WPL 2023: 18 ಎಸೆತಗಳಲ್ಲಿ ಅರ್ಧಶತಕ! ಆರ್​ಸಿಬಿ ಹೈರಾಣ; ಹರ್ಮನ್‌ಪ್ರೀತ್ ದಾಖಲೆ ಉಡೀಸ್

|

Updated on: Mar 09, 2023 | 10:26 AM

WPL 2023: ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಪವರ್‌ಪ್ಲೇನಲ್ಲಿಯೇ ಬೆಂಗಳೂರು ಬೌಲರ್‌ಗಳನ್ನು ಹೀನಾಯವಾಗಿ ದಂಡಿಸಿ 64 ರನ್‌ಗಳನ್ನು ಲೂಟಿ ಮಾಡಿತು.

WPL 2023: 18 ಎಸೆತಗಳಲ್ಲಿ ಅರ್ಧಶತಕ! ಆರ್​ಸಿಬಿ ಹೈರಾಣ; ಹರ್ಮನ್‌ಪ್ರೀತ್ ದಾಖಲೆ ಉಡೀಸ್
ಸೋಫಿಯಾ ಡಂಕ್ಲೆ
Follow us on

ಮಹಿಳಾ ಪ್ರೀಮಿಯರ್ ಲೀಗ್ (WPL 2023) ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. ಮಹಿಳಾ ಆಟಗಾರ್ತಿಯರು ಕೂಡ ಪುರುಷರಂತೆ ಚುಟುಕು ಸಮರದಲ್ಲಿ ಅಬ್ಬರಿಸುವ ಮೂಲಕ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಪಂದ್ಯದಿಂದ ಪಂದ್ಯಕ್ಕೆ ಸ್ಫೋಟಕ ಇನ್ನಿಂಗ್ಸ್‌ಗಳು ಸೃಷ್ಟಿಯಾಗುತ್ತಿರುವುದು. ಪಂದ್ಯಾವಳಿಯ ಆರನೇ ಪಂದ್ಯದಲ್ಲೂ ಇದೇ ರೀತಿಯ ಸ್ಫೋಟಕ ಇನ್ನಿಂಗ್ಸ್ ಕಂಡುಬಂದಿದ್ದು, ಗುಜರಾತ್ ಜೈಂಟ್ಸ್‌ (Gujarat Giants) ತಂಡದ ಸ್ಫೋಟಕ ಆರಂಭಿಕ ಆಟಗಾರ್ತಿ ಸೋಫಿಯಾ ಡಂಕ್ಲೆ (Sophia Dunkley), ಲೀಗ್​ನಲ್ಲಿ ಮೊದಲ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಬುಧವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ವಿರುದ್ಧದ ಮೂರನೇ ಪಂದ್ಯದಲ್ಲಿ ಈ ಇಂಗ್ಲೆಂಡ್ ಬ್ಯಾಟರ್ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ.

ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಪವರ್‌ಪ್ಲೇನಲ್ಲಿಯೇ ಬೆಂಗಳೂರು ಬೌಲರ್‌ಗಳನ್ನು ಹೀನಾಯವಾಗಿ ದಂಡಿಸಿ 64 ರನ್‌ಗಳನ್ನು ಲೂಟಿ ಮಾಡಿತು. ಮೇಗನ್ ಶಾಟ್‌ ಎಸೆದ ಮೊದಲ ಓವರ್‌ನಲ್ಲಿ ಗುಜರಾತ್‌ನ ಆರಂಭಿಕ ಆಟಗಾರ್ತಿ ಮೇಘನಾ ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ. ನಂತರ ಎರಡನೇ ಓವರ್‌ನಲ್ಲಿ ಸ್ಟ್ರೈಕ್‌ಗೆ ಬಂದ ಡಂಕ್ಲಿ ಸುನಾಮಿ ಸೃಷ್ಟಿಸಿದರು.

IND vs AUS 4th Test: ಟಾಸ್ ಗೆದ್ದ ಆಸ್ಟ್ರೇಲಿಯಾ: ಭಾರತದ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ

ಸತತ 6 ಎಸೆತಗಳಲ್ಲಿ 26 ರನ್

ಪ್ರತಿ ಓವರ್‌ನಲ್ಲಿ ಕನಿಷ್ಠ ಎರಡು ಬೌಂಡರಿಗಳನ್ನು ಸಿಡಿಸುವ ಪ್ರಕ್ರಿಯೆಯನ್ನು ಡಂಕ್ಲಿ ಎರಡನೇ ಓವರ್​ನಿಂದಲೇ ಆರಂಭಿಸಿದರು. ಆ ಬಳಿಕ ನಾಲ್ಕನೇ ಓವರ್‌ ಎಸೆದ ರೇಣುಕಾ ಠಾಕೂರ್ ವಿರುದ್ಧ 2 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 14 ರನ್ ಗಳಿಸಿದರು. ಐದನೇ ಓವರ್‌ನಲ್ಲಿ ಮತ್ತಷ್ಟು ಅಬ್ಬರಿಸಿದ ಡಂಕ್ಲಿ ಎಡಗೈ ಸ್ಪಿನ್ನರ್ ಪ್ರೀತಿ ಬೋಸ್ ವಿರುದ್ಧ ಐದು ಎಸೆತಗಳಲ್ಲಿ 22 ರನ್ ಗಳಿಸಿದರು. ಈ ಓವರ್​ನಲ್ಲಿ ಅವರು 4, 6, 4, 4, 4 ರನ್ ಹೊಡೆದರು. ಆ ಬಳಿಕ ಮುಂದಿನ ಓವರ್‌ನ ಕೊನೆಯ ಎಸೆತದಲ್ಲಿಯೂ ಡಂಕ್ಲಿ ಬೌಂಡರಿ ಬಾರಿಸುವ ಮೂಲಕ ಸತತ 6 ಎಸೆತಗಳಲ್ಲಿ 26 ರನ್ ಗಳಿಸಿದರು.

ಹರ್ಮನ್‌ಪ್ರೀತ್ ದಾಖಲೆ ಉಡೀಸ್

ಐದನೇ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿಯೊಂದಿಗೆ ಅರ್ಧಶತಕ ಗಳಿಸಿದ ಡಂಕ್ಲಿ, ಕೇವಲ 18 ಎಸೆತಗಳನ್ನು ಎದುರಿಸಿ, 8 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ದಾಖಲೆಯ ಅರ್ಧಶತಕ ಬಾರಿಸಿದರು. ಈ ಮೂಲಕ ಮೊದಲ ಪಂದ್ಯದಲ್ಲಿ ಗುಜರಾತ್ ವಿರುದ್ಧ 22 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ಮುಂಬೈ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ದಾಖಲೆಯನ್ನು ಡಂಕ್ಲಿ ಮುರಿದರು. ಇದರ ಆಧಾರದ ಮೇಲೆ ಗುಜರಾತ್ 6 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 64 ರನ್ ಗಳಿಸಿತು. 65 ರನ್ (28 ಎಸೆತ, 11 ಬೌಂಡರಿ, 3 ಸಿಕ್ಸರ್) ಗಳಿಸಿದ ನಂತರ ಡಂಕ್ಲಿ ಅಂತಿಮವಾಗಿ 8ನೇ ಓವರ್‌ನಲ್ಲಿ ಔಟಾದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:24 am, Thu, 9 March 23