WPL 2023: ವುಮೆನ್ಸ್ ಪ್ರೀಮಿಯರ್ ಲೀಗ್ನ 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಐವರು ವಿದೇಶಿ ಆಟಗಾರ್ತಿಯರು ಕಣಕ್ಕಿಳಿದಿದ್ದರು ಎಂಬುದೇ ಅಚ್ಚರಿ. ಇಂಡಿಯನ್ ಪ್ರೀಮಿಯರ್ ಲೀಗ್‌ನಂತೆ, WPL ನಲ್ಲಿಯೂ ನಾಲ್ಕು ವಿದೇಶಿ ಆಟಗಾರ್ತಿಯರಿಗೆ ಮಾತ್ರ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ನೀಡಬಹುದು ಎಂಬ ಕಡ್ಡಾಯ ನಿಯಮವಿದೆ. ಇದಾಗ್ಯೂ ಡೆಲ್ಲಿ ಕ್ಯಾಪಿಟಲ್ಸ್ ಐವರನ್ನು ಕಣಕ್ಕಿಳಿಸಿ ರಣತಂತ್ರ ರೂಪಿಸಿದ್ದು ವಿಶೇಷ.
ಅಂದರೆ ವುಮೆನ್ಸ್ ಪ್ರೀಮಿಯರ್ ಲೀಗ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಒಟ್ಟು ನಾಲ್ವರು ವಿದೇಶಿ ಆಟಗಾರ್ತಿಯರಿಗೆ ಮಾತ್ರ ಅವಕಾಶ ಚಾನ್ಸ್ ನೀಡಬಹುದು. ಇದಾಗ್ಯೂ ಆಡುವ ಬಳಗದಲ್ಲಿ ಅಸೋಷಿಯೇಟ್ ದೇಶದ ಆಟಗಾರ್ತಿಯೊಬ್ಬರಿಗೆ ಸ್ಥಾನ ಕಲ್ಪಿಸಬಹುದು. ಇಂತಹದೊಂದು ಆಯ್ಕೆಯನ್ನು ಬಿಸಿಸಿಐ ರೂಪಿಸಿದೆ.
ಇಲ್ಲಿ ಅಸೋಷಿಯೇಟ್ ದೇಶ ಅಂದರೆ ಐಸಿಸಿ ಸದಸ್ಯ ರಾಷ್ಟ್ರಗಳಲ್ಲಿ ಸ್ಥಾನ ಪಡೆಯದ ತಂಡ ಎಂದರ್ಥ. ಅಂದರೆ ಪ್ರಸ್ತುತ ಟೆಸ್ಟ್ ಪಂದ್ಯಗಳನ್ನು ಆಡುವ ದೇಶಗಳನ್ನು ಮಾತ್ರ ಐಸಿಸಿ ಸದಸ್ಯ ರಾಷ್ಟ್ರಗಳು ಎಂದು ಪರಿಗಣಿಸಲಾಗುತ್ತದೆ. ಇದಾಗ್ಯೂ ಸಹಸದಸ್ಯ ರಾಷ್ಟ್ರಗಳಲ್ಲಿ ಕ್ರಿಕೆಟ್ನ ಉತ್ತೇಜನಕ್ಕಾಗಿ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲೂ ಆ ದೇಶಗಳ ಆಟಗಾರ್ತಿಯರಿಗೆ ವಿಶೇಷ ಸ್ಥಾನ ಕಲ್ಪಿಸಲಾಗಿದೆ.
ಅದರಂತೆ ವುಮೆನ್ಸ್ ಪ್ರೀಮಿಯರ್ ಲೀಗ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ನಾಲ್ವರು ವಿದೇಶಿ ಆಟಗಾರ್ತಿಯರ ಜೊತೆ ಅಮೆರಿಕ ಸೇರಿದಂತೆ ಇನ್ನಿತರ ಸಹ ಸದಸ್ಯ ರಾಷ್ಟ್ರಗಳ ಆಟಗಾರ್ತಿಯೋರ್ವಳನ್ನು ಸೇರಿಸಿಕೊಳ್ಳಬಹುದು.
ಬಿಸಿಸಿಐ ರೂಪಿಸಿರುವ ಇಂತಹದೊಂದು ಅತ್ಯುತ್ತಮ ಆಯ್ಕೆಯನ್ನು ಅಚ್ಚುಕಟ್ಟಾಗಿ ಬಳಸಿಕೊಂಡಿದ್ದು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ. ಏಕೆಂದರೆ ಈ ಬಾರಿ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಕಾಣಿಸಿಕೊಂಡಿದ್ದ ಅಮೆರಿಕದ ಆಟಗಾರ್ತಿ ಟಾರಾ ನೋರಿಸ್ರನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತ್ತು.
ಅಷ್ಟೇ ಅಲ್ಲದೆ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ) , ಮರಿಝನ್ನೆ ಕಪ್ (ಸೌತ್ ಆಫ್ರಿಕಾ) , ಆಲಿಸ್ ಕ್ಯಾಪ್ಸೆ (ಇಂಗ್ಲೆಂಡ್) , ಜೆಸ್ ಜೊನಾಸೆನ್ (ಆಸ್ಟ್ರೇಲಿಯಾ) ಜೊತೆ ಟಾರಾ ನೋರಿಸ್ (ಅಮೆರಿಕ) ರನ್ನು ಕಣಕ್ಕಿಳಿಸಿ ಐವರು ವಿದೇಶಿ ಆಟಗಾರ್ತಿಯರನ್ನು ಹೊಂದಿರುವ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಈ ರಣತಂತ್ರವು ಬಲಿಷ್ಠ ಆರ್ಸಿಬಿ ತಂಡದ ಲೆಕ್ಕಾಚಾರಗಳನ್ನೆಲ್ಲಾ ತಲೆಕೆಳಗೆ ಮಾಡಿದ್ದು ವಿಶೇಷ. ಅಂದರೆ ಹೆಚ್ಚುವರಿ ವಿದೇಶಿ ಆಟಗಾರ್ತಿಯಾಗಿ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದ ಟಾರಾ ನೋರಿಸ್ 4 ಓವರ್ಗಳಲ್ಲಿ 29 ರನ್ ನೀಡಿ 5 ವಿಕೆಟ್ ಕಬಳಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನ ರುವಾರಿ ಎನಿಸಿಕೊಂಡರು. ಈ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಕೂಡ ತಮ್ಮದಾಗಿಸಿಕೊಂಡರು.
ಡೆಲ್ಲಿಗೆ ಧಮಾಕಾ ಗೆಲುವು:
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ 2 ವಿಕೆಟ್ ಕಳೆದುಕೊಂಡು 223 ರನ್ ಕಲೆಹಾಕಿತ್ತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 163 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 60 ರನ್ಗಳ ಭರ್ಜರಿ ಜಯ ಸಾಧಿಸಿತು.
Published On - 6:01 pm, Mon, 6 March 23