World Cup 2025: ಸೆಮೀಸ್​ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ; ಭಾರತ ತಂಡದಲ್ಲಿ 3 ಬದಲಾವಣೆ

Women's World Cup Semi-final 2025: 2025ರ ಮಹಿಳಾ ವಿಶ್ವಕಪ್‌ನ ಮಹತ್ವದ ಸೆಮಿಫೈನಲ್‌ನಲ್ಲಿ ಭಾರತ, ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸುತ್ತಿದೆ. ಸತತ 15 ಪಂದ್ಯಗಳಲ್ಲಿ ಸೋಲರಿಯದ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲು ಭಾರತ ಅಸಾಧಾರಣ ಪ್ರದರ್ಶನ ನೀಡಬೇಕಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿದ್ದು, ಭಾರತ ತಂಡದಲ್ಲಿ ಮೂರು ಪ್ರಮುಖ ಬದಲಾವಣೆ ಮಾಡಲಾಗಿದೆ. ಫೈನಲ್ ಪ್ರವೇಶಿಸಲು ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

World Cup 2025: ಸೆಮೀಸ್​ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ; ಭಾರತ ತಂಡದಲ್ಲಿ 3 ಬದಲಾವಣೆ
Ind W Vs Aus W

Updated on: Oct 30, 2025 | 2:48 PM

2025 ರ ಮಹಿಳಾ ಏಕದಿನ ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ (Women’s World Cup Semi-final ) ಪಂದ್ಯದಲ್ಲಿ ಆತಿಥೇಯ ಭಾರತ, ಬಲಿಷ್ಠ ಆಸ್ಟ್ರೇಲಿಯಾ (India vs Australia) ತಂಡವನ್ನು ಎದುರಿಸುತ್ತಿದೆ. ಈ ಪಂದ್ಯಕ್ಕಾಗಿ ಎರಡೂ ತಂಡಗಳು ಸಜ್ಜಾಗಿದ್ದು, ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣ ಆತಿಥ್ಯವಹಿಸುತ್ತಿದೆ. ಮಹಿಳಾ ವಿಶ್ವಕಪ್‌ನಲ್ಲಿ ಕಳೆದ 15 ಪಂದ್ಯಗಳಲ್ಲಿ ಒಂದೇ ಒಂದು ಸೋಲು ಕಾಣದ ಆಸ್ಟ್ರೇಲಿಯಾ ಆತ್ಮ ವಿಶ್ವಾಸದಿಂದ ಬೀಗುತ್ತಿದೆ. ಈ ಪರಿಸ್ಥಿತಿಯಲ್ಲಿ, ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಬೇಕಾದರೆ ಟೀಂ ಇಂಡಿಯಾ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಬೇಕಿದೆ. ಇನ್ನು ಈ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಹೀಗಾಗಿ ಟಾಸ್ ಸೋತ ಹರ್ಮನ್‌ಪ್ರೀತ್ ಪಡೆ ಮೊದಲ ಬೌಲಿಂಗ್ ಮಾಡಲಿದೆ. ಆಸ್ಟ್ರೇಲಿಯಾ ತಂಡದಲ್ಲಿ 1 ಬದಲಾವಣೆ ಮಾಡಲಾಗಿದ್ದು ಜಾರ್ಜಿಯಾ ವೇರ್‌ಹ್ಯಾಮ್ ಬದಲಿಗೆ ಸೋಫಿ ಮೊಲಿನಾಕ್ಸ್ ತಂಡಕ್ಕೆ ಮರಳಿದ್ದಾರೆ. ಇತ್ತ ನಿರೀಕ್ಷೆಯಂತೆ ಈ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 3 ಬದಲಾವಣೆ ಮಾಡಲಾಗಿದೆ. ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಬದಲಿಗೆ ಶಫಾಲಿ ವರ್ಮಾಗೆ ಪ್ಲೇಯಿಂಗ್​ 11ನಲ್ಲಿ ಅವಕಾಶ ನೀಡಲಾಗಿದೆ. ಹಾಗೆಯೇ ಕಳೆದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ರಿಚಾ ಘೋಷ್ ಮತ್ತು ಕ್ರಾಂತಿ ಗೌಡ್ ಈ ಪಂದ್ಯದಲ್ಲಿ ಆಡುತ್ತಿದ್ದಾರೆ.

