Updated on: Jul 12, 2023 | 9:22 PM
India vs West Indies: ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ತೇಜ್ನರೈನ್ ಚಂದ್ರಪಾಲ್ ವಿಕೆಟ್ ಕಬಳಿಸಿ ರವಿಚಂದ್ರನ್ ಅಶ್ವಿನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಪರ ತೇಜ್ನರೈನ್ ಚಂದ್ರಪಾಲ್ ಹಾಗೂ ಕ್ರೇಗ್ ಬ್ರಾಥ್ವೈಟ್ ಇನಿಂಗ್ಸ್ ಆರಂಭಿಸಿದ್ದರು. ಈ ಜೋಡಿ ಮೊದಲ ವಿಕೆಟ್ಗೆ 31 ರನ್ ಪೇರಿಸಿದ್ದ ವೇಳೆ ಅಶ್ವಿನ್ ಎಸೆತದಲ್ಲಿ ತೇಜ್ನರೈನ್ (12) ಕ್ಲೀನ್ ಬೌಲ್ಡ್ ಆದರು.
ಇದರೊಂದಿಗೆ ಕ್ರಿಕೆಟ್ ಇತಿಹಾಸದಲ್ಲಿ ತಂದೆ ಹಾಗೂ ಮಗನನ್ನು ಔಟ್ ಮಾಡಿದ ಭಾರತದ ಮೊದಲ ಬೌಲರ್ ಎಂಬ ವಿಶೇಷ ದಾಖಲೆಯೊಂದು ರವಿಚಂದ್ರನ್ ಅಶ್ವಿನ್ ಹೆಸರಿಗೆ ಸೇರ್ಪಡೆಯಾಯಿತು.
ಇದಕ್ಕೂ ಮುನ್ನ, ಅಂದರೆ 2011 ರಲ್ಲಿ ಶಿವನರೈನ್ ಚಂದ್ರಪಾಲ್ ಅವರನ್ನು ಅಶ್ವಿನ್ ಎಲ್ಬಿಡಬ್ಲ್ಯೂ ಮಾಡಿ ಔಟ್ ಮಾಡಿದ್ದರು. ಇದೀಗ ಶಿವನರೈನ್ ಚಂದ್ರಪಾಲ್ ಅವರ ಮಗ ತೇಜ್ನರೈನ್ ಅಶ್ವಿನ್ ಅವರ ಗೂಗ್ಲಿಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ.
ಈ ಮೂಲಕ ಶಿವನರೈನ್ ಚಂದ್ರಪಾಲ್ ಹಾಗೂ ತೇಜ್ನರೈನ್ ಚಂದ್ರಪಾಲ್ (ತಂದೆ-ಮಗ) ರನ್ನು ಔಟ್ ಮಾಡಿದ ವಿಶೇಷ ದಾಖಲೆಯೊಂದು ರವಿಚಂದ್ರನ್ ಅಶ್ವಿನ್ ಪಾಲಾಗಿದೆ.
ಇನ್ನು ಈ ಪಂದ್ಯದಲ್ಲಿ ಅಶ್ವಿನ್ 3 ವಿಕೆಟ್ ಕಬಳಿಸಿದರೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 700 ವಿಕೆಟ್ ಕಬಳಿಸಿದ ಮೂರನೇ ಬೌಲರ್ ಎನಿಸಿಕೊಳ್ಳಲಿದ್ದಾರೆ.