿಂದ 3 ಲಕ್ಷದವರೆಗೆ ವೇತನ ಪಡೆಯಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:20 pm, Tue, 23 December 25