ಗಿಲ್, ಗಂಭೀರ್ ಆಸೆಗೆ ತಣ್ಣೀರೆರಚಿದ ಮೂವರು ಆಯ್ಕೆಗಾರರು
T20 World Cup 2026: ಫೆಬ್ರವರಿ 7 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಿದರೆ, ಉಪನಾಯಕನಾಗಿ ಅಕ್ಷರ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಈ ಹಿಂದೆ ವೈಸ್ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದ ಶುಭ್ಮನ್ ಗಿಲ್ ಅವರನ್ನು ಭಾರತ ತಂಡದಿಂದ ಕೈ ಬಿಡಲಾಗಿದೆ.

ಟಿ20 ವಿಶ್ವಕಪ್ಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಶುಭ್ಮನ್ ಗಿಲ್ ಕಾಣಿಸಿಕೊಂಡಿಲ್ಲ. ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ವೈಸ್ ಕ್ಯಾಪ್ಟನ್ ಆಗಿ ಕಣಕ್ಕಿಳಿದಿದ್ದ ಗಿಲ್ ಅವರನ್ನು ಏಕಾಏಕಿ ಕೈ ಬಿಡಲು ಕಾರಣವೇನು? ಎಂಬ ಪ್ರಶ್ನೆಗೆ ಸಿಗುವ ಉತ್ತರ ಕಳಪೆ ಫಾರ್ಮ್. ಇದಾಗ್ಯೂ ಶುಭ್ಮನ್ ಗಿಲ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಬಯಸಿದ್ದರು ಎಂಬ ವಿಚಾರ ಬಹಿರಂಗವಾಗಿದೆ.
ಕೆಲ ವರದಿಗಳ ಪ್ರಕಾರ, ಗೌತಮ್ ಗಂಭೀರ್ ಟಿ20 ವಿಶ್ವಕಪ್ಗೂ ಶುಭ್ಮನ್ ಗಿಲ್ ಅವರನ್ನು ಆಯ್ಕೆ ಮಾಡುವಂತೆ ಕೇಳಿಕೊಂಡಿದ್ದರು. ಇದಕ್ಕೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಕೂಡ ಸಮ್ಮತಿ ವ್ಯಕ್ತಪಡಿಸಿದ್ದರು. ಇದರಿಂದ ಆಯ್ಕೆ ಸಮಿತಿ ಸದಸ್ಯರುಗಳಲ್ಲಿ ಈ ಬಗ್ಗೆ ಭಿನ್ನಾಭಿಪ್ರಾಯಗಳು ಏರ್ಪಟ್ಟಿದೆ. ಈ ಭಿನ್ನಾಭಿಪ್ರಾಯಗಳಿಂದಲೇ ಶುಭ್ಮನ್ ಗಿಲ್ ತಂಡದಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.
ಬಿಸಿಸಿಐ ಆಯ್ಕೆ ಸಮಿತಿ ನಿಯಮಗಳ ಪ್ರಕಾರ, ಹೆಚ್ಚಿನ ಸಮ್ಮತಿಯನ್ನು ಮೊದಲು ಪರಿಗಣಿಸಬೇಕು. ಅಂದರೆ ಐವರು ಆಯ್ಕೆಗಾರರಲ್ಲಿ ಮೂವರು ಓರ್ವ ಆಟಗಾರನ ಪರ ಬ್ಯಾಟ್ ಬೀಸಿದರೆ ಅವರಿಗೆ ಅವಕಾಶ ನೀಡಬೇಕಾಗುತ್ತದೆ. ಶುಭ್ಮನ್ ಗಿಲ್ ವಿಷಯದಲ್ಲಿ ಮೂವರು ಆಯ್ಕೆಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿಯೇ ಅವರು ಭಾರತ ಟಿ20 ತಂಡದಿಂದ ಹೊರಬಿದ್ದಿದ್ದಾರೆ ಎನ್ನಲಾಗುತ್ತಿದೆ.
