Yashasvi Jaiswal: ದಾಖಲೆಯೊಂದಿಗೆ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟ ಯಶಸ್ವಿ ಜೈಸ್ವಾಲ್
India vs West Indies 1st Test: ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 15 ಪಂದ್ಯಗಳಲ್ಲಿ 26 ಇನಿಂಗ್ಸ್ ಆಡಿರುವ ಯಶಸ್ವಿ ಜೈಸ್ವಾಲ್ ಒಟ್ಟು 1845 ರನ್ ಕಲೆಹಾಕಿದ್ದಾರೆ. ಈ ವೇಳೆ 9 ಶತಕ ಹಾಗೂ 2 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ.
India vs West Indies 1st: ಡೊಮಿನಿಕಾದ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದ ಮೂಲಕ ಯಶಸ್ವಿ ಜೈಸ್ವಾಲ್ (Yashasvi Jaiswal) ಹಾಗೂ ಇಶಾನ್ ಕಿಶನ್ (Ishan Kishan) ಟೀಮ್ ಇಂಡಿಯಾ (Team India) ಪರ ಪಾದಾರ್ಪಣೆ ಮಾಡಿದ್ದಾರೆ. ಈ ಪಾದಾರ್ಪಣೆಯೊಂದಿಗೆ ಯಶಸ್ವಿ ಜೈಸ್ವಾಲ್ ವಿಶೇಷ ದಾಖಲೆಯೊಂದು ನಿರ್ಮಿಸಿರುವುದು ವಿಶೇಷ.
ಅಂದರೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತ್ಯಧಿಕ ಸರಾಸರಿಯಲ್ಲಿ ರನ್ ಕಲೆಹಾಕಿ ಭಾರತದ ಪರ ಪಾದಾರ್ಪಣೆ ಮಾಡಿದ ಮೂರನೇ ಆಟಗಾರ ಎಂಬ ದಾಖಲೆ ಇದೀಗ ಯಶಸ್ವಿ ಜೈಸ್ವಾಲ್ ಪಾಲಾಗಿದೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಟೀಮ್ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ.
ಕಾಂಬ್ಳಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 27 ಪಂದ್ಯಗಳಲ್ಲಿ 88.37 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾಗ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು. ಹಾಗೆಯೇ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 23 ಪಂದ್ಯಗಳಲ್ಲಿ 81.23 ರ ಸರಾಸರಿಯಲ್ಲಿ ರನ್ಗಳಿಸಿದ್ದ ವೇಳೆ ಪ್ರವೀಣ್ ಆಮ್ರೆ ಭಾರತದ ಪರ ಪಾದಾರ್ಪಣೆ ಮಾಡಿದ್ದರು.
ಇದೀಗ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 15 ಪಂದ್ಯಗಳಲ್ಲಿ 80.21 ರ ಸರಾಸರಿಯಲ್ಲಿ 1845 ರನ್ ಪೇರಿಸಿರುವ ಯಶಸ್ವಿ ಜೈಸ್ವಾಲ್ಗೆ ಭಾರತ ತಂಡದಲ್ಲಿ ಅವಕಾಶ ಸಿಕ್ಕಿದೆ. ಇದರೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತ್ಯಧಿಕ ಸರಾಸರಿಯಲ್ಲಿ ರನ್ ಕಲೆಹಾಕಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: Yashasvi Jaiswal: ರಾಹುಲ್ ದಾಖಲೆ ಉಡೀಸ್: ಯಶಸ್ವಿ ಜೈಸ್ವಾಲ್ ಸ್ಪೋಟಕ ಅರ್ಧಶತಕ
ಯಶಸ್ವಿ ಫಸ್ಟ್ ಕ್ಲಾಸ್:
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 15 ಪಂದ್ಯಗಳಲ್ಲಿ 26 ಇನಿಂಗ್ಸ್ ಆಡಿರುವ ಯಶಸ್ವಿ ಜೈಸ್ವಾಲ್ ಒಟ್ಟು 1845 ರನ್ ಕಲೆಹಾಕಿದ್ದಾರೆ. ಈ ವೇಳೆ 9 ಶತಕ ಹಾಗೂ 2 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಇನ್ನು 26 ಇನಿಂಗ್ಸ್ಗಳಲ್ಲಿ ಜೈಸ್ವಾಲ್ ಬ್ಯಾಟ್ನಿಂದ ಮೂಡಿಬಂದಿರುವುದು 227 ಫೋರ್ಗಳು ಹಾಗೂ 24 ಸಿಕ್ಸ್ಗಳು. ಅಂದರೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸ್ಪೋಟಕ ಬ್ಯಾಟರ್ ಆಗಿ ಗುರುತಿಸಿಕೊಂಡಿರುವ ಯಶಸ್ವಿ ಜೈಸ್ವಾಲ್ ಟೀಮ್ ಇಂಡಿಯಾ ಪರ ಅಬ್ಬರಿಸಿದರೂ ಅಚ್ಚರಿಪಡಬೇಕಿಲ್ಲ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೀಗಿದೆ:
ರೋಹಿತ್ ಶರ್ಮಾ (ನಾಯಕ) , ಯಶಸ್ವಿ ಜೈಸ್ವಾಲ್ , ಶುಭ್ಮನ್ ಗಿಲ್ , ವಿರಾಟ್ ಕೊಹ್ಲಿ , ಅಜಿಂಕ್ಯ ರಹಾನೆ , ರವೀಂದ್ರ ಜಡೇಜಾ , ಇಶಾನ್ ಕಿಶನ್ (ವಿಕೆಟ್ ಕೀಪರ್) , ರವಿಚಂದ್ರನ್ ಅಶ್ವಿನ್ , ಶಾರ್ದೂಲ್ ಠಾಕೂರ್ , ಜಯದೇವ್ ಉನಾದ್ಕತ್ , ಮೊಹಮ್ಮದ್ ಸಿರಾಜ್.