ICC World Test Championship 2023: ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ-ಸೌತ್ ಆಫ್ರಿಕಾ (Australia vs South Africa) ನಡುವಣ 3ನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರುವ ಟೀಮ್ ಇಂಡಿಯಾ (Team India) ಹಾದಿ ಸುಗಮವಾಗಿದೆ. ಏಕೆಂದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಹೊಸ ಪಾಯಿಂಟ್ ಟೇಬಲ್ನಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದ್ದರೆ, ಟೀಮ್ ಇಂಡಿಯಾ 2ನೇ ಸ್ಥಾನವನ್ನು ಕಾಯ್ದುಕೊಂಡಿದೆ. ಅತ್ತ ಶ್ರೀಲಂಕಾ 3ನೇ ಸ್ಥಾನದಲ್ಲಿದರೆ, ಸೌತ್ ಆಫ್ರಿಕಾ ತಂಡವು ನಾಲ್ಕನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಇಲ್ಲಿ ಆಸ್ಟ್ರೇಲಿಯಾ ತಂಡವು ಶೇಕಡಾ 75.56 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇದುವರೆಗೆ ಆಡಿರುವ 15 ಪಂದ್ಯಗಳಲ್ಲಿ 10ರಲ್ಲಿ ಜಯ ಸಾಧಿಸಿರುವ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡುವುದು ಖಚಿತ. ಇನ್ನು 2ನೇ ಸ್ಥಾನದಲ್ಲಿರುವ ಟೀಮ್ ಇಂಡಿಯಾ 14 ಟೆಸ್ಟ್ಗಳಲ್ಲಿ 8 ಜಯ ಸಾಧಿಸಿ, 4 ರಲ್ಲಿ ಸೋಲು ಕಂಡಿದೆ. ಇದಾಗ್ಯೂ 58.93 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಅಲಂಕರಿಸಿದೆ.
ಆದರೆ ಮತ್ತೊಂದೆಡೆ ಶ್ರೀಲಂಕಾ ತಂಡವು ಮೂರನೇ ಸ್ಥಾನದಲ್ಲಿದ್ದು, ಶೇ. 53.33 ರಷ್ಟು ಅಂಕಗಳನ್ನು ಹೊಂದಿದೆ. ಹಾಗೆಯೇ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟೆಸ್ಟ್ ಡ್ರಾ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡವು ಶೇ. 48.72 ಅಂಕಗಳನ್ನು ಮಾತ್ರ ಪಡೆದುಕೊಂಡಿದೆ. ಇದರಿಂದ ಫೈನಲ್ಗೇರಲು ಭಾರತ-ಸೌತ್ ಆಫ್ರಿಕಾ ನಡುವಣ ನೇರ ಪೈಪೋಟಿ ತಪ್ಪಿದಂತಾಗಿದೆ. ಇನ್ನುಳಿದಿರುವುದು ಶ್ರೀಲಂಕಾ ತಂಡ ಮಾತ್ರ.
ಅಂದರೆ ಭಾರತ ತಂಡವು ಮುಂಬರುವ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಥವಾ 3-1 ಅಥವಾ 2-0 ಅಂತರದಿಂದ ಗೆದ್ದುಕೊಂಡರೆ ನೇರವಾಗಿ ಫೈನಲ್ ಪ್ರವೇಶಿಸಬಹುದು. ಏಕೆಂದರೆ ಟೀಮ್ ಇಂಡಿಯಾ ಕಷ್ಟದಿಂದ 2-0 ಅಂತರದಿಂದ ಗೆದ್ದರೂ ಶೇ.60.65 ಅಂಕ ಪಡೆಯಲಿದೆ. ಅದೇ ವೇಳೆಗೆ ಆಸ್ಟ್ರೇಲಿಯಾ ತಂಡ ಪಾಯಿಂಟ್ ಶೇ.63.16 ಅಂಕಗಳಿಗೆ ಕುಸಿಯಲಿದೆ. ಇದಾಗ್ಯೂ ಉಭಯ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಬಹುದು.
ಒಂದು ವೇಳೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತರೆ ಮಾತ್ರ ಶ್ರೀಲಂಕಾಗೆ ಅವಕಾಶ ಇರಲಿದೆ. ಇಲ್ಲಿ ಸೋಲುವ ಲೆಕ್ಕಚಾರ ಕೂಡ ಗಣನೆಗೆ ಬರಲಿದೆ. ಅಂದರೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 3-1 ಅಥವಾ, 2-0, 1-0 ಸರಣಿ ಅಂತರದಿಂದ ಸೋತರೆ ಶ್ರೀಲಂಕಾ ತಂಡಕ್ಕೆ ಫೈನಲ್ಗೇರುವ ಅವಕಾಶ ಹೆಚ್ಚಾಗಲಿದೆ.
