ODI World Cup 2023: ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ಭಾಗವಹಿಸಲು ಪಾಕ್ ತಂಡಕ್ಕೆ ಪಾಕಿಸ್ತಾನ್ ಸರ್ಕಾರ ಹಸಿರು ನಿಶಾನೆ ನೀಡಿದೆ. ಈ ಹಿಂದೆ ಏಕದಿನ ವಿಶ್ವಕಪ್ನಲ್ಲಿ ಭಾಗವಹಿಸುವಿಕೆ ಬಗ್ಗೆ ಚರ್ಚಿಸಲು ಸರ್ಕಾರ 14 ಸದಸ್ಯರ ಸಮಿತಿಯನ್ನು ನೇಮಿಸಲಾಗಿತ್ತು. ಇದೀಗ ಈ ಸಮಿತಿಯು ನೀಡಿದ ವರದಿಯಂತೆ ಏಕದಿನ ವಿಶ್ವಕಪ್ನಲ್ಲಿ ಭಾಗವಹಿಸಲು ಪಾಕಿಸ್ತಾನ್ ತಂಡಕ್ಕೆ ಅಲ್ಲಿನ ಸರ್ಕಾರ ಅನುಮತಿ ನೀಡಿದೆ. ಈ ಹಿಂದೆ ಏಷ್ಯಾಕಪ್ಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲು ಹಿಂದೇಟು ಹಾಕಿದ್ದ ಪರಿಣಾಮ ಪಾಕ್ ತಂಡ ಏಕದಿನ ವಿಶ್ವಕಪ್ನಲ್ಲಿ ಭಾಗವಹಿಸುವುದು ಅನುಮಾನ ಎನ್ನಲಾಗಿತ್ತು. ಆದರೀಗ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ತಮ್ಮ ತಂಡವನ್ನು ಕಳುಹಿಸಲು ಪಾಕ್ ಸರ್ಕಾರ ನಿರ್ಧರಿಸಿದೆ.
ಕ್ರೀಡೆಯನ್ನು ರಾಜಕೀಯದೊಂದಿಗೆ ಬೆರೆಸಬಾರದು. ಹೀಗಾಗಿ ಮುಂಬರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಭಾಗವಹಿಸಲು ಭಾರತಕ್ಕೆ ತಮ್ಮ ಕ್ರಿಕೆಟ್ ತಂಡವನ್ನು ಕಳುಹಿಸಲು ಅದು ನಿರ್ಧರಿಸಿದ್ದೇವೆ ಎಂದು ಪಾಕಿಸ್ತಾನ್ ವಿದೇಶಾಂಗ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಹೀಗಾಗಿ ಏಕದಿನ ವಿಶ್ವಕಪ್ನಲ್ಲಿ ಪಾಲ್ಗೊಳಲು ಪಾಕಿಸ್ತಾನ್ ತಂಡಕ್ಕೆ ಸರ್ಕಾರ ಹಸಿರು ನಿಶಾನೆ ನೀಡಿದ್ದು, ಅದರಂತೆ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಪಾಕ್ ತಂಡವು ಭಾರತಕ್ಕೆ ಬರಲಿದೆ.
2016 ರಲ್ಲಿ ಭಾರತದಲ್ಲಿ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ್ ಭಾಗವಹಿಸಿತ್ತು. ಇದಾದ ಬಳಿಕ ಉಭಯ ತಂಡಗಳು ಭಾರತದಲ್ಲಿ ಮುಖಾಮುಖಿಯಾಗಿಲ್ಲ. ಇದೀಗ ಬರೋಬ್ಬರಿ 7 ವರ್ಷಗಳ ಬಳಿಕ ಭಾರತ-ಪಾಕಿಸ್ತಾನ್ ಭರತ ಖಂಡದಲ್ಲಿ ಮುಖಾಮುಖಿಯಾಗುತ್ತಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 15 ರಂದು ನಡೆಯಬೇಕಿರುವ ಭಾರತ-ಪಾಕಿಸ್ತಾನ್ ನಡುವಣ ಪಂದ್ಯವು ಒಂದು ದಿನ ಮುಂಚಿತವಾಗಿ ಜರುಗಲಿದೆ. ಅಕ್ಟೋಬರ್ 15 ರಂದು ಗುಜರಾತ್ನಾದ್ಯಂತ ನವರಾತ್ರಿ ಕಾರ್ಯಕ್ರಮಗಳು ಜರಗುವುದರಿಂದ ಪಂದ್ಯಕ್ಕಾಗಿ ಸೂಕ್ತ ಪೊಲೀಸ್ ವ್ಯವಸ್ಥೆ ಕಲ್ಪಿಸುವುದು ಕಷ್ಟಕರ. ಹೀಗಾಗಿ ಅಕ್ಟೋಬರ್ 14 ರಂದು ಭಾರತ-ಪಾಕಿಸ್ತಾನ್ ಪಂದ್ಯವನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಏಕದಿನ ವಿಶ್ವಕಪ್ಗೂ ಮುನ್ನ ಭಾರತ-ಪಾಕಿಸ್ತಾನ್ ತಂಡಗಳು ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆಯಿದೆ. ಅಂದರೆ ಆಗಸ್ಟ್ 30 ರಿಂದ ಶುರುವಾಗಲಿರುವ ಏಷ್ಯಾಕಪ್ನ ಲೀಗ್ ಹಂತದಲ್ಲಿ ಒಂದು ಬಾರಿ ಸೆಣಸುವುದು ಖಚಿತ. ಅದರಂತೆ ಸೆಪ್ಟೆಂಬರ್ 2 ರಂದು ಇಂಡೊ-ಪಾಕ್ ಕಾದಾಟ ನಡೆಯಲಿದೆ. ಇದಾದ ಬಳಿಕ ಉಭಯ ತಂಡಗಳು ಸೂಪರ್-4 ಹಂತಕ್ಕೇರಿದರೆ 2ನೇ ಬಾರಿ ಮುಖಾಮುಖಿಯಾಗಲಿದೆ. ಇನ್ನು ಸೂಪರ್-4 ಹಂತದ ಪಾಯಿಂಟ್ಸ್ ಟೇಬಲ್ನಲ್ಲಿ ಉಭಯ ತಂಡಗಳು ಮೊದಲೆರಡು ಸ್ಥಾನ ಅಲಂಕರಿಸಿದರೆ ಏಷ್ಯಾಕಪ್ ಫೈನಲ್ನಲ್ಲೂ ಮುಖಾಮುಖಿಯಾಗಬಹುದು. ಹೀಗಾಗಿ ಏಕದಿನ ವಿಶ್ವಕಪ್ಗೂ ಮುನ್ನ 3 ಬಾರಿ ಭಾರತ-ಪಾಕಿಸ್ತಾನ್ ನಡುವಣ ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷಿಸಬಹುದು.
ಈ ಬಾರಿಯ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಹಾಗೆಯೇ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.