T20 World Cup 2023: ಕೊನೆಯ 10 ಎಸೆತಗಳಲ್ಲಿ 6 ಸಿಕ್ಸರ್! ರಿಚಾ ಘೋಷ್ ಅಬ್ಬರಕ್ಕೆ ತತ್ತರಿಸಿದ ಬಾಂಗ್ಲಾ

| Updated By: ಪೃಥ್ವಿಶಂಕರ

Updated on: Feb 09, 2023 | 10:17 AM

T20 World Cup 2023: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು. ಟೀಂ ಇಂಡಿಯಾ ಪರ ರಿಚಾ ಘೋಷ್ 56 ಎಸೆತಗಳಲ್ಲಿ 91 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು.

T20 World Cup 2023: ಕೊನೆಯ 10 ಎಸೆತಗಳಲ್ಲಿ 6 ಸಿಕ್ಸರ್! ರಿಚಾ ಘೋಷ್ ಅಬ್ಬರಕ್ಕೆ ತತ್ತರಿಸಿದ ಬಾಂಗ್ಲಾ
ರಿಚಾ ಘೋಷ್
Follow us on

ಅಂಡರ್-19 ಮಹಿಳಾ ತಂಡ ಟಿ20 ವಿಶ್ವಕಪ್ (T20 World Cup) ಗೆದ್ದ ಬಳಿಕ ಇದೀಗ ಹಿರಿಯರ ವನಿತಾ ತಂಡ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟಕ್ಕಾಗಿ ಹೋರಾಟ ಆರಂಭಿಸಿದೆ. ಮಹಿಳೆಯರ ಟಿ20 ವಿಶ್ವಕಪ್ ಶುಕ್ರವಾರದಿಂದ (ಫೆಬ್ರವರಿ 10) ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಲಿದೆ. ಹರ್ಮನ್‌ಪ್ರೀತ್ ಕೌರ್ (Harmanpreet Kaur) ಸಾರಥ್ಯದ ಭಾರತ ತಂಡ ಹೇಗಾದರೂ ಮಾಡಿ ಪ್ರಶಸ್ತಿ ಗೆಲ್ಲಲೇಬೇಕೆಂಬ ಹಠದಲ್ಲಿದೆ. ಇದೇ ವೇಳೆ ಟೂರ್ನಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ (Team India) ಅಭ್ಯಾಸ ಪಂದ್ಯಗಳನ್ನು ಆಡುತ್ತಿದ್ದು, ಏತನ್ಮಧ್ಯೆ, ಆಸೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ವಿಫಲವಾದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 52 ರನ್‌ಗಳ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಅಂಡರ್ 19 ವಿಶ್ವ ಚಾಂಪಿಯನ್ ತಂಡದಲ್ಲಿದ್ದ 19 ವರ್ಷದ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ (Richa Ghosh) ಸಿಕ್ಸರ್​ಗಳ ಸುರಿಮಳೆಗೈದು ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು. ಟೀಂ ಇಂಡಿಯಾ ಪರ ರಿಚಾ ಘೋಷ್ 56 ಎಸೆತಗಳಲ್ಲಿ 91 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ತಮ್ಮ ಇನ್ನಿಂಗ್ಸ್‌ನಲ್ಲಿ 9 ಸಿಕ್ಸರ್ ಮತ್ತು 3 ಬೌಂಡರಿ ಬಾರಿಸಿದ ರಿಚಾ, ಆಡಿದ ಕೊನೆಯ 10 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ್ದು ಗಮನಾರ್ಹ. ಕೊನೆಯ 10 ಎಸೆತಗಳಲ್ಲಿ ರಿಚಾ 6,1,6,6,1,6,1,6,6,1.. ಹೀಗೆ ರನ್ ಕಲೆ ಹಾಕಿದರು.

