India vs West Indies 1st Test: ಡೊಮಿನಿಕಾದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಆಕರ್ಷಕ ಅರ್ಧಶತಕ ಪೂರೈಸಿದ್ದಾರೆ. ಈ ಮೂಲಕ ಪಾದಾರ್ಪಣೆ ಪಂದ್ಯದಲ್ಲೇ ಹಾಫ್ ಸೆಂಚುರಿಸಿದ ಸಾಧಕರ ಪಟ್ಟಿಗೆ ಜೈಸ್ವಾಲ್ ಕೂಡ ಸೇರ್ಪಡೆಯಾದರು. ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ಕ್ರೈಗ್ ಬ್ರಾಥ್‌ವೈಟ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ವಿರುದ್ಧ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಸ್ಪಿನ್ ಮೋಡಿ ಮಾಡಿದ್ದರು. ತೇಜ್ನರೈನ್ ಚಂದ್ರಪಾಲ್ ವಿಕೆಟ್ ಕಬಳಿಸುವ ಶುಭಾರಂಭ ಮಾಡಿದ ಅಶ್ವಿನ್ ಒಟ್ಟು 5 ವಿಕೆಟ್ ಉರುಳಿಸಿದರು. ಮತ್ತೊಂದೆಡೆ ರವೀಂದ್ರ ಜಡೇಜಾ 2 ವಿಕೆಟ್ ಪಡೆದರು. ಪರಿಣಾಮ ಕೇವಲ 150 ರನ್ಗಳಿಗೆ ವೆಸ್ಟ್ ಇಂಡೀಸ್ ಆಲೌಟ್ ಆಯಿತು.
ಇದಾದ ಬಳಿಕ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಹಾಗೂ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆರಂಭದಲ್ಲಿ ತುಸು ಎಚ್ಚರದಿಂದ ಬ್ಯಾಟ್ ಬೀಸಿದ ಜೈಸ್ವಾಲ್ ಆ ಬಳಿಕ ಆತ್ಮ ವಿಶ್ವಾಸದಿಂದಲೇ ವಿಂಡೀಸ್ ಬೌಲರ್ಗಳನ್ನು ಎದುರಿಸಿದರು. ಅಲ್ಲದೆ ರೋಹಿತ್ ಶರ್ಮಾ ಜೊತೆಗೂಡಿ ಶತಕದ ಜೊತೆಯಾಟವಾಡಿದರು.
ಈ ಹಂತದಲ್ಲಿ ಅಲ್ಝಾರಿ ಜೋಸೆಫ್ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಯಶಸ್ವಿ ಜೈಸ್ವಾಲ್ 104 ಎಸೆತಗಳಲ್ಲಿ ತಮ್ಮ
ಚೊಚ್ಚಲ ಅರ್ಧಶತಕ ಪೂರೈಸಿದರು. ಈ ಮೂಲಕ ಪಾದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ ಭಾರತದ 13ನೇ ಆರಂಭಿಕ ಆಟಗಾರ ಎನಿಸಿಕೊಂಡರು. ಮತ್ತೊಂದೆಡೆ ಅನುಭವವನ್ನು ಧಾರೆಯೆರದ ರೋಹಿತ್ ಶರ್ಮಾ 106 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು.
40 ಓವರ್ ಮುಕ್ತಾಯದ ವೇಳೆ ಟೀಮ್ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ 120 ರನ್ ಕಲೆಹಾಕಿದ್ದು, ಕ್ರೀಸ್ನಲ್ಲಿ ಯಶಸ್ವಿ ಜೈಸ್ವಾಲ್ (55) ಹಾಗೂ ರೋಹಿತ್ ಶರ್ಮಾ (51) ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಟೀಮ್ ಇಂಡಿಯಾ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ) , ಯಶಸ್ವಿ ಜೈಸ್ವಾಲ್ , ಶುಭ್ಮನ್ ಗಿಲ್ , ವಿರಾಟ್ ಕೊಹ್ಲಿ , ಅಜಿಂಕ್ಯ ರಹಾನೆ , ರವೀಂದ್ರ ಜಡೇಜಾ , ಇಶಾನ್ ಕಿಶನ್ (ವಿಕೆಟ್ ಕೀಪರ್) , ರವಿಚಂದ್ರನ್ ಅಶ್ವಿನ್ , ಶಾರ್ದೂಲ್ ಠಾಕೂರ್ , ಜಯದೇವ್ ಉನಾದ್ಕತ್ , ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: India T20 Squad: ಟೀಮ್ ಇಂಡಿಯಾದಲ್ಲಿ ಇಬ್ಬರೇ ಆಲ್ರೌಂಡರ್ಗಳು..!
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಕ್ರೈಗ್ ಬ್ರಾಥ್‌ವೈಟ್ (ನಾಯಕ) , ತೇಜ್ನರೈನ್ ಚಂದ್ರಪಾಲ್ , ರೇಮನ್ ರೀಫರ್ , ಜೆರ್ಮೈನ್ ಬ್ಲಾಕ್‌ವುಡ್ , ಅಲಿಕ್ ಅಥಾನಾಝ್ , ಜೋಶುವಾ ಡಾ ಸಿಲ್ವಾ (ವಿಕೆಟ್) , ಜೇಸನ್ ಹೋಲ್ಡರ್ , ರಹಕೀಮ್ ಕಾರ್ನ್‌ವಾಲ್ , ಅಲ್ಝಾರಿ ಜೋಸೆಫ್ , ಕೆಮರ್ ರೋಚ್ , ಜೋಮೆಲ್ ವಾರಿಕನ್.