ಅದರಂತೆ ಶ್ರೀಲಂಕಾ ತಂಡವು ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡರೆ ನೇರವಾಗಿ ಫೈನಲ್ಗೆ ಎಂಟ್ರಿ ಕೊಡಬಹುದು. ಹೀಗಾಗಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 4-0 ಅಥವಾ 3-1 ಅಥವಾ 3-0, ಅಥವಾ 2-0 ಅಂತರದಿಂದ ಗೆಲ್ಲಲೇಬೇಕು. ಒಂದು ವೇಳೆ 2-2 ಅಂತರದಿಂದ ಸರಣಿ ಡ್ರಾ ಮಾಡಿಕೊಂಡರೂ ಶ್ರೀಲಂಕಾ ತಂಡದ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ.
ಏಕೆಂದರೆ ಆಸ್ಟ್ರೇಲಿಯಾ ವಿರುದ್ಧ ಭಾರತ 4-0 ಅಂತರದಲ್ಲಿ ಗೆದ್ದರೆ 68.06% ಅಂಕ ಪಡೆಯಲಿದೆ. ಒಂದು ವೇಳೆ 3-1 ರಲ್ಲಿ ಗೆದ್ದರೆ 62.5%, ಹಾಗೆಯೇ 2-0 ಅಂತರದಿಂದ ಗೆದ್ದರೆ 60.65% ಅಂಕಗಳಿಸಲಿದೆ. ಒಂದು ವೇಳೆ 2-2 ಅಂತರದಿಂದ ಸರಣಿಯನ್ನು ಡ್ರಾ ಮಾಡಿಕೊಂಡರೆ 56.94% ಅಂಕ ಮಾತ್ರ ಹೊಂದಿರಲಿದೆ. ಅತ್ತ ಶ್ರೀಲಂಕಾ ತಂಡವು ನ್ಯೂಜಿಲೆಂಡ್ ವಿರುದ್ದ 2-0 ಅಂತರದಿಂದ ಗೆದ್ದರೆ ಶೇ.60 ರಷ್ಟು ಅಂಕವನ್ನು ಪಡೆಯಬಹುದು. ಇದರಿಂದ ಟೀಮ್ ಇಂಡಿಯಾ ಹೊರಬೀಳಲಿದೆ.
ಇದನ್ನೂ ಓದಿ: ‘New Universe Boss’: ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ಗೆ ಸೂರ್ಯನ ಸವಾಲು..!
ಮತ್ತೊಂದೆಡೆ ಸೌತ್ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಸರಣಿಯ ಎಲ್ಲಾ ಪಂದ್ಯಗಳನ್ನು ಗೆದ್ದರೂ, ಒಟ್ಟು ಶೇ. 55.55 ರಷ್ಟು ಅಂಕಗಳನ್ನು ಹೊಂದಿರಲಿದೆ. ಇದರಿಂದ ಟೀಮ್ ಇಂಡಿಯಾ ಪಾಯಿಂಟ್ಸ್ನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.
ಅಂದರೆ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರಲು ಭಾರತ ಮತ್ತು ಶ್ರೀಲಂಕಾ ನಡುವೆ ನೇರ ಹಣಾಹಣಿ ಇದೆ. ಇಲ್ಲಿ ಟೀಮ್ ಇಂಡಿಯಾಗೆ ಇರುವ ಪ್ಲಸ್ ಪಾಯಿಂಟ್ ಅಂದರೆ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲೇ ಸರಣಿ ಆಡಲಿದೆ. ಆದರೆ ಶ್ರೀಲಂಕಾ ತಂಡವು ನ್ಯೂಜಿಲೆಂಡ್ನಲ್ಲಿ ಸರಣಿ ಆಡಬೇಕಿದೆ. ಇತ್ತ ತವರಿನಲ್ಲಿ ಪಂದ್ಯವಾಡುತ್ತಿರುವ ಭಾರತ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚಿದೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಮತ್ತೊಮ್ಮೆ ಭಾರತ ತಂಡವನ್ನು ಎದುರು ನೋಡಬಹುದು.
How the #WTC23 standings look after the #AUSvSA Test series ?
State of play ? https://t.co/HMBv3B49lr pic.twitter.com/RMIFTD6AO4
— ICC (@ICC) January 8, 2023
ಏನಿದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್?
