ನನ್ನ ಮಗ ಅವಮಾನವನ್ನು ಸಹಿಸಲಾಗದೆ ನಿವೃತ್ತಿ ಘೋಷಿಸಿದ್ದಾನೆ; ಅಶ್ವಿನ್ ತಂದೆಯ ಸ್ಫೋಟಕ ಹೇಳಿಕೆ
Ashwin father statement: ರವಿಚಂದ್ರನ್ ಅಶ್ವಿನ್ ಅವರ ಅನಿರೀಕ್ಷಿತ ಅಂತರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಆಘಾತ ಉಂಟುಮಾಡಿದೆ. ಅವರ ತಂದೆ, ತಮ್ಮ ಮಗನನ್ನು ಭಾರತ ತಂಡದಲ್ಲಿ ನಿರಂತರವಾಗಿ ಅವಮಾನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದು ಅವರ ನಿವೃತ್ತಿ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಟೀಂ ಇಂಡಿಯಾದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದ ಅಶ್ವಿನ್ ಸರಣಿಯ ಮಧ್ಯದಲ್ಲೇ ಈ ರೀತಿಯ ಹಠಾತ್ ನಿರ್ಧಾರ ತೆಗೆದುಕೊಂಡಿದ್ದರು. ಇನ್ನು ಸಾಕಷ್ಟು ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂದಿದ್ದ ಅಶ್ವಿನ್ ಏಕಾಏಕಿ ಇಷ್ಟೊಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದು ಏಕೆ ಎಂಬುದು ಇದೀಗ ಎಲ್ಲರ ಮನದಾಳದಲ್ಲಿ ಮೂಡಿರುವ ಪ್ರಶ್ನೆ. ಆದರೆ, ಇದೆಲ್ಲದರ ನಡುವೆ ಅಶ್ವಿನ್ ಅವರ ತಂದೆ ದೊಡ್ಡ ಹೇಳಿಕೆ ನೀಡಿದ್ದು, ತಮ್ಮ ಮಗನನ್ನು ತಂಡದಲ್ಲಿ ನಿರಂತರವಾಗಿ ಅವಮಾನಿಸಲಾಗುತ್ತಿದೆ. ಹೀಗಾಗಿಯೇ ಅವನು ಆಸ್ಟ್ರೇಲಿಯಾ ಪ್ರವಾಸದ ಮಧ್ಯದಲ್ಲಿ ನಿವೃತ್ತಿ ಘೋಷಿಸಿದ್ದಾನೆ ಎಂದು ಹೇಳಿದ್ದಾರೆ. ಅಶ್ವಿನ್ ಅವರ ತಂದೆಯ ಈ ರೀತಿಯ ಹೇಳಿಕೆ ಭಾರತೀಯ ಕ್ರಿಕೆಟ್ನಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.
ಅಶ್ವಿನ್ ತಂದೆಯ ಸ್ಫೋಟಕ ಹೇಳಿಕೆ
ಮಗನ ನಿವೃತ್ತಿಯ ನಿರ್ಧಾರದ ಬಳಿಕ ಸಿಎನ್‌ಎನ್ ನ್ಯೂಸ್ 18 ರೊಂದಿಗೆ ಮಾತನಾಡಿದ ಅಶ್ವಿನ್ ಅವರ ತಂದೆ, ‘ಕೊನೆಯ ಗಳಿಗೆಯಲ್ಲಿ ನನ್ನ ಮಗನ ನಿವೃತ್ತಿ ನಿರ್ಧಾರದ ಬಗ್ಗೆ ನನಗೂ ತಿಳಿಯಿತು. ಅವನ ಮನಸ್ಸಿನಲ್ಲಿ ಏನಾಗುತ್ತಿದೆಯೋ ಗೊತ್ತಿಲ್ಲ. ನಾನಂತೂ ಸಂಪೂರ್ಣ ಸಂತೋಷದಿಂದ ಒಪ್ಪಿಕೊಂಡೆ. ಆದರೆ ಅವರು ನಿವೃತ್ತಿ ಘೋಷಿಸಿದ ರೀತಿ, ಒಂದು ಕಡೆ ನನಗೆ ತುಂಬಾ ಸಂತೋಷ ನೀಡಿದ್ದರೆ, ಮತ್ತೊಂದೆಡೆ ನನಗೆ ನೋವುಂಟು ಮಾಡಿದೆ. ಏಕೆಂದರೆ ಅವನು ತನ್ನ ಆಟವನ್ನು ಮುಂದುವರಿಸಬೇಕಾಗಿತ್ತು. ನಿವೃತ್ತಿ ಎಂಬುದು ಅಶ್ವಿನ್ ಅವರ ನಿರ್ಧಾರವಾಗಿದ್ದು, ನಾನು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಅವನು ನಿವೃತ್ತಿ ತೆಗೆದುಕೊಂಡ ರೀತಿಗೆ ಹಲವು ಕಾರಣಗಳಿರಬಹುದು. ಅದು ಅಶ್ವಿನ್ಗೆ ಮಾತ್ರ ಗೊತ್ತು, ಇದರಲ್ಲಿ ತಂಡದಲ್ಲಿ ಆತನಿಗೆ ಆಗುತ್ತಿದ್ದ ಅವಮಾನವೂ ಕಾರಣವಾಗಿರಬಹುದು.
