Women’s T20 World Cup 2024: ಚೊಚ್ಚಲ ಟಿ20 ವಿಶ್ವಕಪ್ ಎತ್ತಿಹಿಡಿದ ನ್ಯೂಜಿಲೆಂಡ್
Women’s T20 World Cup 2024 Final: ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 9ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಉಭಯ ತಂಡಗಳ ನಡುವೆ ನಡೆದ ಈ ಹೈವೋಲ್ಟೇಜ್ ಕದನದಲ್ಲಿ ನ್ಯೂಜಿಲೆಂಡ್ ಮಹಿಳಾ ಪಡೆ 32 ರನ್ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸುವ ಮೂಲಕ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 9ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಉಭಯ ತಂಡಗಳ ನಡುವೆ ನಡೆದ ಈ ಹೈವೋಲ್ಟೇಜ್ ಕದನದಲ್ಲಿ ನ್ಯೂಜಿಲೆಂಡ್ ಮಹಿಳಾ ಪಡೆ 32 ರನ್ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸುವ ಮೂಲಕ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಇತ್ತ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್ಗೇರಿದ್ದ ದಕ್ಷಿಣ ಆಫ್ರಿಕಾ ತಂಡ ಮತ್ತೊಮ್ಮೆ ಫೈನಲ್ ಪಂದ್ಯದಲ್ಲಿ ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ಕಳೆದ ಆವೃತ್ತಿಯಲ್ಲೂ ಫೈನಲ್ಗೇರಿದ್ದ ದಕ್ಷಿಣ ಆಫ್ರಿಕಾ ತಂಡ, ಆಸ್ಟ್ರೇಲಿಯಾ ವಿರುದ್ಧ ಸೋತು ಪ್ರಶಸ್ತಿಯಿಂದ ವಂಚಿತವಾಗಿತ್ತು. ಇದೀಗ ಸತತ ಎರಡನೇ ಬಾರಿಯೂ ಪ್ರಶಸ್ತಿ ಎತ್ತಿ ಹಿಡಿಯುವಲ್ಲಿ ವಿಫಲವಾಗಿದೆ. ಇನ್ನು 2010 ರ ಬಳಿಕ ಇದೇ ಮೊದಲ ಬಾರಿಗೆ ಫೈನಲ್ಗೇರಿದ್ದ ನ್ಯೂಜಿಲೆಂಡ್ ತಂಡ ಸೋಫಿ ಡಿವೈನ್ ನಾಯಕತ್ವದಲ್ಲಿ ಇದೇ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
158 ರನ್‌ಗಳ ಟಾರ್ಗೆಟ್
ಫೈನಲ್ ಪಂದ್ಯದಲ್ಲಿ ಟಾಸ್ ಸೋತ ನ್ಯೂಜಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಿ ದಕ್ಷಿಣ ಆಫ್ರಿಕಾಕ್ಕೆ 159 ರನ್‌ಗಳ ಗುರಿ ನೀಡಿತು. ತಂಡದ ಪರ ಸುಜಿ ಬೇಟ್ಸ್ 32 ರನ್, ಅಮೆಲಿಯಾ ಕೆರ್ 43 ರನ್ ಮತ್ತು ಬ್ರೂಕ್ ಹ್ಯಾಲಿಡೇ 38 ರನ್‌ಗಳ ಪ್ರಬಲ ಇನ್ನಿಂಗ್ಸ್ ಆಡಿದರು. ಈ ಮೂವರ ಪ್ರದರ್ಶನದಿಂದಾಗಿ ತಂಡ 20 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತು. ಇನ್ನು ದಕ್ಷಿಣ ಆಫ್ರಿಕಾ ಪರ ಬೌಲಿಂಗ್ನಲ್ಲಿ ಮಿಂಚಿದ ಮ್ಲಾಬಾ ಎರಡು ವಿಕೆಟ್ ಪಡೆದರೆ, ಖಾಕಾ, ಟ್ರೇಯಾನ್ ಮತ್ತು ನಡಿನ್ ಡಿ ಕ್ಲರ್ಕ್ ತಲಾ ಒಂದು ವಿಕೆಟ್ ಪಡೆದರು.
👑 CHAMPIONS 👑
New Zealand win their maiden Women’s #T20WorldCup title 🏆#WhateverItTakes #SAvNZ pic.twitter.com/Ab0lbjRM4w
— T20 World Cup (@T20WorldCup) October 20, 2024
ಉತ್ತಮ ಆರಂಭದ ಬಳಿಕ ಎಡವಿದ ಆಫ್ರಿಕಾ
ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ವಿಕೆಟ್ಗೆ ಅರ್ಧಶತಕದ ಜೊತೆಯಾಟ ಸಿಕ್ಕಿತು. ಆರಂಭಿಕರಾದ ನಾಯಕಿ ಲಾರಾ ವೊಲ್ವಾರ್ಡ್ಟ್ ಹಾಗೂ ತಜ್ಮಿನ್ ಬ್ರಿಟ್ಸ್ ಮೊದಲ ವಿಕೆಟ್ಗೆ 51 ರನ್‌ಗಳ ಜೊತೆಯಾಟ ನೀಡಿದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು. ಬ್ರಿಟ್ಸ್ 17 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ನಾಯಕಿಯ ಇನ್ನಿಂಗ್ಸ್ 33 ರನ್ಗಳಿಗೆ ಕೊನೆಯಾಯಿತು. ಭರವಸೆಯ ಬ್ಯಾಟರ್ ಅನ್ನೆಕೆ ಬಾಷ್ ಬಿಗ್ ಶಾಟ್ ಆಡುವ ಯತ್ನದಲ್ಲಿ ಕೇವಲ 9 ರನ್ಗಳಿಗೆ ವಿಕೆಟ್ ಕೈಚೆಲ್ಲಿದರು. ಅನುಭವಿ ಮರಿಜಾನ್ನೆ ಕಪ್ ಕೂಡ 8 ರನ್ಗಳಿಗೆ ಸುಸ್ತಾದರು. ಕೆಳಕ್ರಮಾಂಕದ ಬ್ಯಾಟರ್ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 126 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:45 pm, Sun, 20 October 24