ವಿಶ್ವಕಪ್‌ಗೂ ಮುನ್ನ ಮ್ಯಾಚ್ ಫಿಕ್ಸಿಂಗ್ ಆರೋಪ; 3 ಭಾರತೀಯರು ಸೇರಿದಂತೆ 8 ಮಂದಿಯ ವಿರುದ್ಧ ಐಸಿಸಿ ಕ್ರಮ
Cricket Match Fixing: ಕ್ರಿಕೆಟ್ ಮೇಲೆ ಮತ್ತೆ ಮ್ಯಾಚ್ ಫಿಕ್ಸಿಂಗ್ ಕರಿ ನೆರಳು ಆವರಿಸಿದೆ. ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಅಡಿಯಲ್ಲಿ ನಡೆಯುವ ಅಬುಧಾಬಿ ಟಿ-10 ಲೀಗ್ನಲ್ಲಿ ಒಟ್ಟು 8 ಮಂದಿ ಅಕ್ರಮ ಎಸಗಿದ್ದಾರೆ ಎಂದು ಐಸಿಸಿ ಆರೋಪಿಸಿದೆ. ಇವರಲ್ಲಿ ಮೂವರು ಭಾರತೀಯರೂ ಇದ್ದಾರೆ ಎಂಬುದು ಈಗ ಎಲ್ಲೆಡೆ ಸಂಚಲನ ಮೂಡಿಸಿದೆ.
ಇನ್ನು ಕೆಲವೇ ದಿನಗಳಲ್ಲಿ ಏಕದಿನ ವಿಶ್ವಕಪ್ (ICC ODI World Cup 2023) ಆರಂಭವಾಗಲಿದ್ದು, ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಈ ಬೃಹತ್ ಟೂರ್ನಿಗಾಗಿ ಕಾಯುತ್ತಿದ್ದಾರೆ. ಆದರೆ ಇದಕ್ಕೂ ಮೊದಲು, ಕ್ರಿಕೆಟ್ ಜಗತ್ತಿನಲ್ಲಿ ಕೋಲಾಹಲ ಉಂಟಾಗಿದ್ದು, ಕ್ರಿಕೆಟ್ ಮೇಲೆ ಮತ್ತೆ ಮ್ಯಾಚ್ ಫಿಕ್ಸಿಂಗ್ (Match Fixing) ಕರಿ ನೆರಳು ಆವರಿಸಿದೆ. ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಅಡಿಯಲ್ಲಿ ನಡೆಯುವ ಅಬುಧಾಬಿ ಟಿ-10 ಲೀಗ್ನಲ್ಲಿ (Emirates T10 League) ಒಟ್ಟು 8 ಮಂದಿ ಅಕ್ರಮ ಎಸಗಿದ್ದಾರೆ ಎಂದು ಐಸಿಸಿ (ICC) ಆರೋಪಿಸಿದೆ. ಇವರಲ್ಲಿ ಮೂವರು ಭಾರತೀಯರೂ ಇದ್ದಾರೆ ಎಂಬುದು ಈಗ ಎಲ್ಲೆಡೆ ಸಂಚಲನ ಮೂಡಿಸಿದೆ. ಹಲವು ವರ್ಷಗಳ ಹಿಂದೆ ಐಪಿಎಲ್ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು. ಆ ಘಟನೆ ಭಾರತೀಯ ಕ್ರಿಕೆಟ್‌ನ ಬುನಾದಿಯನ್ನು ಅಲ್ಲಾಡಿಸಿತು. ಈ ಘಟನೆಯಲ್ಲಿ ಹಲವು ಅಧಿಕಾರಿಗಳು ಮತ್ತು ಕ್ರಿಕೆಟಿಗರು ಭಾಗಿಯಾಗಿದ್ದರು. ಇದೀಗ ಟಿ-10 ಲೀಗ್ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿರುವುದನ್ನು ಐಸಿಸಿ ಧೃಡಪಡಿಸಿದ್ದು, ಆರೋಪಿಗಳ ವಿರುದ್ಧ ತನಿಖೆ ಆರಂಭಿಸಿದೆ.
ಪಂದ್ಯಗಳ ಫಿಕ್ಸಿಂಗ್ ಮಾಡಲು ಪ್ರಯತ್ನ
ಕ್ರಿಕ್‌ಬಜ್ ವರದಿ ಪ್ರಕಾರ, ಬಾಂಗ್ಲಾದೇಶದ ಮಾಜಿ ಆಲ್‌ರೌಂಡರ್ ನಾಸಿರ್ ಹುಸೇನ್ ಸೇರಿದಂತೆ ಒಟ್ಟು 8 ಮಂದಿಯ ಹೆಸರುಗಳು ಈ ಆರೋಪದಲ್ಲಿ ಕೇಳಿಬಂದಿವೆ. ಇದರಲ್ಲಿ ಇಬ್ಬರು ಭಾರತೀಯ ಅಧಿಕಾರಿಗಳಾದ ಕೃಷ್ಣನ್ ಕುಮಾರ್ ಚೌಧರಿ ಮತ್ತು ಪರಾಗ್ ಸಾಂಘ್ವಿ, ಬ್ಯಾಟಿಂಗ್ ಕೋಚ್ ಸನ್ನಿ ಧಿಲ್ಲೋನ್ ಕೂಡ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಐಸಿಸಿ ತನ್ನ ಹೇಳಿಕೆಯಲ್ಲಿ, ‘2021 ರ ಟಿ-ಟೆನ್ ಲೀಗ್‌ನ ಕೆಲವು ಪಂದ್ಯಗಳನ್ನು ಫಿಕ್ಸಿಂಗ್ ಮಾಡಲು ಪ್ರಯತ್ನಿಸಲಾಗಿದೆ. ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಇದೀಗ ಐಸಿಸಿಯು ಇಸಿಬಿಯ ಭ್ರಷ್ಟಾಚಾರ ವಿರೋಧಿ ವಿಭಾಗದ ಅಧಿಕಾರಿಗಳನ್ನು ತನಿಖೆಗೆ ನೇಮಿಸಿದ್ದು, ಅವರು ತನಿಖೆ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ’ ಎಂದಿದೆ.