ಅಶ್ವಿನ್ ಅವರ ನಿವೃತ್ತಿ ನಮಗೆ ಭಾವನಾತ್ಮಕ ಕ್ಷಣವಾಗಿದೆ ಏಕೆಂದರೆ ಅವರು 14-15 ವರ್ಷಗಳ ಕಾಲ ತಂಡದಲ್ಲಿ ಆಡಿದರು. ಹೀಗಾಗಿ ಅವರ ಹಠಾತ್ ನಿವೃತ್ತಿ ನಮಗೆ ಆಘಾತ ತಂದಿತು. ಆತನನ್ನು ನಿರಂತರವಾಗಿ ಅವಮಾನಿಸಲಾಗುತ್ತಿದೆ ಎಂದು ನಾವು ಭಾವಿಸುತ್ತೇವೆ. ಹೀಗಾಗಿ ಇದನ್ನೆಲ್ಲಾ ಇನ್ನೆಷ್ಟು ದಿನ ಸಹಿಸಿಕೊಳ್ಳಲು ಸಾಧ್ಯ ಹೇಳಿ? ಹಾಗಾಗಿಯೇ ಅಶ್ವಿನ್ ನಿವೃತ್ತಿ ನಿರ್ಧಾರ ಮಾಡಿರಬಹುದು ಎಂದು ಅಶ್ವಿನ್ ಅವರ ತಂದೆ ಹೇಳಿದ್ದಾರೆ.
ಅಶ್ವಿನ್ ಮೇಲೆ ವಿಶ್ವಾಸ ಮೂಡಲಿಲ್ಲವೇ?
ಪ್ರಸ್ತುತ ಅಶ್ವಿನ್ ಟೀಂ ಇಂಡಿಯಾದ ಬೆಸ್ಟ್ ಬೌಲರ್ ಆಗಿದ್ದರೂ, ವಿಶ್ವದಲ್ಲೇ ನಂಬರ್ 1 ಟೆಸ್ಟ್ ಬೌಲರ್ ಆಗಿದ್ದರೂ, ಟೀಂ ಇಂಡಿಯಾದಲ್ಲಿ ಅವರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ. ಎರಡೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗಳಲ್ಲಿ ಅಶ್ವಿನ್ ಅದ್ಭುತ ಪ್ರದರ್ಶನ ನೀಡಿದ್ದರು ಆದರೆ ಕೊನೆಯ ಫೈನಲ್ ಪಂದ್ಯದಲ್ಲಿ ಅಶ್ವಿನ್ಗೆ ಆಡುವ ಅವಕಾಶ ಸಿಗಲಿಲ್ಲ. ಈ ವಿಚಾರವನ್ನು ಮಾಜಿ ನಾಯಕ ಸುನಿಲ್ ಗವಾಸ್ಕರ್ ಕೂಡ ಪ್ರಸ್ತಾಪಿಸಿದ್ದರು. ನೀವು ವಿಶ್ವದ ನಂಬರ್ 1 ಬ್ಯಾಟ್ಸ್‌ಮನ್‌ನನ್ನು ಆಡುವ ಹನ್ನೊಂದರಲ್ಲಿ ಆಯ್ಕೆ ಮಾಡಿದ್ದೀರಿ. ಆದರೆ ವಿಶ್ವದ ನಂಬರ್ 1 ಟೆಸ್ಟ್ ಬೌಲರ್ನ ಮಾತ್ರ ಏಕೆ ಬೆಂಚ್ ಮೇಲೆ ಕುಳಿಸಿದ್ದೀರಿ ಎಂದು ಗವಾಸ್ಕರ್ ಪ್ರಶ್ನಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:37 pm, Thu, 19 December 24