IND vs AUS: ಆಸೀಸ್ ವಿರುದ್ಧ ವಿಶ್ವ ದಾಖಲೆ ಬರೆಯುವ ಹೊಸ್ತಿಲಿನಲ್ಲಿ ಕಿಂಗ್ ಕೊಹ್ಲಿ..!

ಅನುಭವಿಗಳಿಗೆ ವಿಶ್ರಾಂತಿ

ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಪ್ರತಿ ತಂಡ 2 ಅಭ್ಯಾಸ ಪಂದ್ಯಗಳನ್ನು ಆಡಬೇಕಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಸೋತಿತ್ತು. ಬಾಂಗ್ಲಾ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಪರ ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಮತ್ತು ದೀಪ್ತಿ ಶರ್ಮಾ ಅವರಂತಹ ಹಿರಿಯ ಆಟಗಾರ್ತಿಯರು ವಿಶ್ರಾಂತಿ ಪಡೆದಿದ್ದರು. ಹೀಗಾಗಿ ಅನುಭವಿಗಳ ಜಾಗದಲ್ಲಿ ಯುವ ಆಟಗಾರ್ತಿಯರು ಮತ್ತು ಬ್ಯಾಕಪ್ ಆಟಗಾರ್ತಿಯರಿಗೆ ಅವಕಾಶ ನೀಡಲಾಗಿತ್ತು. ಆದರೆ ಪವರ್ ಪ್ಲೇನಲ್ಲಿ ಭಾರತ 35 ರನ್‌ಗಳಿಗೆ ಮೂರು ನಿರ್ಣಾಯಕ ವಿಕೆಟ್‌ಗಳನ್ನು ಕಳೆದುಕೊಂಡಿತು.

ನಂತರ ಜೊತೆಯಾದ ರಿಚಾ ಮತ್ತು ಜೆಮಿಮಾ ರಾಡ್ರಿಗಸ್ 27 ಎಸೆತಗಳಲ್ಲಿ 41 ರನ್ ಕಲೆಹಾಕಿದರು. ಇವರಿಬ್ಬರು ನಾಲ್ಕನೇ ವಿಕೆಟ್​ಗೆ 92 ರನ್​ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು 5 ವಿಕೆಟ್​ ನಷ್ಟಕ್ಕೆ 183ರನ್​ಗಳಿಗೆ ತಲುಪಿಸಿದರು. ಪೂಜಾ ವಸ್ತ್ರಾಕರ್ ನಾಲ್ಕು ಎಸೆತಗಳಲ್ಲಿ ಎರಡು ಸಿಕ್ಸರ್‌ಗಳೊಂದಿಗೆ ಅಜೇಯ 13 ರನ್ ಗಳಿಸಿದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 183 ರನ್ ಗಳಿಸಿತು.

ಬಾಂಗ್ಲಾ ತಂಡಕ್ಕೆ 52 ರನ್ ಸೋಲು

ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 131 ರನ್‌ಗಳಿಗೆ ಆಲೌಟ್​ ಆಗುವುದರೊಂದಿಗೆ 52 ರನ್‌ಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿತು. ಭಾರತದ ಪರ ದೇವಿಕಾ ವೈದ್ಯ (2/21) ಹೆಚ್ಚು ವಿಕೆಟ್ ಪಡೆದರೆ, ರಾಜೇಶ್ವರಿ ಗಾಯಕ್ವಾಡ್, ಅಂಜಲಿ ಸರ್ವಾನಿ, ದೀಪ್ತಿ ಶರ್ಮಾ, ರಾಧಾ ಯಾದವ್ ಮತ್ತು ಶೆಫಾಲಿ ವರ್ಮಾ ತಲಾ ಒಂದು ವಿಕೆಟ್ ಪಡೆದರು. ವಿಶ್ವಕಪ್ ಟೂರ್ನಿಯ ಅಂಗವಾಗಿ ಭಾರತ ತಂಡ ಭಾನುವಾರ (ಫೆಬ್ರವರಿ 12) ಬಹುಕಾಲದ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:06 am, Thu, 9 February 23