ಭಾರತ ತಂಡವು ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಮ್ಯಾಚ್ನಲ್ಲೇ ಮುಗ್ಗರಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ಗಳಿಂದ ಸೋಲೊಪ್ಪಿಕೊಂಡಿದೆ. ಈ ಸೋಲಿನೊಂದಿಗೆ ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಲೆಕ್ಕಾಚಾರ ಕೂಡ ಉಲ್ಪಾ ಪಲ್ಟಾ ಆಗಿದೆ.
ಅಂದರೆ ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾಗೆ ನೇರವಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರುವ ಅವಕಾಶವಿತ್ತು. ಆದರೀಗ ಮೊದಲ ಪಂದ್ಯದಲ್ಲಿ ಸೋಲುವ ಮೂಲಕ ಭಾರತ ತಂಡವು WTC ಅಂಕ ಪಟ್ಟಿಯಲ್ಲಿ 6 ಪರ್ಸಂಟೇಜ್ಗಳನ್ನು ಕಳೆದುಕೊಂಡಿದೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಲು ಟೀಮ್ ಇಂಡಿಯಾ ಮತ್ತಷ್ಟು ಮ್ಯಾಚ್ಗಳನ್ನು ಗೆಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.
ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿ ಶೇ. 74.24 ರಷ್ಟು ಗೆಲುವಿನ ಶೇಕಡಾವಾರು ಹೊಂದಿತ್ತು. ಆದರೀಗ ಮೊದಲ ಪಂದ್ಯದ ಸೋಲಿನ ಬಳಿಕ ಟೀಮ್ ಇಂಡಿಯಾದ ಶೇಕಡಾವಾರು 68.06 ಗೆ ಕುಸಿದಿದೆ.
ಹೀಗಾಗಿ ಭಾರತ ತಂಡವು ನೇರವಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೇರಲು ಮುಂದಿನ 7 ಪಂದ್ಯಗಳಲ್ಲಿ 5 ರಲ್ಲಿ ಜಯ ಸಾಧಿಸಬೇಕು. ಈ ಮೂಲಕ ಯಾವುದೇ ತಂಡಗಳ ಫಲಿತಾಂಶವನ್ನು ಅವಲಂಭಿಸದೇ ಫೈನಲ್ಗೆ ಅರ್ಹತೆ ಪಡೆಯಬಹುದು.
ಭಾರತ ತಂಡವು ನ್ಯೂಝಿಲೆಂಡ್ ವಿರುದ್ಧ ಇನ್ನೆರಡು ಪಂದ್ಯಗಳನ್ನಾಡಲಿದೆ. ಈ ಮ್ಯಾಚ್ನಲ್ಲಿ ಟೀಮ್ ಇಂಡಿಯಾ ಗೆಲ್ಲಲೇಬೇಕು. ಹಾಗೆಯೇ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಐದು ಮ್ಯಾಚ್ಗಳಲ್ಲಿ ಮೂರು ಪಂದ್ಯಗಳನ್ನು ಜಯ ಸಾಧಿಸಬೇಕು. ಈ ಮೂಲಕ ಟೀಮ್ ಇಂಡಿಯಾ ನೇರವಾಗಿ ಫೈನಲ್ಗೆ ಎಂಟ್ರಿ ಕೊಡಬಹುದು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಪ್ರಸ್ತುತ ಅಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ಅಗ್ರಸ್ಥಾನದಲ್ಲಿದೆ. ಹೀಗಾಗಿ ಟೀಮ್ ಇಂಡಿಯಾ ಮುಂದಿನ 7 ಪಂದ್ಯಗಳಲ್ಲಿ 5 ರಲ್ಲಿ ಜಯ ಸಾಧಿಸಲು ಸಾಧ್ಯವಾಗದಿದ್ದರೂ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ರೇಸ್ನಿಂದ ಹೊರಬೀಳುವುದಿಲ್ಲ. ಬದಲಾಗಿ ಭಾರತ ತಂಡದ ಪಾಲಿಗೆ ಉಳಿದ ತಂಡಗಳ ಫಲಿತಾಂಶ ನಿರ್ಣಾಯಕವಾಗಲಿದೆ.
ಇಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ಹಾಗೂ ನ್ಯೂಝಿಲೆಂಡ್ ತಂಡಗಳ ಫಲಿತಾಂಶಗಳನ್ನು ಎದುರು ನೋಡಬೇಕಾಗುತ್ತದೆ. ಏಕೆಂದರೆ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ ಸರಣಿ ಗೆದ್ದರೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವುದು ಖಚಿತ.
ಆಸೀಸ್ ಪಡೆಯು ಮುಂದಿನ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನಾಡಲಿದ್ದು, ಇದಾದ ಬಳಿಕ ಭಾರತದ ವಿರುದ್ಧ 5 ಪಂದ್ಯಗಳನ್ನು ಆಡಲಿದೆ. ಈ ಏಳು ಮ್ಯಾಚ್ಗಳಲ್ಲಿ ಆಸ್ಟ್ರೇಲಿಯಾ 4 ರಲ್ಲಿ ಜಯ ಸಾಧಿಸಿದರೆ ನೇರವಾಗಿ ಫೈನಲ್ಗೆ ಪ್ರವೇಶಿಸಬಹುದು.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಅಂಕ ಪಟ್ಟಿಯಲ್ಲಿ ಶ್ರೀಲಂಕಾ ಮೂರನೇ ಸ್ಥಾನದಲ್ಲಿರುವುದು. ಅತ್ತ ಲಂಕಾ ತಂಡವು ಮುಂದಿನ ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧದ ಆಡಲಿದೆ. ಈ ಸರಣಿಯ 2 ಪಂದ್ಯಗಳಲ್ಲೂ ಶ್ರೀಲಂಕಾ ಸೋತರೆ, ಭಾರತ ತಂಡಕ್ಕೆ ಅನುಕೂಲವಾಗಲಿದೆ.
ಏಕೆಂದರೆ ಲಂಕಾ ತಂಡವು ಫೈನಲ್ಗೆ ಅರ್ಹತೆಗಿಟ್ಟಿಸಿಕೊಳ್ಳಬೇಕಿದ್ದರೆ ಮುಂದಿನ ನಾಲ್ಕು ಪಂದ್ಯಗಳಲ್ಲಿ 3 ಜಯ ಸಾಧಿಸಲೇಬೇಕು. ಒಂದು ವೇಳೆ ಎರಡು ಪಂದ್ಯಗಳಲ್ಲಿ ಸೋತರೆ, ಟೀಮ್ ಇಂಡಿಯಾದ ಫೈನಲ್ ಹಾದಿ ಸುಗಮವಾಗಲಿದೆ.
ಆದರೆ ಅದಕ್ಕೂ ಮುನ್ನ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ನ್ಯೂಝಿಲೆಂಡ್ ತಂಡವನ್ನು ಟೀಮ್ ಇಂಡಿಯಾ ಮುಂದಿನ ಎರಡೂ ಪಂದ್ಯಗಳಲ್ಲೂ ಬಗ್ಗು ಬಡಿಯಬೇಕು. ಈ ಮೂಲಕ ಭಾರತ ತಂಡವು ಅಂಕ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಕಾಯ್ದುಕೊಳ್ಳುವ ಮೂಲಕ ಫೈನಲ್ಗೆ ಅರ್ಹತೆ ಪಡೆಯಬಹುದು.
ಇದನ್ನೂ ಓದಿ: RCB ಉಳಿಸಿಕೊಂಡ ಆರು ಆಟಗಾರರು ಯಾರೆಲ್ಲಾ ಗೊತ್ತಾ?
ಆದರೆ ಇವೆಲ್ಲವೂ ಉಳಿದ ತಂಡಗಳ ಫಲಿತಾಂಶವನ್ನು ಅಲವಂಭಿಸಿ ಎಂಬುದು ಉಲ್ಲೇಖಾರ್ಹ. ಹೀಗಾಗಿ ಭಾರತದ ಲೆಕ್ಕಾಚಾರಗಳು ತಲೆಕೆಳಗಾಗುವ ಸಾಧ್ಯತೆ ಕೂಡ ಇದೆ. ಹೀಗಾಗಿ ಟೀಮ್ ಇಂಡಿಯಾ ಮುಂದಿನ 7 ಪಂದ್ಯಗಳಲ್ಲಿ 5 ಜಯ ಸಾಧಿಸಿ ನೇರವಾಗಿ ಫೈನಲ್ಗೇರಬೇಕಾದ ಅನಿವಾರ್ಯತೆ ಎದುರಾಗಿದೆ.