WPL 2023: ಯುಪಿ ವಾರಿಯರ್ಸ್​ಗೆ ಜಯ: ಪ್ಲೇಆಫ್​ನಿಂದ RCB ಔಟ್

Gujarat Giants vs UP Warriorz: ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಸೋತರೆ ಮಾತ್ರ ಆರ್​ಸಿಬಿ ತಂಡಕ್ಕೆ ಪ್ಲೇಆಫ್ ಪ್ರವೇಶಿಸುವ ಅವಕಾಶವಿತ್ತು.

WPL 2023: ಯುಪಿ ವಾರಿಯರ್ಸ್​ಗೆ ಜಯ: ಪ್ಲೇಆಫ್​ನಿಂದ RCB ಔಟ್
UPW - RCB
Edited By:

Updated on: Mar 20, 2023 | 7:00 PM

WPL 2023: ಮುಂಬೈನ ಬ್ರಬೋರ್ನ್​ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ 18ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಸ್ ತಂಡವು ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಯುಪಿ ವಾರಿಯರ್ಸ್ ಮುಂದಿನ ಹಂತಕ್ಕೇರಿದರೆ, ಆರ್​ಸಿಬಿ ತಂಡದ ಪ್ಲೇಆಫ್​ ರೇಸ್​ನಿಂದ ಹೊರಬಿದ್ದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಗುಜರಾತ್ ತಂಡಕ್ಕೆ ಸೋಫಿಯಾ ಡಂಕ್ಲಿ ಹಾಗೂ ಲೌರಾ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 41 ರನ್​ ಪೇರಿಸಿದ ಈ ಜೋಡಿಯು ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಆ ಬಳಿಕ ಬಂದ ಹೇಮಲತಾ 33 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್​ನೊಂದಿಗೆ 57 ರನ್​ ಚಚ್ಚಿದರು.
ಅಂತಿಮ ಹಂತದಲ್ಲಿ ಅಬ್ಬರಿಸಿದ ಗಾರ್ಡ್ನರ್ 39 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ನೊಂದಿಗೆ 60 ರನ್​ ಕಲೆಹಾಕಿದರು. ಪರಿಣಾಮ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುಜರಾತ್ ಜೈಂಟ್ಸ್ ತಂಡವು 178 ರನ್​ ಕಲೆಹಾಕಿತು.

179 ರನ್​ಗಳ ಟಾರ್ಗೆಟ್ ಪಡೆದ ಯುಪಿ ವಾರಿಯರ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ತಹ್ಲಿಯಾ ಮೆಕ್​​ಗ್ರಾಥ್ ಹಾಗೂ ಗ್ರೇಸ್ ಹ್ಯಾರಿಸ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು. ಅಲ್ಲದೆ 15 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 130 ಕ್ಕೆ ತಂದು ನಿಲ್ಲಿಸಿದರು.
ಈ ಹಂತದಲ್ಲಿ 38 ಎಸೆತಗಳಲ್ಲಿ 11 ಫೋರ್​ನೊಂದಿಗೆ 57 ರನ್​ ಬಾರಿಸಿದ ತಹ್ಲಿಯಾ ಮೆಕ್​ಗ್ರಾಥ್ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ಗ್ರೇಸ್ ಹ್ಯಾರಿಸ್ ಗುಜರಾತ್ ಜೈಂಟ್ಸ್ ಬೌಲರ್​ಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದರು. ಪರಿಣಾಮ ಅಂತಿಮ 2 ಓವರ್​ಗಳಲ್ಲಿ ಯುಪಿ ವಾರಿಯರ್ಸ್​ಗೆ ಗೆಲ್ಲಲು 19 ರನ್​ಗಳ ಅವಶ್ಯಕತೆಯಿತ್ತು.

19ನೇ ಓವರ್ ಎಸೆದ ಕಿಮ್ ಗಾರ್ತ್ ಎಸೆತಗಳಲ್ಲಿ ಸೋಫಿಯಾ ಫೋರ್ ಬಾರಿಸಿದರೆ, ಗ್ರೇಸ್ ಹ್ಯಾರಿಸ್ ಭರ್ಜರಿ ಸಿಕ್ಸ್ ಸಿಡಿಸಿದರು. 8 ಎಸೆತಗಳಲ್ಲಿ 7 ರನ್​ಗಳು ಮಾತ್ರ ಬೇಕಿದ್ದ ವೇಳೆ ಮತ್ತೊಂದು ಭರ್ಜರಿ ಹೊಡೆತಕ್ಕೆ ಮುಂದಾಗಿ ಗ್ರೇಸ್ ಹ್ಯಾರಿಸ್ (72 ರನ್, 41 ಎಸೆತ) ಕ್ಯಾಚ್ ನೀಡಿ ಹೊರನಡೆದರು.