ಮ್ಯಾಚ್ ಫಿಕ್ಸಿಂಗ್ ಆರೋಪ; ಲಂಕಾ ಕ್ರಿಕೆಟಿಗನ ಬಂಧನ..!
ಇದರಲ್ಲಿ ಭಾರತೀಯರಾದ ಪರಾಗ್, ಕೃಷ್ಣನ್ ಮತ್ತು ಸನ್ನಿ ವಿರುದ್ಧದ ಆರೋಪಗಳು ಸಾಕಷ್ಟು ಪ್ರಬಲವಾಗಿವೆ. ಈ ಮೂವರು ಪಂದ್ಯದ ಫಲಿತಾಂಶವನ್ನು ನಿಯಂತ್ರಿಸಲು ಪ್ರಯತ್ನಿಸಿದರು ಎಂಬ ಆರೋಪ ಹೊರಿಸಲಾಗಿದೆ. ಅಲ್ಲದೆ ತನಿಖೆ ವೇಳೆ ಈ ಮೂವರು ತನಿಖೆಗೆ ಸಹಕರಿಸದೆ, ಸತ್ಯವನ್ನು ಮರೆಮಾಚಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಬಾಂಗ್ಲಾದೇಶದ ಆಟಗಾರ ನಾಸಿರ್ ಮತ್ತೆ ದುಬಾರಿ ಗಿಫ್ಟ್ ತೆಗೆದುಕೊಂಡ ಆರೋಪ ಕೇಳಿ ಬಂದಿದೆ. ಆದರೆ ಈ ದುಬಾರಿ ಉಡುಗೊರೆಯನ್ನು ತೆಗೆದುಕೊಂಡಿರುವುದನ್ನು ನಾಸಿರ್, ತನಿಖಾಧಿಕಾರಿಗಳಿಂದ ಮರೆಮಾಚಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಎರಡು ತಂಡದ ಮಾಲೀಕರ ಮೇಲೂ ಆರೋಪ
ನಾಸಿರ್ ಹುಸೇನ್ ಬಾಂಗ್ಲಾದೇಶ ಪರ 19 ಟೆಸ್ಟ್, 65 ಏಕದಿನ ಪಂದ್ಯಗಳು ಮತ್ತು 31 ಟಿ0 ಪಂದ್ಯಗಳನ್ನು ಆಡಿದ್ದಾರೆ. ಆದರೆ ಅವರು 2017 ರಿಂದ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ. ಪ್ರಸ್ತುತ ಅವರು ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಮತ್ತು ಇತರ ಕೆಲವು ಲೀಗ್‌ಗಳಲ್ಲಿ ಸಕ್ರಿಯರಾಗಿದ್ದಾರೆ. ಇವರಲ್ಲದೆ, ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳೊಂದಿಗೆ ಸಹಕರಿಸದ ಆರೋಪ ಹೊತ್ತಿರುವ ಅಬುಧಾಬಿ ಟಿ-10 ಲೀಗ್‌ನ ಎರಡು ತಂಡದ ಮಾಲೀಕರಾದ ಕೃಷ್ಣ ಕುಮಾರ್ ಚೌಧರಿ ಮತ್ತು ಪರಾಗ್ ಸಾಂಘ್ವಿ ವಿರುದ್ಧವೂ ಆರೋಪಗಳನ್ನು ಹೊರಿಸಲಾಗಿದೆ. ಇವರೊಂದಿಗೆ ಕೆಲವು ತಂಡದ ಹಿಟ್ಟಿಂಗ್ ಕೋಚ್, ಟೀಮ್ ಮ್ಯಾನೇಜರ್, ಅಸಿಸ್ಟೆಂಟ್ ಕೋಚ್ ಮತ್ತು ಇತರ ಇಬ್ಬರು ದೇಶೀಯ ಆಟಗಾರರ ವಿರುದ್ಧವೂ ಆರೋಪ ಮಾಡಲಾಗಿದೆ.
ವಾಸ್ತವವಾಗಿ ಮ್ಯಾಚ್ ಫಿಕ್ಸಿಂಗ್ ವಿಷಯದಲ್ಲಿ ಐಸಿಸಿ ಯಾವಾಗಲೂ ಕಠಿಣ ನಿಲುವು ತಳೆದಿದೆ. ಈ ಪ್ರಕರಣದಲ್ಲೂ ಅದೇ ರೀತಿ ಮಾಡಲಾಗಿದೆ. ಆರೋಪಿಗಳಾದ ಬ್ಯಾಟಿಂಗ್ ಕೋಚ್ ಅಜರ್ ಜೈದಿ, ಅಮಿರ್‌ಶಾಹಿ ದೇಶೀಯ ಕ್ರಿಕೆಟಿಗ ರಿಜ್ವಾನ್ ಜಾವೇದ್, ಸಾಲಿಯಾ ಸಮನ್ ಮತ್ತು ತಂಡದ ಮ್ಯಾನೇಜರ್ ಶಾದಾಬ್ ಅಹ್ಮದ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಮೂವರು ಭಾರತೀಯರು ಸೇರಿದಂತೆ ಉಳಿದ ಆರೋಪಿಗಳನ್ನು 14 ದಿನಗಳ ಗಡಿಪಾರು ಮಾಡಲಾಗಿದೆ. ತನಿಖೆಯ ನಂತರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:27 am, Wed, 20 September 23