WPL 2023: ಮುಂಬೈಗೆ 72 ರನ್​ಗಳ ಸುಲಭ ಜಯ; ಫೈನಲ್ ಎದುರಾಳಿ ಡೆಲ್ಲಿ

|

Updated on: Mar 24, 2023 | 11:37 PM

WPL 2023: ಮಹಿಳಾ ಪ್ರೀಮಿಯರ್ ಲೀಗ್ 2023 ರ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 72 ರನ್‌ಗಳಿಂದ ಯುಪಿ ವಾರಿಯರ್ಸ್ ತಂಡವನ್ನು ಸೋಲಿಸುವುದರೊಂದಿಗೆ ಚೊಚ್ಚಲ ಆವೃತ್ತಿಯ ಎರಡನೇ ಫೈನಲಿಸ್ಟ್ ಆಗಿ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಟ್ಟಿದೆ.

WPL 2023: ಮುಂಬೈಗೆ 72 ರನ್​ಗಳ ಸುಲಭ ಜಯ; ಫೈನಲ್ ಎದುರಾಳಿ ಡೆಲ್ಲಿ
ಮುಂಬೈ ತಂಡ
Follow us on

ಮಹಿಳಾ ಪ್ರೀಮಿಯರ್ ಲೀಗ್ 2023  (Women’s Premier League )ರ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 72 ರನ್‌ಗಳಿಂದ ಯುಪಿ ವಾರಿಯರ್ಸ್ ತಂಡವನ್ನು (Mumbai thrashed UP Warriors) ಸೋಲಿಸುವುದರೊಂದಿಗೆ ಚೊಚ್ಚಲ ಆವೃತ್ತಿಯ ಎರಡನೇ ಫೈನಲಿಸ್ಟ್ ಆಗಿ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಟ್ಟಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ ಯುಪಿ ಗೆಲುವಿಗೆ 183 ರನ್‌ಗಳ ಸವಾಲನ್ನು ನೀಡಿತು. ಈ ಗುರಿ ಬೆನ್ನಟ್ಟಿದ ಯುಪಿ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಅದರಲ್ಲೂ ಇಸ್ಸಿ ವಾಂಗ್ (Issy Wong) ಅವರ ಹ್ಯಾಟ್ರಿಕ್ ಮತ್ತು ಇತರ ಬೌಲರ್‌ಗಳ ದಾಳಿಗೆ ನಲುಗಿದ ಯುಪಿ, ಮುಂಬೈಗೆ ಸುಲಭ ತುತ್ತಾಯಿತು. ಅಂತಿಮವಾಗಿ ಯುಪಿ ತಂಡ 17.4 ಓವರ್‌ ಬ್ಯಾಟಿಂಗ್ ಮಾಡಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 110 ರನ್​ಗಳಿಗೆ ಆಲೌಟ್ ಆಯಿತು.

ಬ್ರಂಟ್​ ಅಬ್ಬರದ ಅರ್ಧಶತಕ

ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡಕ್ಕೆ ಆರಂಭಿಕ ಆಟಗಾರ್ತಿ ಯಾಸ್ತಿಕಾ ಭಾಟಿಯಾ (21) ಮತ್ತು ಹೇಲಿ ಮ್ಯಾಥ್ಯೂಸ್ (26) ಉತ್ತಮ ಆರಂಭ ನೀಡಿದರು. ಆದರೆ, ಇಬ್ಬರಿಗೂ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಆ ಬಳಿಕ ಬಂದ ನೇಟ್ ಸಿವರ್ ಕೇವಲ 6 ರನ್ ಗಳಿಸಿದ್ದಾಗಲೇ ಔಟಾಗಬೇಕಿತ್ತು. ಆದರೆ ಎಕ್ಲೆಸ್ಟೋನ್ ಕ್ಯಾಚ್ ಕೈಚೆಲ್ಲಿದರು. ಇದಾದ ಬಳಿಕ ರನ್ ಮಳೆಗರೆದ ಆಂಗ್ಲ ಆಲ್ ರೌಂಡರ್ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