ಕೊನೆಯ ಓವರ್​ನಲ್ಲಿ ಯುಪಿ ವಾರಿಯರ್ಸ್ 7 ರನ್​ಗಳ ಟಾರ್ಗೆಟ್ ಪಡೆಯಿತು. ಸ್ನೇಹ್ ರಾಣಾ ಎಸೆದ ಅಂತಿಮ ಓವರ್​ನ ಮೊದಲ ಎಸೆತದಲ್ಲಿ ಸೋಫಿ ಎಕ್ಲೆಸ್ಟೋನ್ 2 ರನ್ ಕಲೆಹಾಕಿದರು. ಆ ಬಳಿಕ 2 ಸಿಂಗಲ್ ತೆಗೆದರು. ಈ ಹಂತದಲ್ಲಿ 3 ಎಸೆತಗಳಲ್ಲಿ 3 ರನ್​ಗಳ ಅವಶ್ಯಕತೆಯಿತ್ತು. ಇದೇ ವೇಳೆ 2 ರನ್​ ಓಡುವ ತವಕದಲ್ಲಿ ಸಿಮ್ರಾನ್ ಶೇಖ್ ರನೌಟ್ ಆದರು.

ಕೊನೆಯ 2 ಎಸೆತಗಳಲ್ಲಿ 2 ರನ್​ಗಳ ಗುರಿ. ಸ್ನೇಹ್ ರಾಣಾ ಎಸೆತವನ್ನು ಸ್ವೀಪ್ ಶಾಟ್ ಮೂಲಕ ಬೌಂಡರಿಗಟ್ಟಿ ಸೋಫಿ ಎಕ್ಲೆಸ್ಟೋನ್ ಯುಪಿ ವಾರಿಯರ್ಸ್​ಗೆ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಯುಪಿ ವಾರಿಯರ್ಸ್ ತಂಡವು ಪ್ಲೇಆಫ್​ ಪ್ರವೇಶಿಸಿದೆ. ಇತ್ತ ಆರ್​ಸಿಬಿ ತಂಡವು ಪ್ಲೇಆಫ್​ನಿಂದ ಹೊರಬಿದ್ದಿದೆ.

ಕಮರಿದ ಆರ್​ಸಿಬಿ ಪ್ಲೇಆಫ್ ಕನಸು:

ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಸೋತರೆ ಮಾತ್ರ ಆರ್​ಸಿಬಿ ತಂಡಕ್ಕೆ ಪ್ಲೇಆಫ್ ಪ್ರವೇಶಿಸಲು ಅವಕಾಶವಿತ್ತು. ಅಂದರೆ ಪಾಯಿಂಟ್ ಟೇಬಲ್​ನಲ್ಲಿ ಮೂರನೇ ಸ್ಥಾನದಲ್ಲಿದ್ದ ಯುಪಿ ವಾರಿಯರ್ಸ್ ತನ್ನ 2 ಪಂದ್ಯಗಳಲ್ಲೂ ಸೋಲಬೇಕಿತ್ತು. ಇತ್ತ ಆರ್​ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ನೆಟ್​ ರನ್​ ರೇಟ್ ಮೂಲಕ ಪ್ಲೇಆಫ್ ಪ್ರವೇಶಿಸುವ ಅವಕಾಶವಿತ್ತು. ಆದರೀಗ ಗುಜರಾತ್ ಜೈಂಟ್ಸ್ ತಂಡಕ್ಕೆ ಸೋಲುಣಿಸುವ ಮೂಲಕ ಯುಪಿ ವಾರಿಯರ್ಸ್ ತಂಡವು ಪ್ಲೇಆಫ್​ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇತ್ತ ಆರ್​ಸಿಬಿ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದರೂ ಪ್ಲೇಆಫ್​ಗೇರುವುದಿಲ್ಲ.

ಇದನ್ನೂ ಓದಿ: IPL 2023: ಐಪಿಎಲ್ 5 ತಂಡಗಳ ಹೊಸ ಜೆರ್ಸಿ ಅನಾವರಣ

3 ತಂಡಗಳಿಗೆ ಮಾತ್ರ ಅವಕಾಶ:

ವುಮೆನ್ಸ್ ಪ್ರೀಮಿಯರ್ ಲೀಗ್ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನ ಪಡೆಯುವ ತಂಡವು ನೇರವಾಗಿ ಫೈನಲ್ ಪ್ರವೇಶಿಸಲಿದೆ. ಇನ್ನು 2ನೇ ಹಾಗೂ 3ನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಇದರಲ್ಲಿ ಗೆಲ್ಲುವ ತಂಡವು ಫೈನಲ್ ಪ್ರವೇಶಿಸಲಿದೆ.

 

Published On - 6:57 pm, Mon, 20 March 23