2028 ರ ಟಿ20 ವಿಶ್ವಕಪ್ ಆತಿಥ್ಯವನ್ನು ಪಾಕಿಸ್ತಾನಕ್ಕೆ ನೀಡಿದ ಐಸಿಸಿ

|

Updated on: Dec 19, 2024 | 6:06 PM

T20 World Cup 2028: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಪಾಕಿಸ್ತಾನ ಒಪ್ಪಿಕೊಂಡಿದೆ. ಇದರ ಜೊತೆಗೆ 2024 ರಿಂದ 2027ರವರೆಗೆ ಭಾರತ ಮತ್ತು ಪಾಕಿಸ್ತಾನದ ಪಂದ್ಯಗಳು ತಟಸ್ಥ ಸ್ಥಳಗಳಲ್ಲಿ ನಡೆಯಲಿವೆ. ಹಾಗೆಯೇ 2028ರಲ್ಲಿ ನಡೆಯುವ ಮಹಿಳಾ ಟಿ20 ವಿಶ್ವಕಪ್ ಆತಿಥ್ಯದ ಹಕ್ಕನ್ನು ಸಹ ಪಾಕಿಸ್ತಾನಕ್ಕೆ ನೀಡಲಾಗಿದೆ.

2028 ರ ಟಿ20 ವಿಶ್ವಕಪ್ ಆತಿಥ್ಯವನ್ನು ಪಾಕಿಸ್ತಾನಕ್ಕೆ ನೀಡಿದ ಐಸಿಸಿ
ಪಾಕಿಸ್ತಾನ ಕ್ರಿಕೆಟ್ ಮಂಡಳಿ
Follow us on

ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ಆತಿಥೇಯ ಪಾಕಿಸ್ತಾನ ಒಪ್ಪಿಕೊಂಡಿದೆ. ಆ ಪ್ರಕಾರ ಟೀಂ ಇಂಡಿಯಾದ ಪಂದ್ಯಗಳು ಇದೀಗ ಪಾಕಿಸ್ತಾನದ ಹೊರಗೆ ನಡೆಯಲ್ಲಿವೆ. ಇದಲ್ಲದೆ 2024 ರಿಂದ 2027 ರ ನಡುವೆ ನಡೆಯಲ್ಲಿರುವ ಐಸಿಸಿಯ ಎಲ್ಲಾ ಪಂದ್ಯಾವಳಿಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡಲಾಗುವುದು ಎಂದು ಐಸಿಸಿ ಸ್ಪಷ್ಟಪಡಿಸಿದೆ. ಅದರಂತೆ ಭಾರತದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಒಳಗೊಂಡ ಪಂದ್ಯಗಳು ತಟಸ್ಥ ಸ್ಥಳಗಳಲ್ಲಿ ನಡೆಯಲಿವೆ.

ಮತ್ತೊಂದು ಐಸಿಸಿ ಟೂರ್ನಿಗೆ ಪಾಕ್ ಆತಿಥ್ಯ

ಈ ನಿಯಮವು 2025 ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ, 2025 ರಲ್ಲಿ ಭಾರತದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್ ಮತ್ತು 2026 ರ ಟಿ20 ವಿಶ್ವಕಪ್​ಗೂ ಅನ್ವಯಿಸುತ್ತದೆ. ಇದೇ ವೇಳೆ ಪಾಕಿಸ್ತಾನಿ ಕ್ರೀಡಾ ಪ್ರೇಮಿಗಳಿಗೆ ಮತ್ತೊಂದು ಸಂತಸದ ಸುದ್ದಿ ನೀಡಿರುವ ಐಸಿಸಿ, ಪಾಕಿಸ್ತಾನಕ್ಕೆ ಮತ್ತೊಂದು ಐಸಿಸಿ ಟೂರ್ನಿಯ ಆತಿಥ್ಯವನ್ನು ನೀಡಿದೆ.

ಇದೀಗ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಒಪ್ಪಿಕೊಂಡಿರುವ ಪಾಕಿಸ್ತಾನಕ್ಕೆ ಇದಕ್ಕೆ ಬದಲಾಗಿ 2028 ರಲ್ಲಿ ನಡೆಯಲ್ಲಿರುವ ಮಹಿಳೆಯರ ಟಿ20 ವಿಶ್ವಕಪ್ ನಡೆಸುವ ಆತಿಥ್ಯದ ಹಕ್ಕನ್ನು ಐಸಿಸಿ ನೀಡಿದೆ. ಆದರೆ ಈ ಪಂದ್ಯಾವಳಿಯಲ್ಲೂ ಭಾರತ ವನಿತಾ ಪಡೆಯ ಪಂದ್ಯಗಳು ತಟಸ್ಥ ಸ್ಥಳದಲ್ಲಿ ನಡೆಯಲ್ಲಿವೆ. ಅಂದರೆ 4 ವರ್ಷಗಳಲ್ಲಿ ಎರಡು ಪ್ರಮುಖ ಟೂರ್ನಿಗಳನ್ನು ಆಯೋಜಿಸುವ ಅವಕಾಶ ಪಾಕಿಸ್ತಾನಕ್ಕೆ ಸಿಗಲಿದೆ. ಇದಲ್ಲದೆ, ಆಸ್ಟ್ರೇಲಿಯಾವು 2029 ಮತ್ತು 2031 ರಲ್ಲಿ ನಡೆಯಲ್ಲಿರುವ ಐಸಿಸಿ ಮಹಿಳಾ ಪಂದ್ಯಾವಳಿಗಳಲ್ಲಿ ಒಂದನ್ನು ಆಯೋಜಿಸುವ ಹಕ್ಕನ್ನು ಪಡೆದುಕೊಂಡಿದೆ.

ಚಾಂಪಿಯನ್ಸ್ ಟ್ರೋಫಿ ಯಾವಾಗ ಆರಂಭ?

ಏತನ್ಮಧ್ಯೆ, ಚಾಂಪಿಯನ್ಸ್ ಟ್ರೋಫಿ 2025 ಪಂದ್ಯಾವಳಿಯು ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇದು ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ಈ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಲೀಗ್ ಸುತ್ತಿನಲ್ಲಿ ನಾಲ್ಕು ತಂಡಗಳಲ್ಲಿ ಅಗ್ರ ಎರಡು ತಂಡಗಳನ್ನು ಸೆಮಿಫೈನಲ್‌ಗೆ ಆಯ್ಕೆ ಮಾಡಲಾಗುತ್ತದೆ. ಭಾರತ ತಂಡ ಫೈನಲ್‌ಗೆ ಲಗ್ಗೆ ಇಟ್ಟರೆ ತಟಸ್ಥ ಸ್ಥಳದಲ್ಲಿ ಪಂದ್ಯ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