Yash Dhull: ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ ಯಶ್ ಧುಲ್

| Updated By: ಝಾಹಿರ್ ಯೂಸುಫ್

Updated on: Feb 17, 2022 | 3:24 PM

Yash Dhull: ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಧುಲ್ ಸೆಮಿಫೈನಲ್​ ಗೆಲುವಿನ ರೂವಾರಿಯಾಗಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಈ ಬಾರಿ ದೆಹಲಿ ರಣಜಿ ತಂಡದಲ್ಲಿ 19 ರ ಹರೆಯದ ಯುವ ಆಟಗಾರನಿಗೆ ಚಾನ್ಸ್ ನೀಡಲಾಗಿತ್ತು.

Yash Dhull: ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ ಯಶ್ ಧುಲ್
Yash Dhull
Follow us on

ಟೀಮ್ ಇಂಡಿಯಾ ಅಂಡರ್-19 ತಂಡದ ನಾಯಕ ಯಶ್ ಧುಲ್ ರಣಜಿ ಟ್ರೋಫಿ ಕ್ರಿಕೆಟ್​ನಲ್ಲಿ ಶತಕದೊಂದಿಗೆ ಪಾದಾರ್ಪಣೆ ಮಾಡಿದ್ದಾರೆ. ತಮಿಳುನಾಡುವ ವಿರುದ್ದದ ಪಂದ್ಯದಲ್ಲಿ ದೆಹಲಿ ಪರ ಆರಂಭಿಕನಾಗಿ ಹೊಸ ಇನಿಂಗ್ಸ್​ ಆರಂಭಿಸಿರುವ ಯಶ್ ಮೊದಲ ಪಂದ್ಯದಲ್ಲೇ ಸೆಂಚುರಿ ಬಾರಿಸಿ ಎಲ್ಲರ ಗಮನ ಸೆಳೆದರು. ಆರಂಭದಿಂದಲೂ ಬಿರುಸಿನ ಇನಿಂಗ್ಸ್​ ಆಡಿದ ಯಶ್ ಧುಲ್ ಅರ್ಧಶತಕ ಪೂರೈಸಲು 57 ಎಸೆತಗಳನ್ನು ತೆಗೆದುಕೊಂಡರು. ಇದಾದ ಬಳಿಕ ದೊಡ್ಡ ಇನಿಂಗ್ಸ್​ನತ್ತ ಮುಖ ಮಾಡಿದ ಯುವ 133 ಎಸೆತಗಳಲ್ಲಿ ಚೊಚ್ಚಲ ರಣಜಿ ಶತಕ ಪೂರೈಸಿದರು. ಅದು ಕೂಡ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವ ಮೂಲಕ ಎಂಬುದು ವಿಶೇಷ.

ಏಕೆಂದರೆ ದೆಹಲಿ ತಂಡವು ಕೇವಲ 7 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಈ ಹಂತದಲ್ಲಿ ಎಚ್ಚರಿಕೆಯ ಆಟವಾಡಿದ 19 ವರ್ಷದ ಯಶ್ ಧುಲ್ ತಂಡವನ್ನು ಮುನ್ನಡೆ ಸಾಧಿಸಿದರು. ಮೂರನೇ ವಿಕೆಟ್‌ಗೆ ನಿತೀಶ್ ರಾಣಾ ಅವರೊಂದಿಗೆ ಅದ್ಭುತ ಅರ್ಧಶತಕದ ಜೊತೆಯಾಟವಾಡಿದರು. 25 ರನ್​ಗಳಿಸಿ ರಾಣಾ ಔಟ್ ಆಗಿ ಹೊರನಡೆದರೂ, ಮತ್ತೊಂದೆಡೆ ಯಶ್ ಧುಲ್ ತಮಿಳುನಾಡು ಬೌಲರುಗಳನ್ನು ನಿರಾಯಾಸವಾಗಿ ಎದುರಿಸಿ ಶತಕ ಸಿಡಿಸಿದರು.

ಇನ್ನು 4ನೇ ವಿಕೆಟ್​ಗೆ ಜಾಂಟಿ ಸಿಧು ಜೊತೆ ಶತಕದ ಜೊತೆಯಾಟವಾಡುವ ಮೂಲಕ 67 ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ದೆಹಲಿ ತಂಡವನ್ನು ಯಶ್ ಧುಲ್ 200 ರ ಗಡಿದಾಟಿಸಿದರು. ಈ ಮೂಲಕ ದೇಶೀಯ ಅಂಗಳದಲ್ಲಿ ಚೊಚ್ಚಲ ಪಂದ್ಯದಲ್ಲೇ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ತೆರೆದಿಟ್ಟರು. ಇತ್ತೀಚೆಗಷ್ಟೇ ಅಂಡರ್ 19 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾವನ್ನು ಯಶ್ ಧುಲ್ ಮುನ್ನಡೆಸಿದ್ದರು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಧುಲ್ ಸೆಮಿಫೈನಲ್​ ಗೆಲುವಿನ ರೂವಾರಿಯಾಗಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಈ ಬಾರಿ ದೆಹಲಿ ರಣಜಿ ತಂಡದಲ್ಲಿ 19 ರ ಹರೆಯದ ಯುವ ಆಟಗಾರನಿಗೆ ಚಾನ್ಸ್ ನೀಡಲಾಗಿತ್ತು.

ಅಲ್ಲದೆ ದೆಹಲಿ ನಾಯಕ ಪ್ರದೀಪ್ ಸಾಂಗ್ವಾನ್ ಯುವ ಆಟಗಾರನ ಮೇಲೆ ನಂಬಿಕೆಯಿರಿಸಿ ಆರಂಭಿಕನಾಗಿ ಕಣಕ್ಕಿಳಿಸಿದ್ದರು. ಇದೀಗ ನಾಯಕನ ನಿರೀಕ್ಷೆಯನ್ನು ಹುಸಿಗೊಳಿಸದಂತೆ ಯಶ್ ಧುಲ್ ಚೊಚ್ಚಲ ಪಂದ್ಯದಲ್ಲೇ 113 ರನ್​ ಬಾರಿಸುವ ಮೂಲಕ ಮಿಂಚಿದ್ದಾರೆ. ಅಂದಹಾಗೆ ಐಪಿಎಲ್ ಸೀಸನ್ 15 ಗಾಗಿ ಯಶ್ ಧುಲ್ ಅವರನ್ನು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 50 ಲಕ್ಷ ರೂ. ನೀಡಿ ಖರೀದಿಸಿದೆ.

ಇದನ್ನೂ ಓದಿ: IPL 2022 ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ತಾನ ಸೂಪರ್ ಲೀಗ್ ತೊರೆದ ಸ್ಟಾರ್ ಆಟಗಾರ

ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?

ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..! 

(Yash Dhull scores century on first-class debut for Delhi)