ಇಲ್ಲಿ ಮುಖ್ಯವಾಗಿ ಆಯ್ಕೆ ಸಮಿತಿ ಸದಸ್ಯರುಗಳಾದ ಆರ್ಪಿ ಸಿಂಗ್ ಹಾಗೂ ಪ್ರಗ್ಯಾನ್ ಓಜಾ ಶುಭ್ಮನ್ ಗಿಲ್ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ದೇಶೀಯ ಟಿ20 ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಇಶಾನ್ ಕಿಶನ್ ಆಯ್ಕೆಗೆ ಹೆಚ್ಚಿನ ಒಲವು ತೋರಿದ್ದಾರೆ.
ಆರ್ಪಿ ಸಿಂಗ್ ಹಾಗೂ ಓಜಾ ಅವರ ನಿಲುವಿಗೆ ಮತ್ತೋರ್ವ ಆಯ್ಕೆ ಸಮಿತಿ ಸದಸ್ಯ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಐವರಲ್ಲಿ ಮೂರು ಗಿಲ್ ಆಯ್ಕೆಗೆ ಅಸಮ್ಮತಿ ವ್ಯಕ್ತಪಡಿಸಿದ್ದರಿಂದಾಗಿ ಕೈ ಬಿಡಲೇಬೇಕಾಯಿತು. ಇದರಿಂದಾಗಿ ಗೌತಮ್ ಗಂಭೀರ್ ಹಾಗೂ ಅಜಿತ್ ಅಗರ್ಕರ್ಗೆ ಹಿನ್ನಡೆಯಾಗಿದೆ.
ಅತ್ತ ಆರ್ಪಿ ಸಿಂಗ್, ಪ್ರಗ್ಯಾನ್ ಓಜಾ ಹಾಗೂ ಮತ್ತೋರ್ವ ಆಯ್ಕೆ ಸಮಿತಿ ಸದಸ್ಯ ಗಿಲ್ ಅವರನ್ನು ಕೈ ಬಿಟ್ಟು ಪ್ರಸ್ತುತ ಫಾರ್ಮ್ನಲ್ಲಿರುವ ಆಟಗಾರನಿಗೆ ಅವಕಾಶ ಕಲ್ಪಿಸಬೇಕೆಂಬ ನಿರ್ಧಾರಕ್ಕೆ ಬದ್ಧರಾಗಿದ್ದರಿಂದ ಇಶಾನ್ ಕಿಶನ್ಗೆ ಭಾರತ ಟಿ20 ತಂಡದಲ್ಲಿ ಸ್ಥಾನ ಲಭಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ವಿಜಯ ಹಝಾರೆ ಟೂರ್ನಿಯಲ್ಲಿ ವಿರಾಟ್ ಕೊಹ್ಲಿಯ ಅಂಕಿ ಅಂಶಗಳು ಹೇಗಿದೆ?
ಇದರಿಂದ ಕಳಪೆ ಫಾರ್ಮ್ ಹೊರತಾಗಿಯೂ ಶುಭ್ಮನ್ ಗಿಲ್ ಅವರನ್ನು ನ್ಯೂಝಿಲೆಂಡ್ ಸರಣಿ ಹಾಗೂ ಟಿ20 ವಿಶ್ವಕಪ್ಗೆ ಆಯ್ಕೆ ಮಾಡಲು ಬಯಸಿದ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ಗೆ ಹಿನ್ನಡೆಯಾಗಿದೆ. ಇದಾಗ್ಯೂ ಶುಭ್ಮನ್ ಗಿಲ್ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಈ ಸರಣಿಯು ಜನವರಿ 11 ರಿಂದ ಶುರುವಾಗಲಿದ್ದು, ಈ ಸರಣಿಗಾಗಿ ಈ ತಿಂಗಳಾಂತ್ಯದೊಳಗೆ ತಂಡ ಪ್ರಕಟವಾಗುವ ಸಾಧ್ಯತೆಯಿದೆ.
