WPL 2024: ಬೆಂಗಳೂರಿನಲ್ಲಿ ಡಬ್ಲ್ಯುಪಿಎಲ್ ಉದ್ಘಾಟನಾ ಪಂದ್ಯ; ಬಾಲಿವುಡ್ ತಾರೆಯರಿಂದ ಪ್ರದರ್ಶನ

|

Updated on: Feb 19, 2024 | 9:13 PM

WPL Opening Ceremony 2024: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡನೇ ಆವೃತ್ತಿಯ ಉದ್ಘಾಟನಾ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲ್ಲಿದೆ. ಅದಕ್ಕೂ ಮುನ್ನ ಬಿಸಿಸಿಐ ಭರ್ಜರಿ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದ್ದು ಬಾಲಿವುಡ್​ನ ಕೆಲವು ಸ್ಟಾರ್​ಗಳು ಕಾಣಸಿಕೊಳ್ಳಲಿದ್ದಾರೆ.

WPL 2024: ಬೆಂಗಳೂರಿನಲ್ಲಿ ಡಬ್ಲ್ಯುಪಿಎಲ್ ಉದ್ಘಾಟನಾ ಪಂದ್ಯ; ಬಾಲಿವುಡ್ ತಾರೆಯರಿಂದ ಪ್ರದರ್ಶನ
ಮಹಿಳೆಯರ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭ
Follow us on

ಮಹಿಳೆಯರ ಪ್ರೀಮಿಯರ್ ಲೀಗ್ (WPL) ಎರಡನೇ ಸೀಸನ್ ಫೆಬ್ರವರಿ 23 ರಂದು ಪ್ರಾರಂಭವಾಗುತ್ತಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Delhi Capitals vs Mumbai Indians) ನಡುವೆ ಉದ್ಘಾಟನಾ ಪಂದ್ಯ ನಡೆಯಲ್ಲಿದ್ದು, ಈ ಹೈವೋಲ್ಟೇಜ್ ಕದನಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸುತ್ತಿದೆ. ಈ ಪಂದ್ಯಕ್ಕೂ ಮುನ್ನ ಬಿಸಿಸಿಐ (BCCI) ಭರ್ಜರಿ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದ್ದು ಬಾಲಿವುಡ್​ನ ಕೆಲವು ಸ್ಟಾರ್​ಗಳು ಕಾಣಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಖ್ಯಾತ ನಟ ಕಾರ್ತಿಕ್ ಆರ್ಯನ್ (Kartik Aaryan) ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ.

ಉದ್ಘಾಟನಾ ಸಮಾರಂಭವು ಫೆಬ್ರವರಿ 23 ರಂದು ಸಂಜೆ 6:30 ಕ್ಕೆ ಪ್ರಾರಂಭವಾಗುತ್ತದೆ. ಇದರಲ್ಲಿ ಕಾರ್ತಿಕ್ ಆರ್ಯನ್ ಅಲ್ಲದೆ ಹಲವು ಬಾಲಿವುಡ್ ತಾರೆಯರನ್ನು ಕಾಣಬಹುದು. ಕಳೆದ ಬಾರಿ, ಉದ್ಘಾಟನಾ ಸಮಾರಂಭದಲ್ಲಿ ಕಿಯಾರಾ ಅಡ್ವಾಣಿ ಮತ್ತು ಕೃತಿ ಸನೋನ್ ಅವರಂತಹ ತಾರೆಯರು ಪ್ರದರ್ಶನ ನೀಡಿದ್ದರು. ಅದೇ ಸಮಯದಲ್ಲಿ, ಗಾಯಕ ಎಪಿ ಧಿಲ್ಲೋನ್ ತಮ್ಮ ಹಾಡುಗಳಿಂದ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದರು.

WPL 2024: ಆರ್​ಸಿಬಿಗೆ ಆರಂಭದಲ್ಲೇ ಆಘಾತ; ಇಡೀ ಆವೃತ್ತಿಯಿಂದ ಸ್ಟಾರ್ ಪ್ಲೇಯರ್ ಔಟ್..!

ಎರಡು ನಗರಗಳಲ್ಲಿ ಪಂದ್ಯಾವಳಿ

ಡಬ್ಲ್ಯುಪಿಎಲ್ ಎರಡನೇ ಸೀಸನ್ ಫೆಬ್ರವರಿ 23 ರಿಂದ ಮಾರ್ಚ್ 17 ರವರೆಗೆ ನಡೆಯಲಿದೆ. ಕಳೆದ ವರ್ಷದಂತೆ ಒಟ್ಟು ಐದು ತಂಡಗಳು 22 ಪಂದ್ಯಗಳನ್ನು ಆಡಲಿವೆ. ಆದರೆ, ಈ ಬಾರಿ ದೊಡ್ಡ ಬದಲಾವಣೆ ಕಂಡು ಬಂದಿದೆ. ವಾಸ್ತವವಾಗಿ, ಕಳೆದ ವರ್ಷ ಈ ಲೀಗ್ ಅನ್ನು ಮುಂಬೈ ಮತ್ತು ನವಿ ಮುಂಬೈನ ಎರಡು ಕ್ರೀಡಾಂಗಣಗಳಲ್ಲಿ ಆಡಲಾಗಿತ್ತು. ಆದರೆ, ಈ ಬಾರಿ ಈ ಲೀಗ್‌ನ ಆತಿಥ್ಯವನ್ನು ಮುಂಬೈ ಬದಲಿಗೆ ಬೆಂಗಳೂರು ಮತ್ತು ದೆಹಲಿಗೆ ನೀಡಲಾಗಿದೆ.

ದೆಹಲಿಯಲ್ಲಿ ಫೈನಲ್ ಪಂದ್ಯ

ಟೂರ್ನಿಯ ಮೊದಲ 11 ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಇದಾದ ನಂತರ ಎಲ್ಲಾ ಐದು ತಂಡಗಳು ದೆಹಲಿಗೆ ಪ್ರಯಾಣ ಬೆಳೆಸಲ್ಲಿದ್ದು, ಅಲ್ಲಿ ಎಲಿಮಿನೇಟರ್ ಸೇರಿದಂತೆ ಅಂತಿಮ ಪಂದ್ಯ ನಡೆಯಲಿದೆ. ಲೀಗ್ ಸುತ್ತಿನಲ್ಲಿ 20 ಪಂದ್ಯಗಳು ನಡೆಯಲಿದ್ದು, ಇದಾದ ಬಳಿಕ ಎಲಿಮಿನೇಟರ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಲೀಗ್ ಸುತ್ತಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದೆ. ಆದರೆ, ಎರಡು ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ ಆಡಲಿವೆ. 24 ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಒಂದೇ ಒಂದು ಡಬಲ್ ಹೆಡರ್ ಪಂದ್ಯವೂ ನಡೆಯುವುದಿಲ್ಲ. ಪ್ರತಿದಿನ ಒಂದು ಪಂದ್ಯ ಮಾತ್ರ ನಡೆಯಲಿದೆ. ಎಲಿಮಿನೇಟರ್ ಪಂದ್ಯ ಮಾರ್ಚ್ 15 ರಂದು ಮತ್ತು ಫೈನಲ್ ಪಂದ್ಯ ಮಾರ್ಚ್ 17 ರಂದು ದೆಹಲಿಯಲ್ಲಿ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:10 pm, Mon, 19 February 24