2021 ರಿಂದ 2023 ರವರೆಗೆ ನಡೆಯಲಿರುವ ಪ್ರಮುಖ ದೇಶಗಳ ಪಂದ್ಯಗಳ ಫಲಿತಾಂಶದ ಮೇಲೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಡೆಯುತ್ತಿದೆ. ಇಲ್ಲಿ ಒಟ್ಟು 9 ಟೆಸ್ಟ್ ಆಡುವ ರಾಷ್ಟ್ರಗಳು ಕಾಣಿಸಿಕೊಳ್ಳುತ್ತಿದ್ದು, ಅದರಂತೆ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಫೈನಲ್ ಆಡಲಿದೆ. ಆದರೆ ಇಲ್ಲಿ ಗೆಲುವಿನ ಶೇಕಡಾವಾರು (ಪರ್ಸಂಟೇಜ್) ಮೇಲೆ ಪಾಯಿಂಟ್ಸ್ ಟೇಬಲ್ನಲ್ಲಿ ಸ್ಥಾನ ನಿಗದಿಯಾಗಲಿದೆ. ಅದರಂತೆ ಗೆಲುವುಗಳ ಸಂಖ್ಯೆ, ಡ್ರಾ ಪಂದ್ಯಗಳ ಸಂಖ್ಯೆ ಕೂಡ ಇಲ್ಲಿ ಗಣನೆಗೆ ಬರಲಿದೆ. ಇದರಿಂದ ಹೆಚ್ಚು ಪಂದ್ಯ ಗೆದ್ದ ತಂಡ ಅಧಿಕ ಪಾಯಿಂಟ್ ಪಡೆದರೂ, ಗೆಲುವು ಹಾಗೂ ಡ್ರಾ ಸಾಧಿಸಿದ ತಂಡ ಪಾಯಿಂಟ್ ಟೇಬಲ್ನಲ್ಲಿ ಮೇಲೇರಬಹುದು.
ಅಂದರೆ ಇಲ್ಲಿ ಪ್ರತಿ ಪಂದ್ಯಕ್ಕೆ 12 ಅಂಕ ನಿಗದಿಪಡಿಸಲಾಗಿದೆ. ಹಾಗೆಯೇ ಪಂದ್ಯ ಟೈ ಆದರೆ 6 ಅಂಕ ಹಾಗೂ ಪಂದ್ಯ ಡ್ರಾ ಆದರೆ 4 ಅಂಕ ನೀಡಲಾಗುತ್ತದೆ. ಇದರಿಂದ ಸರಣಿಗಳ ಪಂದ್ಯಾವಳಿಯ ಲೆಕ್ಕಚಾರ ಸಮಗೊಳ್ಳಲಿದೆ. ಇಲ್ಲಿ ಗೆದ್ದ ಪಂದ್ಯಗಳಿಗೆ ಮತ್ತು ಡ್ರಾ ಪಂದ್ಯಗಳಿಗೆ ಅನುಸಾರವಾಗಿ ಶೇಕಡಾವಾರಿನಂತೆ ತಂಡಗಳು ಪಾಯಿಂಟ್ಸ್ ಟೇಬಲ್ನಲ್ಲಿ ರ್‍ಯಾಂಕ್ ಪಡೆದುಕೊಳ್ಳುತ್ತವೆ. ಇದರಿಂದ ಪಂದ್ಯಗಳಿಗೆ ಅಥವಾ ಸರಣಿಗೆ ಅನುಸಾರವಾಗಿ ಶ್ರೇಯಾಂಕ ಪಟ್ಟಿ ಬದಲಾಗಬಹುದು. ಅಲ್ಲದೆ ಪಾಯಿಂಟ್ ಟೇಬಲ್ನಲ್ಲೂ ಪಂದ್ಯಕ್ಕನುಸಾರವಾಗಿ ಪೈಪೋಟಿ ಕಂಡು ಬರಲಿದೆ. ಅಂತಿಮವಾಗಿ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಪಡೆಯುವ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವಾಡಲಿದೆ.
ಎಷ್ಟು ಪಂದ್ಯ ನಡೆಯಲಿದೆ?
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ 2021 ರಿಂದ 2023 ರ ಒಳಗೆ ಒಂದು ತಂಡವು ಒಟ್ಟು 6 ಟೆಸ್ಟ್ ಸರಣಿಗಳನ್ನು ಆಡಲಿದೆ. ಇದರಲ್ಲಿ ಮೂರು ಟೆಸ್ಟ್ ಸರಣಿ ತವರಿನಲ್ಲಿ ನಡೆದರೆ ಮತ್ತು ಮೂರು ವಿದೇಶಿ ಸರಣಿಗಳನ್ನು ಆಡಲಿದೆ. ಈಗಾಗಲೇ ಭಾರತ ತಂಡವು ನ್ಯೂಜಿಲೆಂಡ್, ಶ್ರೀಲಂಕಾ ವಿರುದ್ದದ ಸರಣಿ ಮುಗಿಸಿದೆ. ಹಾಗೆಯೇ ಬಾಂಗ್ಲದೇಶ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ವಿರುದ್ಧ ಸಹ ಆಡಿದೆ. ಇನ್ನುಳಿದಿರುವುದು ಆಸ್ಟ್ರೇಲಿಯಾ ವಿರುದ್ಧದ ಸರಣಿ ಮಾತ್ರ. ಹೀಗಾಗಿ ಪಾಯಿಂಟ್ ಟೇಬಲ್ನಲ್ಲಿ ನೇರವಾಗಿ ಅಗ್ರಸ್ಥಾನಕ್ಕೇರಲು ಈ ಸರಣಿಯನ್ನು ಟೀಮ್ ಇಂಡಿಯಾ ಗೆಲ್ಲಲೇಬೇಕು.