
ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ (Australia vs South Africa) ನಡುವೆ ಲಾರ್ಡ್ಸ್ ಮೈದಾನದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (World Test Championship Final) ಪಂದ್ಯವನ್ನು ದಕ್ಷಿಣ ಆಫ್ರಿಕಾ 5 ವಿಕೆಟ್‌ಗಳಿಂದ ಗೆದ್ದು ಇತಿಹಾಸ ಸೃಷ್ಟಿಸಿದೆ. ಗೆಲುವಿಗೆ ಆಸ್ಟ್ರೇಲಿಯಾ ನೀಡಿದ 282 ರನ್‌ಗಳ ಗುರಿಯನ್ನು ಆಫ್ರಿಕಾ ತಂಡ 5 ವಿಕೆಟ್ ಕಳೆದುಕೊಂಡು ಸಾಧಿಸಿತು. ಆಫ್ರಿಕಾ ಪರ ಆರಂಭಿಕ ಐಡೆನ್ ಮಾರ್ಕ್ರಾಮ್ (Aiden Markram) 136 ರನ್‌ಗಳ ಇನ್ನಿಂಗ್ಸ್ ಆಡಿದರೆ, ನಾಯಕ ಟೆಂಬಾ ಬವುಮಾ (Temba Bavuma) ಕೂಡ ಇಂಜುರಿ ನಡುವೆಯೂ 66 ರನ್‌ಗಳ ಪ್ರಮುಖ ಕಾಣಿಕೆ ನೀಡಿದರು. ಇವರಿಬ್ಬರು 147 ರನ್‌ಗಳ ಜೊತೆಯಾಟವನ್ನಾಡಿ ತಂಡವನ್ನು ಐತಿಹಾಸಿಕ ಗೆಲುವಿಗೆ ಮುನ್ನಡೆಸಿದರು. ಈ ಐಸಿಸಿ ಟ್ರೋಫಿ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ ಬರೋಬ್ಬರಿ 27 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.
27 ವರ್ಷಗಳ ಹಿಂದೆ ಅಂದರೆ 1998 ರಲ್ಲಿ ಢಾಕಾದಲ್ಲಿ ನಡೆದಿದ್ದ ಇಂಟರ್‌ನ್ಯಾಷನಲ್ ಕಪ್ (ಇಂದಿನ ಚಾಂಪಿಯನ್ಸ್ ಟ್ರೋಫಿ) ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಪ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ವಿಂಡೀಸ್ ತಂಡ 245 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ್ದ ಹ್ಯಾನ್ಸಿ ಕ್ರೋನಿಯೆ ನಾಯಕತ್ವದ ಆಫ್ರಿಕಾ ತಂಡ 6 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತ್ತು. ಈ ಮೂಲಕ ಐಸಿಸಿ ಟ್ರೋಫಿ ಬರವನ್ನು ನೀಗಸಿಕೊಂಡಿದ್ದ ಆಫ್ರಿಕಾ, ಮತ್ತೊಂದು ಐಸಿಸಿ ಟ್ರೋಫಿ ಗೆಲ್ಲಲು 27 ವರ್ಷಗಳು ಬೇಕಾಯಿತು. ಇದೀಗ ಟೆಂಬಾ ಬವುಮಾ ನಾಯಕತ್ವದಲ್ಲಿ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ ಆಫ್ರಿಕಾ ತನ್ನ ಐಸಿಸಿ ಪ್ರಶಸ್ತಿ ಬರವನ್ನು ನೀಗಿಸಿಕೊಂಡಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 56.4 ಓವರ್‌ಗಳಲ್ಲಿ 212 ರನ್ ಕಲೆಹಾಕಿತು. ಸ್ಟೀವ್ ಸ್ಮಿತ್ ಮತ್ತು ಬ್ಯೂ ವೆಬ್‌ಸ್ಟರ್ ಆಸ್ಟ್ರೇಲಿಯಾ ಪರ ಅರ್ಧಶತಕ ಇನ್ನಿಂಗ್ಸ್ ಆಡಿದರು. ಸ್ಮಿತ್ 112 ಎಸೆತಗಳಲ್ಲಿ 66 ರನ್ ಬಾರಿಸಿದರೆ, ವೆಬ್‌ಸ್ಟರ್ 92 ಎಸೆತಗಳಲ್ಲಿ 72 ರನ್ ಗಳಿಸಿದರು. ಇತ್ತ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 57.1 ಓವರ್‌ಗಳಲ್ಲಿ 138 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 74 ರನ್‌ಗಳ ಮುನ್ನಡೆ ಸಾಧಿಸಿತು. ಇದಾದ ನಂತರವೂ ತಂಡವು ಸೋಲನ್ನು ಎದುರಿಸಬೇಕಾಯಿತು.
ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ಕೇವಲ 73 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಮಿಚೆಲ್ ಸ್ಟಾರ್ಕ್ 58 ರನ್‌ಗಳ ಅದ್ಭುತ ಇನ್ನಿಂಗ್ಸ್ ಮತ್ತು ಅಲೆಕ್ಸ್ ಕ್ಯಾರಿ 43 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ ತಂಡವನ್ನು 65 ಓವರ್‌ಗಳಲ್ಲಿ 207 ರನ್‌ಗಳಿಗೆ ಕೊಂಡೊಯ್ದರು. ಅಂತಿಮವಾಗಿ ದಕ್ಷಿಣ ಆಫ್ರಿಕಾಕ್ಕೆ 282 ರನ್‌ಗಳ ಗುರಿ ನೀಡಿದರು.
WTC 2025 final: ‘ಗೆದ್ದ ಆಫ್ರಿಕಾ’; ಹರಿಣಗಳ ಮುಡಿಗೇರಿದ ಟೆಸ್ಟ್ ಚಾಂಪಿಯನ್ ಕಿರೀಟ
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೆಟ್ಟ ಆರಂಭ ಪಡೆಯಿತು. ಆರಂಭಿಕ ರಯಾನ್ ರಿಕಲ್ಟನ್ 8 ಎಸೆತಗಳಲ್ಲಿ 6 ರನ್ ಗಳಿಸಿ ಔಟಾದರು. ಆದರೆ ಐಡೆನ್ ಮಾರ್ಕ್ರಾಮ್ ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿ, ಮೂರನೇ ದಿನದ ಆಟ ಮುಗಿಯುವ ಮೊದಲು ಶತಕ ಪೂರ್ಣಗೊಳಿಸಿದರು. ಮಾರ್ಕ್ರಾಮ್ಗೆ ಉತ್ತಮ ಸಾಥ್ ನೀಡಿದ ಟೆಂಬಾ ಬವುಮಾ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಆದಾಗ್ಯೂ, ನಾಲ್ಕನೇ ದಿನದಂದು ಅವರು ಬೇಗನೇ ಔಟಾದರು. ಎರಡನೇ ಇನ್ನಿಂಗ್ಸ್‌ನಲ್ಲಿ ಬವುಮಾ 134 ಎಸೆತಗಳಲ್ಲಿ 66 ರನ್‌ಗಳ ಪ್ರಮುಖ ಇನ್ನಿಂಗ್ಸ್ ಆಡಿದರು. ಇತ್ತ ಮಾರ್ಕ್ರಾಮ್ 207 ಎಸೆತಗಳಲ್ಲಿ 136 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ ತಂಡದ ಗೆಲುವನ್ನು ಖಚಿತ ಪಡಿಸಿದರು. ಅಂತಿಮವಾಗಿ ಆಫ್ರಿಕಾ 83.4 ಓವರ್‌ಗಳಲ್ಲಿ 282 ರನ್‌ಗಳನ್ನು ಗಳಿಸುವ ಮೂಲಕ ಹೊಸ ಟೆಸ್ಟ್ ಚಾಂಪಿಯನ್ ಆಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:07 pm, Sat, 14 June 25