WPL 2024: ಗುಜರಾತ್ ಜೈಂಟ್ಸ್ಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು
Gujarat Giants vs Delhi Capitals: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಸೆಣಸಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ರಾತ್ರಿ 7.30 ರಿಂದ ಶುರುವಾಗಲಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದರೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಬಹುದು.
ವುಮೆನ್ಸ್ ಪ್ರೀಮಿಯರ್ ಲೀಗ್ನ (WPL 2024) 10ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ ಗುಜರಾತ್ ಜೈಂಟ್ಸ್. ಅಂದರೆ ಈ ಬಾರಿ ಆಡಿರುವ 3 ಪಂದ್ಯಗಳಲ್ಲೂ ಗುಜರಾತ್ ತಂಡವು ಸೋಲನುಭವಿಸಿದ್ದು, ಈ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿದೆ.
ಅತ್ತ ಮೊದಲ ಪಂದ್ಯದಲ್ಲಿ ವಿರೋಚಿತ ಸೋಲುಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆ ಬಳಿಕ ಆಡಿದ 2 ಪಂದ್ಯಗಳಲ್ಲೂ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಡೆಯಿಂದ ಗುಜರಾತ್ ಜೈಂಟ್ಸ್ಗೆ ಕಠಿಣ ಪೈಪೋಟಿ ಎದುರಾಗಲಿದೆ ಎಂದೇ ಹೇಳಬಹುದು.
ಇನ್ನು ಉಭಯ ತಂಡಗಳು ಇದುವರೆಗೆ 2 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಒಮ್ಮೆ ಗುಜರಾತ್ ಜೈಂಟ್ಸ್ ಗೆದ್ದರೆ, ಮತ್ತೊಮ್ಮೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ದಾಖಲಿಸಿದೆ. ಇದಾಗ್ಯೂ ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಗುಜರಾತ್ ಜೈಂಟ್ಸ್ ತಂಡ ಕಡೆಯಿಂದ ಸಾಂಘಿಕ ಪ್ರದರ್ಶನ ಮೂಡಿ ಬರುತ್ತಿಲ್ಲ ಎಂಬುದೇ ಸತ್ಯ. ಇದಾಗ್ಯೂ ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ದಾಖಲಿಸದೆಯಾ ಕಾದು ನೋಡಬೇಕಿದೆ.