ಯುಎಇಯಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾಗೆ ಉತ್ತಮ ಆರಂಭ ಸಿಕ್ಕಿಲ್ಲ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿಯೇ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಆ ಸೋಲಿಗೆ ತಂಡದ ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನವೇ ಪ್ರಮುಖ ಕಾರಣವಾಗಿತ್ತು. ಇದಕ್ಕೆ ಪೂರಕವಾಗಿ ತಂಡದ ಕಳಪೆ ಫೀಲ್ಡಿಂಗ್ ಕೂಡ ಸೋಲಿಗೆ ಸಾಥ್ ನೀಡಿತ್ತು. ಆದರೆ ಆ ಮೊದಲ ಸೋಲಿನ ನಂತರವೂ ಟೀಂ ಇಂಡಿಯಾ ತನ್ನ ತಪ್ಪನ್ನು ತಿದ್ದುಕೊಂಡಿರುವಂತೆ ತೋರುತ್ತಿಲ್ಲ. ಪಾಕಿಸ್ತಾನ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲೂ ಇದೇ ಪರಿಸ್ಥಿತಿ ಕಂಡುಬಂದಿದ್ದು, ಈ ಪಂದ್ಯದಲ್ಲೂ ಟೀಂ ಇಂಡಿಯಾ 2 ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟಿತು. ಅಚ್ಚರಿಯೆಂದರೆ ಈ ಎರಡೂ ಕ್ಯಾಚ್‌ಗಳನ್ನು ಆಶಾ ಶೋಭನಾ ಕೈಬಿಟ್ಟರು.
ಮೇಲೆ ಹೇಳಿದಂತೆ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿರುವ ಕಾರಣ, ಯಾವುದೇ ಬೆಲೆ ತೆತ್ತಾದರೂ ಪಾಕಿಸ್ತಾನ ವಿರುದ್ಧ ಗೆಲ್ಲುವುದು ಅನಿವಾರ್ಯವಾಗಿದೆ. ಅದರಂತೆ ಪಾಕಿಸ್ತಾನ ವಿರುದ್ಧ ಟಾಸ್ ಸೋತು ಮೊದಲು ಫೀಲ್ಡಿಂಗ್‌ಗೆ ಇಳಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಲಭಿಸಿತು. ನಿಗದಿತ ಅಂತರದಲ್ಲಿ ಭಾರತದ ಬೌಲರ್ಗಳು ಪಾಕ್ ಬ್ಯಾಟರ್ಗಳನ್ನು ಪೆವಲಿಯನ್ಗಟ್ಟುವಲ್ಲಿ ಯಶಸ್ವಿಯಾದರು. ಆದರೆ ಮೊದಲ ಪಂದ್ಯದಂತೆ ಈ ಪಂದ್ಯದಲ್ಲೂ ಟೀಂ ಇಂಡಿಯಾ ತನ್ನ ಕಳಪೆ ಫೀಲ್ಡಿಂಗ್‌ಗೆ ಭಾರಿ ಬೆಲೆ ತೆರಬೇಕಾಯಿತು.
ತಂಡದ ಹಿರಿಯ ಲೆಗ್ ಸ್ಪಿನ್ನರ್ ಆಶಾ ಶೋಭನಾ ಎರಡು ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದರು. ದುರದೃಷ್ಟಕರ ಸಂಗತಿಯೆಂದರೆ ಅರುಂಧತಿ ರೆಡ್ಡಿ ಎಸೆದ ಎರಡು ಓವರ್ಗಳಲ್ಲಿ ಆಶಾ ಈ ಎರಡೂ ಕ್ಯಾಚ್‌ಗಳನ್ನು ಕೈಬಿಟ್ಟರು. ಅರುಂಧತಿ ಎಸೆದ ಏಳನೇ ಓವರ್‌ನ ಎರಡನೇ ಎಸೆತವನ್ನು ಮುನಿಬಾ ಅಲಿ ಸ್ಕೂಪ್ ಶಾಟ್ ಆಡಿದರು. ಆದರೆ ಶಾರ್ಟ್ ಫೈನಲ್ ಲೆಗ್‌ನಲ್ಲಿ ನಿಂತಿದ್ದ ಆಶಾಗೆ ಈ ನೇರ ಕ್ಯಾಚ್ ಅನ್ನು ಸಹ ಹಿಡಿಯಲು ಸಾಧ್ಯವಾಗಲಿಲ್ಲ. ಆದರೆ, ಅರುಂಧತಿ ಅದೇ ಓವರ್‌ನಲ್ಲಿ ಮುನಿಬಾ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು.
— The Game Changer (@TheGame_26) October 6, 2024
ಒಂದು ತಪ್ಪಿನ ನಂತರವೂ ಆಶಾ ಅವರ ಫೀಲ್ಡಿಂಗ್‌ನಲ್ಲಿ ಯಾವುದೇ ಸುಧಾರಣೆ ಕಾಣಲಿಲ್ಲ. 13 ನೇ ಓವರ್ ಬೌಲ್ ಮಾಡಲು ಬಂದ ಅರುಂಧತಿ ಅವರ ಓವರ್‌ನಲ್ಲಿ ಮತ್ತೊಮ್ಮೆ ಆಶಾ ಇನ್ನೊಂದು ಕ್ಯಾಚ್ ಕೈಚೆಲ್ಲಿದರು. ಈ ವೇಳೆ ಸ್ಟ್ರೈಕ್ನಲ್ಲಿದ್ದ ಪಾಕಿಸ್ತಾನದ ಡ್ಯಾಶಿಂಗ್ ನಾಯಕಿ ಫಾತಿಮಾ ಸನಾ ಶಾರ್ಟ್ ಥರ್ಡ್ ಮ್ಯಾನ್ ಕಡೆ ಶಾಟ್ ಆಡಿದರು. ಆದರೆ ಅಲ್ಲೇ ಪೋಸ್ಟ್ ಮಾಡಿದ್ದ ಆಶಾಗೆ ಅದೇ ಸರಳ ಕ್ಯಾಚ್ ಅನ್ನು ಮತ್ತೆ ಹಿಡಿಯಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾ ಮತ್ತೆ ಇದರ ಭಾರವನ್ನು ಹೊರಬೇಕಾಯಿತು. ಮುಂದಿನ ಓವರ್‌ನಲ್ಲಿ ಸನಾ, ಆಶಾ ಅವರ ಎಸೆತಗಳಲ್ಲಿ ಸತತ ಎರಡು ಬೌಂಡರಿಗಳನ್ನು ಬಾರಿಸಿದರು. ಆದರೆ, ಆಶಾ ಈ ಓವರ್‌ನ ಕೊನೆಯ ಎಸೆತದಲ್ಲಿ ಅವರ ವಿಕೆಟ್ ಪಡೆಯುವ ಮೂಲಕ ತನಗೆ ಮತ್ತು ತಂಡಕ್ಕೆ ಸಮಾಧಾನ ತಂದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:08 pm, Sun, 6 October 24