WTC ಫೈನಲ್​ಗೇರಲು ಟೀಮ್ ಇಂಡಿಯಾ ಎಷ್ಟು ಪಂದ್ಯ ಗೆಲ್ಲಬೇಕು?

|

Updated on: Jul 23, 2024 | 7:21 AM

WTC 2025: ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್ ಪಂದ್ಯವು ಜೂನ್ ತಿಂಗಳಲ್ಲಿ ನಡೆಯಲಿದೆ. ಅಲ್ಲದೆ ಈ ಪಂದ್ಯಕ್ಕೆ ಇಂಗ್ಲೆಂಡ್​ನ ಲಾರ್ಡ್ಸ್​ ಮೈದಾನ ಆತಿಥ್ಯವಹಿಸುವ ಸಾಧ್ಯತೆಯಿದೆ. ಈ ಹಿಂದಿನ ಎರಡು ಆವೃತ್ತಿಗಳಲ್ಲಿ ಭಾರತ ತಂಡ ಫೈನಲ್​ಗೆ ಪ್ರವೇಶಿಸಿದರೂ, ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೀಗ ಮೂರನೇ ಬಾರಿಗೆ ಅಂತಿಮ ಸುತ್ತಿಗೆ ಪ್ರವೇಶಿಸುವ ಹಾದಿಯಲ್ಲಿದೆ.

WTC ಫೈನಲ್​ಗೇರಲು ಟೀಮ್ ಇಂಡಿಯಾ ಎಷ್ಟು ಪಂದ್ಯ ಗೆಲ್ಲಬೇಕು?
Team India
Follow us on

ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 2-0 ಅಂತರದಿಂದ ವಶಪಡಿಸಿಕೊಂಡಿದೆ. ಆಂಗ್ಲರ ಈ ಗೆಲುವಿನ ಬೆನ್ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಪಾಯಿಂಟ್ಸ್ ಟೇಬಲ್​ನಲ್ಲೂ ಮಹತ್ವದ ಬದಲಾವಣೆಯಾಗಿದೆ. ಇದಾಗ್ಯೂ ಭಾರತ ತಂಡ WTC ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಸರಣಿಯಲ್ಲಿ ಈವರೆಗೆ 9 ಪಂದ್ಯಗಳನ್ನಾಡಿರುವ ಭಾರತ ತಂಡವು 6 ಗೆಲುವು ಮತ್ತು 2 ಸೋಲು ಹಾಗೂ 1 ಡ್ರಾನೊಂದಿಗೆ 74 ಅಂಕಗಳನ್ನು ಕಲೆಹಾಕಿದೆ. ಈ ಮೂಲಕ 68.52 ಗೆಲುವಿನ ಶೇಕಡಾವಾರಿನೊಂದಿಗೆ ಅಗ್ರಸ್ಥಾನದಲ್ಲಿದೆ. ಇದಾಗ್ಯೂ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್ ಆಡುವುದು ಖಚಿತವಾಗಿಲ್ಲ.

ಏಕೆಂದರೆ ಭಾರತದೊಂದಿಗೆ ಆಸ್ಟ್ರೇಲಿಯಾ, ನ್ಯೂಝಿಲೆಂಡ್, ಶ್ರೀಲಂಕಾ ಮತ್ತು ಪಾಕಿಸ್ತಾನ್ ತಂಡಗಳು ಕೂಡ ಫೈನಲ್​ ರೇಸ್​ನಲ್ಲಿದೆ. ಹೀಗಾಗಿ ಮುಂಬರುವ ಸರಣಿಗಳು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಮುಂದಿನ ಎರಡು ಸರಣಿಗಳ ಮೂಲಕ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೇರುವುದನ್ನು ಖಚಿತಪಡಿಸಿಕೊಳ್ಳಬಹುದು.

ಫೈನಲ್​ಗೇರಲು ಭಾರತ ಎಷ್ಟು ಪಂದ್ಯ ಗೆಲ್ಲಬೇಕು?

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಭಾರತ ತಂಡವು ನೇರವಾಗಿ ಫೈನಲ್​ಗೇರಲು ಮುಂದಿನ ಮೂರು ಸರಣಿಗಳಲ್ಲಿ 2 ಸರಣಿಗಳಲ್ಲಿ ಭರ್ಜರಿ ಜಯ ಸಾಧಿಸಿದರೆ ಸಾಕು. ಇಲ್ಲಿ ಭಾರತ ತಂಡದ ಎದುರಾಳಿಗಳು ಬಾಂಗ್ಲಾದೇಶ್, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ.

  • ಭಾರತ ತಂಡವು ನ್ಯೂಝಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.
  • ಟೀಮ್ ಇಂಡಿಯಾ ಬಾಂಗ್ಲಾದೇಶ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ ಆಡಬೇಕಿದೆ.
  • ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ 5 ಪಂದ್ಯಗಳನ್ನಾಡಲಿದೆ.

 

  • ಇಲ್ಲಿ ಭಾರತದ ಮುಂದಿರುವ ದೊಡ್ಡ ಸವಾಲೆಂದರೆ ಆಸ್ಟ್ರೇಲಿಯಾ. ಹೀಗಾಗಿ ಈ ಸರಣಿಗೂ ಮುನ್ನ ನ್ಯೂಝಿಲೆಂಡ್ ಹಾಗೂ ಬಾಂಗ್ಲಾದೇಶ್ ವಿರುದ್ಧದ ಎಲ್ಲಾ ಪಂದ್ಯಗಳಲ್ಲಿ ಜಯ ಸಾಧಿಸಿದರೆ ಸಾಕು. ಈ ಮೂಲಕ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಹಾದಿಯನ್ನು ಸುಗಮಗೊಳಿಸಬಹುದು.
  • ಹಾಗೆಯೇ ಮುಂದಿನ 10 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ 6-7 ಪಂದ್ಯಗಳನ್ನು ಗೆದ್ದರೂ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಆಡುವುದು ಖಚಿತವಾಗಲಿದೆ.
  • ಭಾರತ ತಂಡವು ಬಾಂಗ್ಲಾದೇಶ್ ಮತ್ತು ನ್ಯೂಝಿಲೆಂಡ್ ವಿರುದ್ಧದ ಐದು ಹೋಮ್ ಟೆಸ್ಟ್​ಗಳಲ್ಲಿ ಗೆದ್ದರೆ, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಯಾವುದೇ ಒತ್ತಡ ಇರುವುದಿಲ್ಲ.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿದರೆ, ಯಾವ ತಂಡಕ್ಕೆ ಚಾನ್ಸ್?

ಒಂದು ವೇಳೆ ಬಾಂಗ್ಲಾದೇಶ್ ಮತ್ತು ನ್ಯೂಝಿಲೆಂಡ್ ಸರಣಿಗಳಲ್ಲಿ ಕೆಲ ಪಂದ್ಯಗಳನ್ನು ಕಳೆದುಕೊಂಡರೂ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೇರುವುದನ್ನು ಎದುರು ನೋಡಬೇಕಾಗುತ್ತದೆ. ಹೀಗಾಗಿಯೇ ಭಾರತದಲ್ಲಿ ನಡೆಯಲಿರುವ ಬಾಂಗ್ಲಾದೇಶ್ ಮತ್ತು ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗಳ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾ ಮುಂದಿದೆ.