IND vs AUS 4th Test: ಇಂದಿನಿಂದ ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್: ಟೀಮ್ ಇಂಡಿಯಾದಲ್ಲಿ ಏನು ಬದಲಾವಣೆ?
India vs Australia 4th Test: ಮಾರ್ಚ್ 9 ಇಂದಿನಿಂದ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಆಸ್ಟ್ರೇಲಿಯಾ ಕೊನೆಯ ಟೆಸ್ಟ್ ಆಯೋಜಿಸಲಾಗಿದೆ. ಭಾರತ ಉಳಿದಿರುವ ಒಂದು ಪಂದ್ಯವನ್ನು ಗೆದ್ದರೆ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಲಿದೆ.
ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್- ಗವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಪಡೆದಿರುವ ಭಾರತೀಯ ತಂಡ (India vs Australia) ಇದೀಗ ಅಂತಿಮ ನಾಲ್ಕನೇ ಟೆಸ್ಟ್ಗೆ ಸಜ್ಜಾಗುತ್ತಿದೆ. ಮಾರ್ಚ್ 9 ಇಂದಿನಿಂದ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೊನೆಯ ಟೆಸ್ಟ್ ಆಯೋಜಿಸಲಾಗಿದೆ. ಭಾರತ ಉಳಿದಿರುವ ಒಂದು ಪಂದ್ಯವನ್ನು ಗೆದ್ದರೆ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಲಿದೆ. ಅಲ್ಲದೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಲು (WTC Final) ಭಾರತಕ್ಕೆ ಈ ಪಂದ್ಯ ಗೆಲ್ಲಲೇ ಬೇಕಿದೆ. ಇತ್ತ ಆಸೀಸ್ ಪಡೆಗೆ ಕೂಡ ಕೊನೆಯ ಟೆಸ್ಟ್ ಬಹುಮುಖ್ಯ.1-2 ಹಿನ್ನಡೆಯಲ್ಲಿರುವ ಆಸ್ಟ್ರೇಲಿಯಾಕ್ಕೆ ಮಾನ ಉಳಿಸಿಕೊಳ್ಳಲು ಉಳಿದಿರುವ ಒಂದು ಪಂದ್ಯವನ್ನು ಗೆಲ್ಲಬೇಕಿದೆ. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ.
ಟೀಮ್ ಇಂಡಿಯಾದಲ್ಲಿ ಬದಲಾವಣೆ?:
ಅಂತಿಮ ಟೆಸ್ಟ್ಗೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಅನಿವಾರ್ಯವಾಗಿದೆ. ವಿಕೆಟ್ ಕೀಪರ್ ಕೆಎಸ್ ಭರತ್ ಕಳೆದ ಮೂರೂ ಪಂದ್ಯಗಳಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ. ಹೀಗಾಗಿ ಅವರನ್ನು ತಂಡದಿಂದ ಕೈಬಿಟ್ಟು ಇಶನ್ ಕಿಶನ್ಗೆ ಅವಕಾಶ ಕೊಡುವ ಸಾಧ್ಯತೆ ಇದೆ. ಏಕದಿನ ಮತ್ತು ಟಿ20ಯಲ್ಲಿ ತಮ್ಮ ಫಾರ್ಮ್ನ್ನು ತೋರಿರುವ ಕಿಶನ್ ಅಂತಿಮ ಟೆಸ್ಟ್ನಲ್ಲಿ ಡೆಬ್ಯೂ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಅದರಂತೆ ಕಳೆದ ಟೆಸ್ಟ್ನಿಂದ ವಿಶ್ರಾಂತಿ ಪಡೆದುಕೊಂಡಿದ್ದ ಮೊಹಮ್ಮದ್ ಶಮಿ ತಂಡ ಸೇರಿಕೊಳ್ಳಲಿದ್ದಾರೆ. ಇವರಿಗೆ ಮೊಹಮ್ಮದ್ ಶಮಿ ಅಥವಾ ಉಮೇಶ್ ಯಾದವ್ ಜಾಗ ಬಿಟ್ಟುಕೊಡಬೇಕು.
