ಮೊದಲ ಬಾರಿಗೆ ಆಯೋಜನೆಯಾಗಿರುವ ಮಹಿಳಾ ಪ್ರೀಮಿಯರ್ ಲೀಗ್‌ನ (Women’s Premier League) ಪಯಣ ಇದೀಗ ನಾಕೌಟ್ ಹಂತ ತಲುಪಿದೆ. ಯುಪಿ ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (UP Warriors and Delhi Capitals) ನಡುವೆ ಮಂಗಳವಾರ ಕೊನೆಯ ಲೀಗ್ ಸುತ್ತಿನ ಪಂದ್ಯ ನಡೆದಿದ್ದು, ಈ ಪಂದ್ಯದ ನಂತರ ಪ್ಲೇಆಫ್‌ನ ಚಿತ್ರಣವೂ ಸ್ಪಷ್ಟವಾಗಿದೆ. ಐದು ತಂಡಗಳ ನಡುವಿನ 20 ಲೀಗ್ ಪಂದ್ಯಗಳ ನಂತರ, ಈಗ ಮೂರು ತಂಡಗಳ ನಡುವೆ ಪ್ರಶಸ್ತಿಗಾಗಿ ಪೈಪೋಟಿ ನಡೆಯಲಿದೆ. ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಯುಪಿ ವಾರಿಯರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ (Delhi Capitals, Mumbai Indians, UP Warriors, Royal Challengers Bangalore and Gujarat Giants.) ತಂಡಗಳನ್ನು ಒಳಗೊಂಡಿರುವ ಲೀಗ್‌ನ ಮೊದಲ ಸೀಸನ್‌ನಲ್ಲಿ ಐದು ತಂಡಗಳು ಭಾಗವಹಿಸಿದ್ದವು. ಎಲ್ಲಾ ತಂಡಗಳು ತಲಾ 8 ಪಂದ್ಯಗಳನ್ನು ಆಡಿದ ನಂತರ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದ ಎರಡು ತಂಡಗಳು ಲೀಗ್‌ನಿಂದ ಹೊರಬಿದ್ದಿವೆ.
ಮಹಿಳಾ ಪ್ರೀಮಿಯರ್ ಲೀಗ್‌ನ ಸ್ವರೂಪದ ಪ್ರಕಾರ, ಟೇಬಲ್‌ನ ಅಗ್ರಸ್ಥಾನದಲ್ಲಿರುವ ತಂಡವು ನೇರವಾಗಿ ಫೈನಲ್‌ನಲ್ಲಿ ಸ್ಥಾನ ಪಡೆಯುತ್ತದೆ. ಮತ್ತು ಎರಡನೇ ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಆಡುತ್ತವೆ. ಮೆಗ್ ಲ್ಯಾನ್ನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ 8 ರಲ್ಲಿ 6 ಪಂದ್ಯಗಳನ್ನು ಗೆದ್ದು ಅಗ್ರ ಸ್ಥಾನವನ್ನು ಗಳಿಸಿದೆ. ಮುಂಬೈ ಇಂಡಿಯನ್ಸ್ ಕೂಡ ದೆಹಲಿಯಂತೆ ಆರು ಗೆಲುವಿನೊಂದಿಗೆ 12 ಅಂಕಗಳನ್ನು ಹೊಂದಿತ್ತು, ಆದರೆ ಉತ್ತಮ ನಿವ್ವಳ ರನ್ ರೇಟ್‌ನಿಂದಾಗಿ ಡೆಲ್ಲಿ ನೇರವಾಗಿ ಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.
IPL 2023: ಐಪಿಎಲ್ನಲ್ಲಿ ಹೊಸ ನಿಯಮಗಳು; ಟಾಸ್ ನಂತರವೂ ತಂಡ ಬದಲಿಸಬಹುದು..!
ಸ್ಮೃತಿ ಮಂಧಾನ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 8 ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆಲುವು ಸಾಧಿಸಿ, ನಾಲ್ಕು ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆಯಿತು. ಮತ್ತೊಂದೆಡೆ, ಗುಜರಾತ್ ಜೈಂಟ್ಸ್ ತಂಡ ಕೂಡ ಕೇವಲ ಎರಡು ಪಂದ್ಯಗಳನ್ನು ಗೆದ್ದಿದೆ. ಆದರೆ ಅದರ ನಿವ್ವಳ ರನ್ ರೇಟ್ ಆರ್ಸಿಬಿಗಿಂತ ತುಂಬಾ ಕಡಿಮೆಯಾಗಿದೆ. ಇದರಿಂದಾಗಿ ಕೊನೆಯ ಸ್ಥಾನದಲ್ಲಿ ಉಳಿಯುವ ಮೂಲಕ ಪ್ರಯಾಣವನ್ನು ಮುಗಿಸಬೇಕಾಯಿತು.
ಫೈನಲ್‌ನಲ್ಲಿ ಡೆಲ್ಲಿಯನ್ನು ಯಾರು ಎದುರಿಸುತ್ತಾರೆ ಎಂಬುದು ಎಲಿಮಿನೇಟರ್ ಪಂದ್ಯದಿಂದ ನಿರ್ಧರಿಸಲ್ಪಡುತ್ತದೆ. ಶುಕ್ರವಾರ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಎರಡನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಮತ್ತು ಮೂರನೇ ಸ್ಥಾನದಲ್ಲಿರುವ ಯುಪಿ ವಾರಿಯರ್ಸ್ ತಂಡಗಳು ಎಲಿಮಿನೇಟರ್ ಪಂದ್ಯವನ್ನು ಆಡಲಿವೆ. ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆಯೋ ಆ ತಂಡ ಭಾನುವಾರ ಬ್ರಬನ್ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:42 pm, Wed, 22 March 23