ವಿಶ್ವಕಪ್ (ODI World Cup 2023) ಆರಂಭಕ್ಕೆ ಇನ್ನು 15 ದಿನಗಳು ಬಾಕಿ ಉಳಿದಿವೆ. ಆದರೆ ಅದಕ್ಕೂ ಮುನ್ನ ಎಲ್ಲಾ ತಂಡಗಳು ಅಭ್ಯಾಸ ಪಂದ್ಯವನ್ನು ಆಡಲಿವೆ. ಈ ಅಭ್ಯಾಸ ಪಂದ್ಯಗಳು ಇದೇ ಸೆಪ್ಟೆಂಬರ್ 29 ರಿಂದ ಆರಂಭವಾಗಲಿವೆ. ಈ ದಿನದಂದು ಒಟ್ಟು 3 ಪಂದ್ಯಗಳು ನಡೆಯಲ್ಲಿದ್ದು, ಇದರಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ (Pakistan vs New Zealand) ನಡುವಿನ ಪಂದ್ಯವೂ ಸೇರಿದೆ. ಆದರೆ ಈ ಪಂದ್ಯವನ್ನು ಪ್ರೇಕ್ಷಕರಿಲ್ಲದೆ ಆಡಿಸಲು ತೀರ್ಮಾನಿಸಲಾಗಿದೆ. ಅಂದರೆ ಈ ಉಭಯ ತಂಡಗಳ ಅಭ್ಯಾಸ ಪಂದ್ಯವನ್ನು ನೋಡಲು ಅಭಿಮಾನಿಗಳಿಗೆ ಕ್ರೀಡಾಂಗಣಕ್ಕೆ ಪ್ರವೇಶವಿರುವುದಿಲ್ಲ ಎಂದು ವರದಿಯಾಗಿದೆ. ಈ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (Rajiv Gandhi International Cricket Stadium) ನಡೆಯುತ್ತಿದ್ದು, ಸೂಕ್ತ ಭದ್ರತೆಯನ್ನು ಒದಗಿಸಲು ಸಾಧ್ಯವಾಗದ ಕಾರಣ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ. ಅಲ್ಲದೆ ಈ ಪಂದ್ಯಕ್ಕಾಗಿ ಟಿಕೆಟ್ ಕಾಯ್ದಿರಿಸಿದವರಿಗೆ ಹಣವನ್ನು ಮರುಪಾವತಿಸಲು ಬಿಸಿಸಿಐ, ವಿಶ್ವಕಪ್ ಟಿಕೆಟಿಂಗ್ ಪಾಲುದಾರ ಬುಕ್ ಮೈ ಶೋ ಗೆ ಸೂಚನೆ ನೀಡಿದೆ ಎಂದು ಬಿಸಿಸಿಐ (BCCI) ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ವಾಸ್ತವವಾಗಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಅಭ್ಯಾಸ ಪಂದ್ಯ ನಡೆಯುವ ದಿನ ಅಂದರೆ ಸೆಪ್ಟೆಂಬರ್ 29 ರಂದು ಹೈದರಾಬಾದ್‌ನಲ್ಲಿ ಗಣೇಶ ವಿಸರ್ಜನೆ ಮತ್ತು ಮಿಲನ್-ಉನ್-ನಬಿ ಮೆರವಣಿಗೆ ಇರಲಿದೆ. ಹೀಗಾಗಿ ಈ ಕಾರ್ಯಕ್ರಮಗಳಿಗೆ ಭದ್ರತೆ ಒದಗಿಸುವ ಸಲುವಾಗಿ, ಈ ಪಂದ್ಯಕ್ಕೆ ಸೂಕ್ತ ಭದ್ರತೆ ಒದಗಿಸಲು ಸಾಧ್ಯವಾಗದ ಕಾರಣ ಪಂದ್ಯವನ್ನು ಮುಂದೂಡುವಂತೆ ನಗರ ಪೊಲೀಸರು ಹೈದರಾಬಾದ್ ಕ್ರಿಕೆಟ್ ಸಂಸ್ಥೆಗೆ (ಎಚ್‌ಸಿಎ) ಸೂಚಿಸಿದ್ದರು. ಆದರೆ ಈಗಾಗಲೇ ಸಾಕಷ್ಟು ಬಾರಿ ವಿಶ್ವಕಪ್ ವೇಳಾಪಟ್ಟಿಯನ್ನು ಬದಲಾಯಿಸಿದ್ದ ಕಾರಣ ಆಯೋಜಕರು, ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ವಿನಂತಿಯನ್ನು