ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗಾಗಿ ಅಫ್ಘಾನಿಸ್ತಾನ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ಬಳಗವನ್ನು ಹಶ್ಮತುಲ್ಲಾ ಶಾಹಿದಿ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದ ಯುವ ವೇಗಿ ನವೀನ್ ಉಲ್ ಹಕ್ ಈ ಬಾರಿ ತಂಡಕ್ಕೆ ಆಯ್ಕೆಯಾಗಿರುವುದು ವಿಶೇಷ.
ಈ ಬಾರಿಯ ಐಪಿಎಲ್ನಲ್ಲಿ ನವೀನ್ ಉಲ್ ಹಕ್ ವಿರಾಟ್ ಕೊಹ್ಲಿ ಜೊತೆ ವಾಕ್ಸಮರಕ್ಕೆ ಇಳಿದು ಭಾರೀ ವೈರಲ್ ಆಗಿದ್ದರು. ಹೀಗಾಗಿಯೇ ಏಷ್ಯಾಕಪ್ನಲ್ಲಿ ಕಿಂಗ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವಣ ಪೈಪೋಟಿಯನ್ನು ನಿರೀಕ್ಷಿಸಲಾಗಿತ್ತು. ಆದರೆ ಅಫ್ಘಾನ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯುವ ವೇಗಿ ವಿಫಲರಾಗಿದ್ದರು. ಇದೀಗ ಏಕದಿನ ವಿಶ್ವಕಪ್ ತಂಡದಲ್ಲಿ ನವೀನ್ ಉಲ್ ಹಕ್ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅಕ್ಟೋಬರ್ 11 ರಂದು ನಡೆಯಲಿರುವ ಭಾರತ – ಅಫ್ಘಾನಿಸ್ತಾನ್ ನಡುವಣ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟವನ್ನು ಎದುರು ನೋಡಬಹುದು.
ಇನ್ನು ಅಫ್ಘಾನಿಸ್ತಾನ್ ತಂಡದಲ್ಲಿ ಸ್ಟಾರ್ ಆಟಗಾರರಾಗಿ ರಶೀದ್ ಖಾನ್, ಮೊಹಮ್ಮದ್ ನಬಿ, ರಹಮಾನುಲ್ಲಾ ಗುರ್ಬಾಝ್ ಹಾಗೂ ಮುಜೀಬ್ ಉರ್ ರಹಮಾನ್ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಮೀಸಲು ಆಟಗಾರರಾಗಿ ಹಿರಿಯ ಆಲ್‌ರೌಂಡರ್ ಗುಲ್ಬದಿನ್ ನೈಬ್, ಶರಫುದಿನ್ ಅಶ್ರಫ್ ಮತ್ತು ಫರೀದ್ ಅಹ್ಮದ್ ಮಲಿಕ್ ಆಯ್ಕೆಯಾಗಿದ್ದಾರೆ.
ಈ ಬಾರಿಯ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಅಕ್ಟೋಬರ್ 7 ರಂದು ಅಫ್ಘಾನಿಸ್ತಾನ್ ತಂಡವು ಬಾಂಗ್ಲಾದೇಶ್ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಇದನ್ನೂ ಓದಿ: ODI World Cup 2023 Schedule: ಏಕದಿನ ವಿಶ್ವಕಪ್ನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಅಫ್ಘಾನಿಸ್ತಾನ ವಿಶ್ವಕಪ್ ತಂಡ:
ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ರಹಮತ್ ಷಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್ಝೈ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ಫಝಲ್ಹಕ್ ಫಾರೂಖಿ, ಅಬ್ದುಲ್ ರಹಮಾನ್, ನವೀನ್ ಉಲ್ ಹಕ್.
ಮೀಸಲು ಆಟಗಾರರು: ಗುಲ್ಬದಿನ್ ನೈಬ್, ಶರಫುದಿನ್ ಅಶ್ರಫ್ ಮತ್ತು ಫರೀದ್ ಅಹ್ಮದ್ ಮಲಿಕ್.