ಉಳಿದಂತೆ ನಾಯಕ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಬ್ಯಾಟಿಂಗ್ನಲ್ಲಿ ಆಸರೆಯಾಬೇಕು. ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದ ಗಿಲ್, ಭರತ್, ಶ್ರೇಯಸ್ ಅಯ್ಯರ್ ನೆಟ್ನಲ್ಲಿ ಸಾಕಷ್ಟು ಅಭ್ಯಾಸ ಮಾಡಿದ್ದಾರೆ. ದ್ರಾವಿಡ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಇವರ ಜೊತೆ ಸುದೀರ್ಘವಾದ ಸೆಷನ್ ನಡೆಸಿದರು. ಆಲ್ರೌಂಡರ್ಗಳಾದ ಜಡೇಜಾ, ಅಶ್ವಿನ್ ಹಾಗೂ ಅಕ್ಷರ್ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ವೇಗಿಗಳು ಕೂಡ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
AB De Villier: ‘ಸಾರ್ವಕಾಲಿಕ ಶ್ರೇಷ್ಠ T20 ಆಟಗಾರ’ನನ್ನು ಹೆಸರಿಸಿದ ಎಬಿ ಡಿವಿಲಿಯರ್ಸ್
ಇತ್ತ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ನಾಲ್ಕನೇ ಟೆಸ್ಟ್ನಿಂದಲೂ ಹೊರಗುಳಿದಿದ್ದಾರೆ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ ಅವರು ನಾಯಕನಾಗಿ ಮುಂದುವರೆಯಲಿದ್ದಾರೆ. ಸ್ಮಿತ್ ನಾಯಕತ್ವದಲ್ಲಿ ಕಳೆದ ಪಂದ್ಯ ಗೆದ್ದಿದ್ದ ಆಸೀಸ್ ಪಡೆ ಇಂದಿನ ಪಂದ್ಯಕ್ಕೆ ಬದಲಾವಣೆ ಮಾಡುವುದು ಅನುಮಾನ. ಟಾಡ್ ಮರ್ಫಿ, ನೇಥನ್ ಲಿಯಾನ್ ಹಾಗೂ ಮ್ಯಾಟ್ ಕುನೆಮನ್ ತಂಡದ ಪ್ರಮುಖ ಸ್ಪಿನ್ ಅಸ್ತ್ರವಾಗಿದೆ. ಬ್ಯಾಟಿಂಗ್ನಲ್ಲಿ ಸ್ಮಿತ್, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ, ಉಸ್ಮಾನ್ ಖವಾಜಾ, ಪೀಟರ್ ಹ್ಯಾಂಡ್ಸ್‌ಕಂಬ್, ಕ್ಯಾಮರಾನ್ ಗ್ರೀನ್, ಮಾರ್ನಸ್ ಲಾಬುಷೇನ್ ಮಿಂಚಬೇಕಿದೆ.
ಭಾರತ ಗೆಲ್ಲಲೇ ಬೇಕು:
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸ ಬೇಕಾದಲ್ಲಿ ಭಾರತ ಈ ಟೆಸ್ಟ್ ಪಂದ್ಯದಲ್ಲಿ ಗೆಲ್ಲಬೇಕಿದೆ. ಇಲ್ಲದಿದ್ದಲ್ಲಿ ಶ್ರೀಲಂಕಾ ಫೈನಲ್ಗೆ ಹೋಗುವ ಅವಕಾಶ ಮಾಡಿಕೊಳ್ಳುವ ಸಾಧ್ಯತೆ ಇದೆ. ಇಂದಿನಿಂದ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಶ್ರೀಲಂಕಾಗೆ ಕೂಡ ಪಂದ್ಯ ಆರಂಭವಾಗಲಿದೆ. ಎರಡು ಟೆಸ್ಟ್ ಪಂದ್ಯದ ಸರಣಿಯಲ್ಲಿ ಕಿವಿಸ್ನ್ನು ತವರಿನಲ್ಲಿ ಕ್ಲೀನ್ ಸ್ವೀಪ್ ಮಾಡಿದರೆ ಲಂಕಾ WTC ಫೈನಲ್ ಪ್ರವೇಶಿಸಲಿದೆ. ಹೀಗಾಗಿ ಭಾರತಕ್ಕೆ ಗೆದ್ದರಷ್ಟೆ ಉಳಿಗಾಲ. ಭಾರತ-ಆಸ್ಟ್ರೇಲಿಯಾ 105 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ ಕಾಂಗರೂ ಪಡೆ 44 ಮತ್ತು ಭಾರತ 32 ಪಂದ್ಯಗಳನ್ನು ಗೆದ್ದಿದೆ. 28 ಪಂದ್ಯ ಡ್ರಾ ಹಾಗೂ ಒಂದು ಪಂದ್ಯ ಟೈ ಆಗಿದೆ.
ಮೋದಿ ಉಪಸ್ಥಿತಿ?:
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್ ಉಪಸ್ಥಿತರಿರಲಿದ್ದಾರೆ ಎಂದು ವರದಿಯಾಗಿದೆ. ಟಾಸ್ ವೇಳೆ ಮೋದಿ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ, ಪಂದ್ಯದ ವೇಳೆ ಮೋದಿ ಕಾಮೆಂಟರಿ ಮಾಡುವುದನ್ನು ಸಹ ನೋಡಬಹುದು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಸ್. ಭರತ್, ಇಶಾನ್ ಕಿಶನ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಸೂರ್ಯಕುಮಾರ್ ಯಾದವ್, ಜಯದೇವ್ ಉನದ್ಕತ್.
ಆಸ್ಟ್ರೇಲಿಯಾ ತಂಡ: ಸ್ಟೀವ್ ಸ್ಮಿತ್ (ನಾಯಕ), ಮ್ಯಾಥ್ಯೂ ರೆನ್‌ಶಾ, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ, ಉಸ್ಮಾನ್ ಖ್ವಾಜಾ, ಪೀಟರ್ ಹ್ಯಾಂಡ್ಸ್‌ಕಂಬ್, ಕ್ಯಾಮರಾನ್ ಗ್ರೀನ್, ಮ್ಯಾಟ್ ಕುನೆಮನ್, ಮಾರ್ನಸ್ ಲಾಬುಷೇನ್, ನೇಥನ್ ಲಯನ್, ಲ್ಯಾನ್ಸ್ ಮಾರಿಸ್, ಟಾಡ್ ಮರ್ಫಿ, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವಿಪ್ಸನ್, ಸ್ಕಾಟ್ ಬೊಲಾಂಡ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:42 am, Thu, 9 March 23