
ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ (Australia vs South Africa) ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (World Test Championship Final) ಪಂದ್ಯ ರೋಚಕ ಘಟ್ಟ ತಲುಪಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ 207 ರನ್‌ಗಳಿಗೆ ಎರಡನೇ ಇನ್ನಿಂಗ್ಸ್ ಮುಗಿಸುವುದರೊಂದಿಗೆ ದಕ್ಷಿಣ ಆಫ್ರಿಕಾಗೆ 281 ರನ್‌ಗಳ ಗೆಲುವಿನ ಗುರಿ ನೀಡಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಆಸೀಸ್ ಪರ ವೇಗಿ ಮಿಚೆಲ್ ಸ್ಟಾರ್ಕ್ (Mitchell Starc) 58 ರನ್‌ಗಳ ಇನ್ನಿಂಗ್ಸ್ ಆಡಿದರೆ, ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ 43 ರನ್‌ಗಳ ಕಾಣಿಕೆ ನೀಡಿದರು. ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ ನಾಲ್ಕು ವಿಕೆಟ್ ಪಡೆದರೆ, ಲುಂಗಿ ಎನ್‌ಗಿಡಿ ಮೂರು ವಿಕೆಟ್ ಪಡೆದರು. ಮಾರ್ಕೊ ಯಾನ್ಸೆನ್, ವಿಯಾನ್ ಮುಲ್ಡರ್ ಮತ್ತು ಐಡೆನ್ ಮಾರ್ಕ್ರಾಮ್ ತಲಾ ಒಂದು ವಿಕೆಟ್ ಪಡೆದರು.
2ನೇ ದಿನದಾಟದಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 144 ರನ್ ಕಲೆಹಾಕಿದ್ದ ಆಸ್ಟ್ರೇಲಿಯಾ ಇಲ್ಲಿಂದ ತನ್ನ ಮೂರನೇ ದಿನದಾಟವನ್ನು ಆರಂಭಿಸಿತು. ಕ್ರೀಸ್ನಲ್ಲಿ ಬಾಲಂಗೋಚಿಗಳು ಇದ್ದ ಕಾರಣ, ಆಸೀಸ್ ಇನ್ನಿಂಗ್ಸ್ ಬೇಗನೇ ಮುಗಿಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದ್ಭುತ ಬ್ಯಾಟಿಂಗ್ ಮಾಡಿದ ಮಿಚೆಲ್ ಸ್ಟಾರ್ಕ್, ಎರಡನೇ ದಿನದಾಟಲ್ಲಿ ಅಲೆಕ್ಸ್ ಕ್ಯಾರಿ ಜೊತೆ ಎಂಟನೇ ವಿಕೆಟ್‌ಗೆ 61 ರನ್‌ಗಳ ಜೊತೆಯಾಟವನ್ನಾಡಿದರೆ, ಮೂರನೇ ದಿನದಾಟದಲ್ಲಿ ಲಿಯಾನ್ ಜೊತೆ ಒಂಬತ್ತನೇ ವಿಕೆಟ್‌ಗೆ 14 ರನ್ ಸೇರಿದರು. ಅಂತಿಮವಾಗಿ ಹೇಜಲ್‌ವುಡ್ ಜೊತೆ ಕೊನೆಯ ವಿಕೆಟ್‌ಗೆ 135 ಎಸೆತಗಳಲ್ಲಿ 59 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.
ಹೇಜಲ್‌ವುಡ್ 17 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಆಸ್ಟ್ರೇಲಿಯಾ ಇನ್ನಿಂಗ್ಸ್ ಅಂತ್ಯವಾಯಿತು. ಇತ್ತ ಮಿಚೆಲ್ ಸ್ಟಾರ್ಕ್ 136 ಎಸೆತಗಳಲ್ಲಿ ಐದು ಬೌಂಡರಿಗಳ ಸಹಾಯದಿಂದ 58 ರನ್ ಗಳಿಸಿ ಅಜೇಯರಾಗಿ ಉಳಿದರು. ಉಳಿದಂತೆ ಆಸೀಸ್ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಮಾರ್ನಸ್ ಲಬುಶೇನ್ 22, ಸ್ಟೀವ್ ಸ್ಮಿತ್ 13, ಉಸ್ಮಾನ್ ಖವಾಜಾ 6, ಟ್ರಾವಿಸ್ ಹೆಡ್ 9, ಬ್ಯೂ ವೆಬ್‌ಸ್ಟರ್ 9 ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ 6 ರನ್ ಬಾರಿಸಿದರೆ, ಕ್ಯಾಮರೂನ್ ಗ್ರೀನ್ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇದಲ್ಲದೆ, ಅಲೆಕ್ಸ್ ಕ್ಯಾರಿ 50 ಎಸೆತಗಳಲ್ಲಿ ಐದು ಬೌಂಡರಿಗಳ ಸಹಾಯದಿಂದ 43 ರನ್ ಗಳಿಸಿದರು.
ಅಹಮದಾಬಾದ್ ವಿಮಾನ ದುರಂತ: ಸಂತಾಪ ಸೂಚಿಸಿದ ಟೀಂ ಇಂಡಿಯಾ; ಡಬ್ಲ್ಯುಟಿಸಿ ಫೈನಲ್ನಲ್ಲಿ 1 ನಿಮಿಷ ಮೌನಾಚರಣೆ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 212 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ದಕ್ಷಿಣ ಆಫ್ರಿಕಾದ ಮೊದಲ ಇನ್ನಿಂಗ್ಸ್ 138 ರನ್‌ಗಳಿಗೆ ಕುಸಿಯಿತು. ಮೊದಲ ಇನ್ನಿಂಗ್ಸ್‌ನ ಆಧಾರದ ಮೇಲೆ, ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 69 ರನ್‌ಗಳ ಮುನ್ನಡೆಯನ್ನು ಹೊಂದಿತ್ತು. ಎರಡನೇ ಇನ್ನಿಂಗ್ಸ್ ನಂತರ, ಆಸ್ಟ್ರೇಲಿಯಾದ ಒಟ್ಟು ಮುನ್ನಡೆ 281 ರನ್‌ಗಳಾಗಿದ್ದು, ದಕ್ಷಿಣ ಆಫ್ರಿಕಾ ಪ್ರಶಸ್ತಿ ಗೆಲ್ಲಲು 282 ರನ್‌ಗಳ ಗುರಿಯನ್ನು ಹೊಂದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:03 pm, Fri, 13 June 25