WPL 2026: ಮೊಟ್ಟ ಮೊದಲ ಬಾರಿಗೆ ಮುಂಬೈ ಮಣಿಸಿ ಪ್ಲೇಆಫ್​ಗೇರಿದ ಗುಜರಾತ್

WPL 19th Match: ಮಹಿಳಾ ಪ್ರೀಮಿಯರ್ ಲೀಗ್‌ನ 19ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮುಂಬೈ ಇಂಡಿಯನ್ಸ್‌ ತಂಡವನ್ನು 11 ರನ್‌ಗಳಿಂದ ಸೋಲಿಸಿ ಪ್ಲೇಆಫ್‌ಗೆ ಅರ್ಹತೆ ಗಳಿಸಿತು. ಇದು WPL ಇತಿಹಾಸದಲ್ಲಿ ಗುಜರಾತ್‌ಗೆ ಮುಂಬೈ ವಿರುದ್ಧದ ಮೊದಲ ಗೆಲುವು. ಈ ಸೋಲಿನ ಹೊರತಾಗಿಯೂ, ಮುಂಬೈ ಪ್ಲೇಆಫ್‌ಗೇರುವ ಅವಕಾಶವಿದೆ. ನಾಳೆ ನಡೆಯಲಿರುವ ದೆಹಲಿ ಪಂದ್ಯದ ಫಲಿತಾಂಶದ ಮೇಲೆ ಮುಂಬೈನ ಭವಿಷ್ಯ ನಿರ್ಧಾರವಾಗಲಿದೆ.

WPL 2026: ಮೊಟ್ಟ ಮೊದಲ ಬಾರಿಗೆ ಮುಂಬೈ ಮಣಿಸಿ ಪ್ಲೇಆಫ್​ಗೇರಿದ ಗುಜರಾತ್
Gg Vs Mi

Updated on: Jan 30, 2026 | 11:21 PM

ಮಹಿಳಾ ಪ್ರೀಮಿಯರ್ ಲೀಗ್‌ನ (Women’s Premier League) 19ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ (GG vs MI) ತಂಡಗಳು ಮುಖಾಮುಖಿಯಾಗಿದ್ದವು. ವಡೋದರಾದಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಮಣಿಸುವ ಮೂಲಕ ಪ್ಲೇಆಫ್‌ಗೇರಿದೆ. ಇದು ಮಾತ್ರವಲ್ಲದೆ ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಂಬೈ ತಂಡವನ್ನು ಮಣಿಸಿದ ದಾಖಲೆಗೆ ಗುಜರಾತ್ ಕೊರಳೊಡ್ಡಿದೆ. ಇನ್ನು ಈ ಪಂದ್ಯದಲ್ಲಿ ಸೋತರೂ ಮುಂಬೈ ತಂಡಕ್ಕೆ ಪ್ಲೇಆಫ್‌ಗೇರುವ ಅವಕಾಶವಿದೆ. ಆದರೆ ನಾಳೆ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ತಂಡ ಸೋತರಷ್ಟೇ ಮುಂಬೈ ಪ್ಲೇಆಫ್‌ಗೇರಲಿದೆ. ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್ 167 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ 156 ರನ್ ಕಲೆಹಾಕಲಷ್ಟೇ ಶಕ್ತವಾಗಿ 11 ರನ್​ಗಳಿಂದ ಸೋಲಿಗೆ ಶರಣಾಯಿತು.

167 ರನ್ ಕಲೆಹಾಕಿದ ಗುಜರಾತ್

ಟಾಸ್ ಗೆದ್ದ ಗುಜರಾತ್ ನಾಯಕಿ ಆಶ್ಲೇ ಗಾರ್ಡ್ನರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 167 ರನ್ ಗಳಿಸಿತು. ತಂಡದ ಪರ ಆಶ್ಲೇ ಗಾರ್ಡ್ನರ್ 46 ರನ್ ಗಳಿಸಿ ಗರಿಷ್ಠ ಸ್ಕೋರ್ ಎನಿಸಿಕೊಂಡರೆ, ಜಾರ್ಜಿಯಾ ವೇರ್‌ಹ್ಯಾಮ್ ಅಜೇಯ 44 ರನ್ ಬಾರಿಸಿದರು. ಸೋಫಿ ಡಿವೈನ್ 25 ರನ್ ಗಳಿಸಿದರೆ, ಅನುಷ್ಕಾ ಶರ್ಮಾ 33 ರನ್ ಗಳಿಸಿದರು. ಮುಂಬೈ ಪರ ಅಮೆಲಿಯಾ ಕೆರ್ ಎರಡು ವಿಕೆಟ್ ಪಡೆದರೆ, ಶಬ್ನಿಮ್ ಇಸ್ಮಾಯಿಲ್ ಮತ್ತು ನ್ಯಾಟ್ ಸಿವರ್-ಬ್ರಂಟ್ ತಲಾ ಒಂದು ವಿಕೆಟ್ ಪಡೆದರು.