MI vs UPW Highlights: ಕೌರ್ ಪಡೆಗೆ ಸುಲಭ ತುತ್ತಾದ ಯುಪಿ; ಫೈನಲ್​ಗೆ ಮುಂಬೈ

ಬ್ರಂಟ್​ಗೆ ಉತ್ತಮ ಸಾಥ್ ನೀಡಿದ ಅಮೆಲಿಯಾ ಕಾರ್ (29 ರನ್, 19 ಎಸೆತ) ಮತ್ತು ಪೂಜಾ ವಸ್ತ್ರಕರ್ ಉತ್ತಮ ಜೊತೆಯಾಟ ನಡೆಸಿದರು. ಇದರಲ್ಲಿ ಸಿವರ್ ಬ್ರಂಟ್ ಮತ್ತು ಕಾರ್ ನಡುವೆ ಸುಮಾರು 6 ಓವರ್‌ಗಳಲ್ಲಿ 60 ರನ್‌ಗಳ ಜೊತೆಯಾಟವಿತ್ತು. ಅಂತಿಮವಾಗಿ ಸಿವರ್-ಬ್ರಂಟ್ 72 ರನ್ (38 ಎಸೆತ, 9 ಬೌಂಡರಿ, 2 ಸಿಕ್ಸರ್) ಗಳಿಸಿ ಅಜೇಯರಾಗಿ ಮರಳಿದರೆ, ಯುಪಿ ಪರ ಎಕ್ಲೆಸ್ಟನ್ 2 ವಿಕೆಟ್ ಪಡೆದರು.

ಯುಪಿ ಪಂದ್ಯದಲ್ಲೇ ಇರಲಿಲ್ಲ

ಈ ಬೃಹತ್ ಗುರಿ ಬೆನ್ನಟ್ಟಿದ ಯುಪಿಗೆ ಉತ್ತಮ ಆರಂಭ ಸಿಗಲಿಲ್ಲ. ಪಂದ್ಯಾವಳಿಯಲ್ಲಿ ಪ್ರಚಂಡ ಫಾರ್ಮ್‌ನಲ್ಲಿರುವ ತಹ್ಲಿಯಾ ಮೆಕ್‌ಗ್ರಾತ್ ಸೇರಿದಂತೆ ಐದನೇ ಓವರ್‌ನಲ್ಲಿ 21 ರನ್‌ಗಳಿಗೆ ನಾಯಕಿ ಅಲಿಸ್ಸಾ ಹೀಲಿ ಸೇರಿದಂತೆ 3 ದೊಡ್ಡ ವಿಕೆಟ್‌ಗಳನ್ನು ತಂಡ ಕಳೆದುಕೊಂಡಿತು. ಇದಾದ ಬಳಿಕ ಕಿರಣ್ ನಾವಗಿರೆ (43 ರನ್, 27 ಎಸೆತ, 4 ಬೌಂಡರಿ, 3 ಸಿಕ್ಸರ್) ತಂಡದ ಪರ ಕೊಂಚ ಹೋರಾಟ ನೀಡಿದರು. ಆದರೆ ಇನ್ನೊಂದು ತುದಿಯಿಂದ ಅವರಿಗೆ ಯಾರು ಸಾಥ್ ನೀಡಲಿಲ್ಲ. ಗ್ರೇಸ್ ಹ್ಯಾರಿಸ್ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್ ಕೂಡ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು.

ಆ ಬಳಿಕ 13ನೇ ಓವರ್ ಎಸೆಯಲು ಬಂದ ಇಸ್ಸಿ ವಾಂಗ್ (4/15) ಲೀಗ್​ನಲ್ಲಿ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆಯುವುದರೊಂದಿಗೆ ಇತಿಹಾಸ ನಿರ್ಮಿಸಿದರು. ಇಂಗ್ಲೆಂಡ್‌ನ 20 ವರ್ಷದ ಈ ವೇಗದ ಬೌಲರ್ ಸತತ ಮೂರು ಎಸೆತಗಳಲ್ಲಿ ನವಗಿರೆ, ಸಿಮ್ರಾನ್ ಶೇಖ್ ಮತ್ತು ಸೋಫಿ ಎಕ್ಲೆಸ್ಟೋನ್ ಅವರ ವಿಕೆಟ್ ಪಡೆಯುವ ಮೂಲಕ ಹ್ಯಾಟ್ರಿಕ್ ಸಂಗ್ರಹಿಸಿದರು. ಇದಾದ ನಂತರ 18ನೇ ಓವರ್‌ನಲ್ಲಿ ಕೊನೆಯ ವಿಕೆಟ್‌ ಉರುಳುವುದರೊಂದಿಗೆ ಯುಪಿ ತಂಡ 110 ರನ್‌ಗಳಿಗೆ ಸರ್ವಪತನವಾಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:10 pm, Fri, 24 March 23