ಟೂರ್ನಿಯಲ್ಲಿ ಉಭಯ ತಂಡಗಳ ಪ್ರದರ್ಶನ

2025 ರ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ತಂಡದ ಪ್ರದರ್ಶನ ಸೋಲು ಗೆಲುವುಗಳಿಂದ ಕೂಡಿದೆ. ಆಡಿದ ಏಳು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು, ಮೂರರಲ್ಲಿ ಸೋತಿದೆ. ಉಳಿದಂತೆ ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಆದಾಗ್ಯೂ ಸೆಮಿಫೈನಲ್ ತಲುಪುವ ಮೂಲಕ ಹರ್ಮನ್‌ಪ್ರೀತ್ ಕೌರ್ ಪಡೆ ತವರಿನಲ್ಲಿ ಚೊಚ್ಚಲ ವಿಶ್ವಕಪ್ ಎತ್ತಿಹಿಡಿಯುವ ಗುರಿ ಹೊಂದಿದೆ. ಇನ್ನು ಆಸ್ಟ್ರೇಲಿಯಾ ವಿರುದ್ಧ ಸದಾ ಸಿಡಿಯುವ ಸ್ಮೃತಿ ಮಂಧಾನ, ಸೆಮಿಫೈನಲ್ ಪಂದ್ಯದಲ್ಲೂ ಅಬ್ಬರಿಸಬೇಕಿದೆ. ಇವರ ಜೊತೆ ಉಳಿದವರು ಕೂಡ ತಮ್ಮ ಸಾಮರ್ಥ್ಯಕ್ಕೂ ಮೀರಿದ ಪ್ರದರ್ಶನ ನೀಡಬೇಕಿದೆ. ಹಾಗಾದರೆ ಮಾತ್ರ ಭಾರತ, ಆಸ್ಟ್ರೇಲಿಯಾವನ್ನು ಸೋಲಿಸಬಹುದಾಗಿದೆ.

ಇತ್ತ ಆಸ್ಟ್ರೇಲಿಯಾ ಟೂರ್ನಿಯಲ್ಲಿ ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡಿದೆ. ಆಡಿದ ಏಳು ಗುಂಪು ಹಂತದ ಪಂದ್ಯಗಳಲ್ಲಿ ಆರನ್ನು ಗೆದ್ದು ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ ತಂಡವು ಪ್ರತಿಯೊಂದು ವಿಭಾಗದಲ್ಲೂ ಅತ್ಯುತ್ತಮ ಸಮತೋಲನವನ್ನು ಪ್ರದರ್ಶಿಸಿದೆ. ಅಲಿಸಾ ಹೀಲಿ ಅವರ ನಾಯಕತ್ವ, ಎಲಿಸ್ ಪೆರ್ರಿ ಅವರ ಅನುಭವ ಮತ್ತು ಬೆತ್ ಮೂನಿ ಅವರ ಸ್ಥಿರ ಬ್ಯಾಟಿಂಗ್ ತಂಡವನ್ನು ಅಜೇಯ ಓಟದತ್ತ ಮುನ್ನಡೆಸಿದೆ.

ಭಾರತ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಅಮನ್‌ಜೋತ್ ಕೌರ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್‌ಕೀಪರ್), ರಾಧಾ ಯಾದವ್, ಕ್ರಾಂತಿ ಗೌಡ್, ಶ್ರೀ ಚರಣಿ, ರೇಣುಕಾ ಸಿಂಗ್ ಠಾಕೂರ್.

ಆಸ್ಟ್ರೇಲಿಯಾ ತಂಡ: ಫೋಬೆ ಲಿಚ್‌ಫೀಲ್ಡ್, ಅಲಿಸಾ ಹೀಲಿ(ನಾಯಕಿ, ವಿಕೆಟ್ ಕೀಪರ್), ಎಲ್ಲಿಸ್ ಪೆರ್ರಿ, ಬೆತ್ ಮೂನಿ, ಅನ್ನಾಬೆಲ್ ಸದರ್ಲ್ಯಾಂಡ್, ಆಶ್ಲೀ ಗಾರ್ಡ್ನರ್, ತಹ್ಲಿಯಾ ಮೆಕ್‌ಗ್ರಾತ್, ಅಲಾನಾ ಕಿಂಗ್, ಕಿಮ್ ಗಾರ್ತ್, ಮೇಗನ್ ಶುಟ್, ಸೋಫಿ ಮೊಲಿನಿಯಕ್ಸ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:42 pm, Thu, 30 October 25