ಹರ್ಮನ್‌ಪ್ರೀತ್ ಹೋರಾಟ ವ್ಯರ್ಥ

168 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಕಳಪೆ ಆರಂಭ ಪಡೆದುಕೊಂಡಿತು. ಪ್ರಮುಖ ಬ್ಯಾಟರ್​ಗಳು ಬೇಗನೇ ವಿಕೆಟ್ ಒಪ್ಪಿಸಿದ ಪರಿಣಾಮ ಮುಂಬೈ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 156 ರನ್‌ಗಳಿಸಲಷ್ಟೇ ಶಕ್ತವಾಯಿತು. ಒಂದು ಹಂತದಲ್ಲಿ, ತಂಡವು 11.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 82 ರನ್‌ಗಳನ್ನು ಗಳಿಸಿತ್ತು. ಆ ನಂತರ ಹರ್ಮನ್‌ಪ್ರೀತ್ ಕೌರ್ ಬಿರುಸಿನ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಹರ್ಮನ್‌ಪ್ರೀತ್ ಕೌರ್ 48 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ ಅಜೇಯ 82 ರನ್ ಗಳಿಸಿದರು. ಆದಾಗ್ಯೂ, ಇತರ ಬ್ಯಾಟರ್​ಗಳು ಹೆಚ್ಚಿನ ಕೊಡುಗೆ ನೀಡಲಿಲ್ಲ. ಗುಜರಾತ್ ಪರ ಸೋಫಿ ಡಿವೈನ್ ಮತ್ತು ಜಾರ್ಜಿಯಾ ವೇರ್‌ಹ್ಯಾಮ್ ತಲಾ 2 ವಿಕೆಟ್‌ಗಳನ್ನು ಪಡೆದರು.

3 ತಂಡಗಳ ನಡುವೆ ಪ್ಲೇಆಫ್​ ರೇಸ್

ಇದೀಗ ಗುಜರಾತ್ ಜೈಂಟ್ಸ್ ಮತ್ತು ಆರ್‌ಸಿಬಿ ಪ್ಲೇಆಫ್ ತಲುಪಿದ್ದು, ಕೇವಲ ಒಂದು ಸ್ಥಾನ ಮಾತ್ರ ಉಳಿದಿದೆ. ಮುಂಬೈ ಜೊತೆಗೆ, ದೆಹಲಿ ಮತ್ತು ಯುಪಿ ಕೂಡ ಈ ಸ್ಥಾನಕ್ಕೆ ಸ್ಪರ್ಧಿಗಳಾಗಿವೆ. ಆದಾಗ್ಯೂ, ಲೀಗ್ ಹಂತದಲ್ಲಿ ಕೇವಲ ಒಂದು ಪಂದ್ಯ ಮಾತ್ರ ಉಳಿದಿದೆ, ಇದು ದೆಹಲಿ ಮತ್ತು ಯುಪಿ ನಡುವೆ ನಡೆಯಲಿದೆ. ಈ ಪಂದ್ಯವನ್ನು ದೆಹಲಿ ಗೆದ್ದರೆ, ಅದು ಪ್ಲೇಆಫ್‌ಗೆ ಮುನ್ನಡೆಯುತ್ತದೆ. ಆದಾಗ್ಯೂ, ಯುಪಿ ದೊಡ್ಡ ಅಂತರದಿಂದ ಗೆದ್ದರೆ, ಅದು ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತದೆ. ಇದಲ್ಲದೆ, ಯುಪಿ ಪಂದ್ಯವನ್ನು ಸಣ್ಣ ಅಂತರದಿಂದ ಗೆದ್ದರೆ, ಮುಂಬೈ ನೆಟ್ ರನ್ ರೇಟ್ ಆಧಾರದ ಮೇಲೆ ಅರ್ಹತೆ ಪಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:00 pm, Fri, 30 January 26