ತಿರಸ್ಕರಿಸಿದ್ದರು. ಇದೀಗ ಈ ಪಂದ್ಯವನ್ನು ಪ್ರೇಕ್ಷಕರಿಲ್ಲದೆ ಆಡಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ವಿಶ್ವಕಪ್‌ಗೂ ಮುನ್ನ ಮ್ಯಾಚ್ ಫಿಕ್ಸಿಂಗ್ ಆರೋಪ; 3 ಭಾರತೀಯರು ಸೇರಿದಂತೆ 8 ಮಂದಿಯ ವಿರುದ್ಧ ಐಸಿಸಿ ಕ್ರಮ
ಅಕ್ಟೋಬರ್ 9 ಮತ್ತು ಅಕ್ಟೋಬರ್ 10 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಸತತ ಎರಡು ವಿಶ್ವಕಪ್ 2023 ಲೀಗ್ ಪಂದ್ಯಗಳಿಗೆ ಭದ್ರತಾ ಏಜೆನ್ಸಿಗಳು ಈ ಹಿಂದೆ ಆಕ್ಷೇಪಣೆಗಳನ್ನು ಎತ್ತಿದ್ದವು. ಅಕ್ಟೋಬರ್ 10 ರಂದು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಪಂದ್ಯ ಮತ್ತು ಅಕ್ಟೋಬರ್ 9 ರಂದು ನ್ಯೂಜಿಲೆಂಡ್ ಮತ್ತು ನೆದರ್ಲ್ಯಾಂಡ್ಸ್ ನಡುವೆ ಪಂದ್ಯ ನಡೆಯಲಿದೆ. ಪಂದ್ಯವೊಂದಕ್ಕೆ ಸುಮಾರು 3,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದ್ದು, ಪಾಕಿಸ್ತಾನ ತಂಡಕ್ಕೆ ವಸತಿ ಕಲ್ಪಿಸುವ ಹೋಟೆಲ್‌ನಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.
ವಿಶ್ವಕಪ್ 2023 ರ ಮೂಲ ವೇಳಾಪಟ್ಟಿಯಲ್ಲಿ ಈಗಾಗಲೇ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಅದರ ಪ್ರಕಾರ ಸುಮಾರು ಒಂಬತ್ತು ಪಂದ್ಯಗಳ ದಿನಾಂಕವನ್ನು ಬದಲಿಸಲಾಗಿದೆ. ಇದರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೂ ಸೇರಿದೆ. ಈ ಹಿಂದೆ ಅಕ್ಟೋಬರ್ 15 ರಂದು ಈ ಸಾಂಪ್ರದಾಯಿಕ ಎದುರಾಳಿಗಳ ನಡುವೆ ವಿಶ್ವಕಪ್ ಪಂದ್ಯವನ್ನು ಗುಜರಾತ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಆ ದಿನದಂದು ಗುಜರಾತ್‌ನಾದ್ಯಂತ ನವರಾತ್ರಿ ಹಬ್ಬದ ಮೊದಲ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಹೀಗಾಗಿ ಭದ್ರತೆ ಲೋಪ ಎದುರಾಗುವ ಸಮಸ್ಯೆಯಿಂದ ಪಂದ್ಯವನ್ನು ಅಕ್ಟೋಬರ್ 15ರ ಬದಲು ಒಂದು ದಿನ ಮುಂಚಿತವಾಗಿ ಅಂದರೆ ಅಕ್ಟೋಬರ್ 14 ರಂದು ನಡೆಸಲು ತೀರ್ಮಾನಿಸಲಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:59 am, Wed, 20 September 23